Last Updated:
ಲಡಾಖ್ನ ದಕ್ಷಿಣ ಪ್ಯಾಂಗೋಂಗ್ ಸರೋವರದ ಬಳಿ ಭಾರತದ ಗಡಿಭಾಗ ಪ್ರವೇಶ ಮಾಡಿರುವ ಚೀನಾದ ಪಿಎಲ್ಎ ಸೈನಿಕನನ್ನು ಭಾರತೀಯ ಸೇನೆ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದೆ.
ನವದೆಹಲಿ(ಜ. 09): ಕಳೆದ ವರ್ಷ ಭಾರತ ಮತ್ತು ಚೀನಾ ಸೇನಾಪಡೆಗಳ ಹಲವು ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಲಡಾಖ್ನ ಪಾಂಗಾಂಗ್ ಸರೋವರ ಬಳಿ ಚೀನೀ ಸೈನಿಕನೊಬ್ಬನನ್ನು ಭಾರತೀಯ ಸೇನೆ ಸೆರೆ ಹಿಡಿದಿರುವುದು ತಿಳಿದುಬಂದಿದೆ. ಲಡಾಖ್ನ ಭಾರತೀಯ ಭಾಗದ ಎಲ್ಎಸಿಯೊಳಗೆ ಪಿಎಲ್ಎ ಸೈನಿಕ ಅತಿಕ್ರಮ ಪ್ರವೇಶ ಮಾಡಿರುವುದು ಕಂಡು ಬಂದಿತು. ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತ ಭಾರತದ ಗಡಿಭಾಗದೊಳಗೆ ಯಾಕೆ ಪ್ರವೇಶಿಸಿದ ಎಂಬುದನ್ನು ವಿಚಾರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ನಿನ್ನೆ ಶುಕ್ರವಾರ ಬೆಳಗ್ಗೆ ಈ ಬೆಳವಣಿಗೆ ಆಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲೂ ಒಬ್ಬ ಚೀನೀ ಸೈನಿಕ ಭಾರತದೊಳಗೆ ಪ್ರವೇಶ ಮಾಡಿ ಬಂಧಿಯಾಗಿದ್ದ. ಪೂರ್ವ ಲಡಾಖ್ನ ಡೆಮ್ಚೋಕ್ ಸೆಕ್ಟರ್ನಲ್ಲಿ ಆತನನ್ನ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆತ ದಾರಿ ತಪ್ಪಿ ಆಕಸ್ಮಿಕವಾಗಿ ಭಾರತ ಪ್ರವೇಶ ಮಾಡಿದ್ದು ಖಚಿತಗೊಂಡ ನಂತರ ಬಿಟ್ಟು ಕಳುಹಿಸಲಾಗಿತ್ತು.
ಕಳೆದ ವರ್ಷ ಕೊರೋನಾ ಸಂಕಷ್ಟ ಬಂದ ನಂತರ ಚೀನಾದ ಸೇನಾಪಡೆಗಳು ಲಡಾಖ್ನ ಗಡಿಭಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದವು. ಗಸ್ತು ತಿರುಗುವ ನೆವದಲ್ಲಿ ಭಾರತದ ಭೂಭಾಗವನ್ನು ಚೀನೀ ಸೈನಿಕರು ಅತಿಕ್ರಮಿಸಿಕೊಂಡಿದ್ದರು. ಭಾರತ ಮತ್ತು ಚೀನಾ ಮಧ್ಯೆ ವಾಸ್ತವ ಗಡಿನಿಯಂತ್ರಣ ರೇಖೆ ಇನ್ನೂ ಅಂತಿಮಗೊಳ್ಳದೇ ಇರುವುದರಿಂದ ಚೀನೀಯರಿಗೆ ಅತಿಕ್ರಮಣ ಸುಲಭ ಮಾಡಿತ್ತು. ಇವರ ಅತಿಕ್ರಮಣವನ್ನು ಭಾರತೀಯ ಸೈನಕರು ಪ್ರತಿರೋಧಿಸಿದ ಬಳಿಕ ಲಡಾಖ್ನ ಹಲವು ಕಡೆಯ ಗಡಿಭಾಗದಲ್ಲಿ ಎರಡೂ ಕಡೆಯ ಸೈನಿಕರ ಮಧ್ಯೆ ಸಣ್ಣಪುಟ್ಟ ಸಂಘರ್ಷಗಳಾದವು. ಅಂತಿಮವಾಗಿ ಗಾಲ್ವನ್ ಕಣಿವೆ ಬಳಿ ಚೀನೀ ಸೈನಿಕರು ದೊಡ್ಡ ಮಟ್ಟದಲ್ಲಿ ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡಿದರು. ಈ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಬಲಿಯಾದರು. ಚೀನೀ ಸೈನಿಕರೂ ಹತ್ಯೆಯಾಗಿದ್ದು ತಿಳಿದುಬಂದಿದೆ.
ಆಗಿನಿಂದಲೂ ಲಡಾಖ್ನ ಗಡಿಭಾಗದಲ್ಲಿ ಪ್ರಕ್ಷುಬ್ದ ವಾತಾವರಣ ಇದೆ. ಪರಿಸ್ಥಿತಿ ತಿಳಿಬೊಳಿಸಲು ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಸಂಘರ್ಷದ ಸ್ಥಳದಿಂದ ಸೇನಾ ಪಡೆಗಳನ್ನ ಹಿಂಪಡೆಯಲು ಎರಡೂ ಸೇನೆಗಳು ನಿರ್ಧರಿಸಿವೆ. ಆದರೆ, ಚೀನೀ ಸೇನೆ ಸಂಪೂರ್ಣವಾಗಿ ಕಾಲ್ತೆಗೆದಿಲ್ಲ.













