Last Updated:
ಪ್ರಧಾನಿ ನರೇಂದ್ರ ಮೋದಿ ಇನ್ಸ್ಟಾಗ್ರಾಮ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಗುರುವಾರ ತಡರಾತ್ರಿ ಅವರು ಪೋಸ್ಟ್ ಮಾಡಿದ ಆ ಒಂದು ರೀಲ್ ಕೇವಲ 24 ಗಂಟೆಗಳಲ್ಲಿ 306 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅಲ್ಲದೇ ಫಾಲೋವರ್ಸ್ಗಳನ್ನು ಏರಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಒಂದೇ ರಾತ್ರಿಯಲ್ಲಿ ರೆಕಾರ್ಡ್ ಬ್ರೇಕ್ (Record Break) ಮಾಡಿದ್ದಾರೆ. ಮೋದಿ ಅವರು ರಾತ್ರೋರಾತ್ರಿ ಒಂದು ವಿಡಿಯೋ (Video) ಹಂಚಿಕೊಂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಬೃಹತ್ ಪ್ರತಿಕ್ರಿಯೆಗೆ ಕಾರಣವಾಗಿದೆ. ಗುರುವಾರ ರಾತ್ರಿ ಹಂಚಿಕೊಂಡ ಸೆಲ್ಫಿ ವಿಡಿಯೋ ತುಂಬಾ ವೈರಲ್ ಆಗಿದ್ದು, ಒಂದೇ ರಾತ್ರಿಯಲ್ಲಿ 11 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿದೆ. ಇದು ರೆಕಾರ್ಡ್ ಬ್ರೇಕಿಂಗ್ ಸಾಧನೆಯಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಸುಧಾರಣೆಗಳ ಬಗ್ಗೆ ದೇಶದ ಯುವಕರು ತೋರಿರುವ ಕಾಳಜಿ ಮತ್ತು ಪ್ರತಿಭಟನೆಗಳ ನಡುವೆ ಪ್ರಧಾನಿ ಮೋದಿ ಅವರು ಯುವ ಜನತೆಯೊಂದಿಗೆ ನೇರ ಸಂವಾದ ನಡೆಸಿದ್ದರು. ಸೆಲ್ಫಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಇದೀಗ ಅದು ದಾಖಲೆ ಬರೆದಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಅಕ್ರಮ ಸಂಬಂಧ ಗುರುವಾಡ ತಡರಾತ್ರಿ ಒಂದು ಸೆಲ್ಫಿ ವಿಡಿಯೋ ಮಾಡಿ ಯುವಜನತೆಗೆ ಒಂದು ಮೆಸೇಜ್ ನೀಡಿದ್ದರು. ತಡರಾತ್ರಿ ಹಂಚಿಕೊಂಡ ಮೊದಲ ವಿಡಿಯೋವನ್ನು ಲಕ್ಷಾಂತರ ಯುವಕರು ವೀಕ್ಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಎರಡನೇ ವಿಡಿಯೋದಲ್ಲಿ ಪ್ರಧಾನಿ ‘ಥ್ಯಾಂಕ್ ಯೂ ಫ್ರೆಂಡ್ಸ್’ ಎಂದು ಧನ್ಯವಾದ ತಿಳಿಸಿದ್ದಾರೆ.
ವಿಡಿಯೋದಲ್ಲಿ ಪ್ರಧಾನಿ ಮೋದಿ,‘ಪೇಪರ್ ಸೋರಿಕೆ ದಂಧೆಯ ವಿರುದ್ಧ ಸರ್ಕಾರ ತೆಗೆದುಕೊಳ್ಳಲಿರುವ ಕಠಿಣ ಕ್ರಮಗಳಿಗೆ ದೇಶದ ಯುವ ಪೀಳಿಗೆ ತೋರಿರುವ ಬೆಂಬಲವೇ ನಮಗೆ ದೊಡ್ಡ ಶಕ್ತಿ. ಯುವಕರ ಅಭಿಪ್ರಾಯಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ’ ಎಂದಿದ್ದಾರೆ. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮುಂದುವರಿಸುವಲ್ಲಿ ಯುವ ಜನತೆಯ ನಿರಂತರ ಸಂವಾದ ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ತಡರಾತ್ರಿ ಹಂಚಿಕೊಂಡ ವಿಡಿಯೋ ಮೂಲಕ ಯುವ ಸಮುದಾಯದೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಯಿತು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋಗಳು ವೈರಲ್ ಆದ ನಂತರ ಪ್ರಧಾನಿ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಗೆ ಒಂದೇ ರಾತ್ರಿಯಲ್ಲಿ 11 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿದೆ. ಇದು ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯಲ್ಲಿ ದೊಡ್ಡ ದಾಖಲೆಯಾಗಿದೆ. ಯುವಕರು ಹಂಚಿಕೊಂಡ ಸಲಹೆಗಳು ಮತ್ತು ಪ್ರಮುಖ ಅಭಿಪ್ರಾಯಗಳನ್ನು ಗಮನಿಸುತ್ತೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ನೀಟ್ ಪತ್ರಿಕೆ ಸೋರಿಕೆ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಹೊಸ ತಿದ್ದುಪಡಿ ಮಸೂದೆಯ ಮೂಲಕ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ₹10 ಕೋಟಿ ದಂಡ ವಿಧಿಸುವಂತೆ ನಿಯಮ ತಂದಿದೆ. ತ್ವರಿತ ನ್ಯಾಯಾಲಯಗಳ ಮೂಲಕ ತ್ವರಿತ ತೀರ್ಪು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಯೋಜನೆಯಿದೆ.
ಪ್ರಧಾನಿ ಮೋದಿ ಅವರ ಈ ವಿಡಿಯೋಗಳು ಯುವಕರ ನಡುವೆ ತುಂಬಾ ಜನಪ್ರಿಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೆ ಯುವ ಜನತೆಯ ಬೆಂಬಲ ಸಿಕ್ಕಿರುವುದು ಸರ್ಕಾರಕ್ಕೆ ದೊಡ್ಡ ಶಕ್ತಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಘಟನೆ ಪ್ರಧಾನಿ ಮೋದಿ ಅವರು ಯುವಕರೊಂದಿಗೆ ನೇರ ಸಂವಾದ ನಡೆಸುವುದರ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಯುವಕರ ಧ್ವನಿಯನ್ನು ಗಂಭೀರವಾಗಿ ಪರಿಗಣಿಸುವುದು ಸರ್ಕಾರದ ನೀತಿಯಾಗಿದೆ ಎಂಬ ಸಂದೇಶವೂ ಇದರ ಮೂಲಕ ಹೊರಹೊಮ್ಮಿದೆ. ಪ್ರಧಾನಿ ಮೋದಿ ಅವರ ಈ ಕ್ರಮವು ದೇಶದ ಯುವ ಜನತೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಗಳು ನಡೆಯುವ ನಿರೀಕ್ಷೆ ಇದೆ.














