Last Updated:
ಗುರುನಂದನ್ ರಾವ್ ಅವರ ಸ್ಥಳೀಯ ಸಸ್ಯ ಆಧಾರಿತ ವಿಧಾನದಿಂದ ಬೆಂಗಳೂರು ಸರೋವರಗಳು ಪುನರುಜ್ಜೀವನ, ಆಮ್ಲಜನಕ ಮಟ್ಟ 86 ರಷ್ಟು ಏರಿಕೆ, 30 ಕ್ಕೂ ಹೆಚ್ಚು ಕೊಳಗಳು ಶುದ್ಧೀಕರಣಗೊಂಡವು
ಬೆಂಗಳೂರು: ಅಭಿವೃದ್ಧಿಯ ಭರಾಟೆಯಲ್ಲಿ ಉಸಿರುಗಟ್ಟುತ್ತಿದ್ದ ಬೆಂಗಳೂರಿನ (Bengaluru) ಸರೋವರಗಳು (Lakes) ಇದೀಗ ಮತ್ತೆ ಮೈಕೊಡವಿ ಏಳುತ್ತಿವೆ. ಲಾಲ್‍ಬಾಗ್ (Lalbagh) ನಂತಹ ಐತಿಹಾಸಿಕ ಜಲಮೂಲಗಳು ಕಲುಷಿತಗೊಂಡು ಸಾಯುವ ಹಂತದಲ್ಲಿದ್ದಾಗ, ಮೆಕ್ಯಾನಿಕಲ್ ಎಂಜಿನಿಯರ್ ಗುರುನಂದನ್ ರಾವ್ (Gurunandan Rao) ಕೈಗೊಂಡ ಒಂದು ಸಣ್ಣ ಪ್ರಯೋಗ ಇಂದು ಇಡೀ ನಗರಕ್ಕೆ ಹೊಸ ಭರವಸೆಯನ್ನು ನೀಡಿದೆ.
ಸಾಮಾನ್ಯವಾಗಿ ಸರೋವರ ಶುದ್ಧೀಕರಣ ಎಂದರೆ ದುಬಾರಿ ಯಂತ್ರಗಳು ಅಥವಾ ಆಮದು ಮಾಡಿಕೊಂಡ ತಂತ್ರಜ್ಞಾನ ಎಂದು ಭಾವಿಸಿದ್ದ ಕಾಲವದು. ಆದರೆ, ಗುರುನಂದನ್ ರಾವ್ ಅವರು ಅಂತಹ ಯಾವುದೇ ಹೈಟೆಕ್ ಮೊರೆ ಹೋಗದೆ, ಪ್ರಕೃತಿಯನ್ನೇ ಅಸ್ತ್ರವಾಗಿ ಬಳಸಿದರು. ಅವರು ಆಯ್ಕೆ ಮಾಡಿಕೊಂಡಿದ್ದು ಸ್ಥಳೀಯ ಜಲಸಸ್ಯಗಳಾದ ಕೊಲೊಕಾಸಿಯಾ (ಪತ್ರಾ ಎಲೆಗಳು). ಈ ಸಸ್ಯಗಳು ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ನೈಸರ್ಗಿಕವಾಗಿ ಹೀರಿಕೊಂಡು, ನೀರನ್ನು ಶುದ್ಧೀಕರಿಸುವ ಅದ್ಭುತ ಶಕ್ತಿಯನ್ನು ಹೊಂದಿವೆ ಎಂದು ದಿ ಬೆಟ್ಟರ್ ಇಂಡಿಯಾ ವೆಬ್‍ಸೈಟ್ ವರದಿ ಮಾಡಿದೆ.
ಕೇವಲ ಸಸ್ಯಗಳನ್ನು ನೆಡುವುದಕ್ಕೆ ಮಾತ್ರ ಸೀಮಿತವಾಗದೆ, ಅವರು ಸರಳವಾದ ವಾಯುವರ್ಧಕಗಳನ್ನು ಬಳಸಿದರು. ಇದರ ಫಲಿತಾಂಶ ಅಚ್ಚರಿ ಮೂಡಿಸುವಂತಿತ್ತು. ನೀರಿನಲ್ಲಿನ ಆಮ್ಲಜನಕದ ಮಟ್ಟವು ಕೇವಲ ಕೆಲವೇ ದಿನಗಳಲ್ಲಿ ಶೇಕಡಾ 86 ರಷ್ಟು ಜಿಗಿತ ಕಂಡಿತು. ಸಾಯುತ್ತಿರುವಂತೆ ಕಾಣುತ್ತಿದ್ದ ಸರೋವರಗಳು ಮತ್ತೆ ಜೀವಕಳೆ ಪಡೆದು ಉಸಿರಾಡಲು ಪ್ರಾರಂಭಿಸಿದವು.
Bangalore [Bangalore],Bangalore,Karnataka
Jun 12, 2026 12:35 PM IST













