Last Updated:
Kangana Ranaut: ಕಂಗನಾ ರನೌತ್ ಅವರ ಹೇಳಿಕೆಯ ಪ್ರಕಾರ, 26/11 ದಾಳಿ ನಡೆದ ರಾತ್ರಿ ಅವರು ನಟಿ ಶಹಾನಾ ಗೋಸ್ವಾಮಿ ಅವರ ಹೊಸ ಮನೆಯಲ್ಲಿ ಸ್ನೇಹಿತರು ಹಾಗೂ ಕೆಲ ಕಲಾವಿದರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಭಾರತದ ಇತಿಹಾಸದಲ್ಲಿ ಅಳಿಸಲಾಗದ ಕಹಿ ನೆನಪುಗಳಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿ (Mumbai Terror Attack) ಪ್ರಮುಖ ಸ್ಥಾನವನ್ನು ಹೊಂದಿದೆ. 2008ರ ನವೆಂಬರ್ 26ರಂದು ನಡೆದ ಈ ದಾಳಿ ಕೇವಲ ಮುಂಬೈ ನಗರವನ್ನಷ್ಟೇ ಅಲ್ಲ, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಹಲವು ದಿನಗಳ ಕಾಲ ನಡೆದ ಉಗ್ರರ ಅಟ್ಟಹಾಸ, ನೂರಾರು ಜನರ ಜೀವಹಾನಿ ಹಾಗೂ ದೇಶದ ಭದ್ರತಾ ವ್ಯವಸ್ಥೆಗೆ ಸವಾಲೊಡ್ಡಿದ ಘಟನೆ ಇಂದಿಗೂ ಜನರ ಮನಸ್ಸಿನಲ್ಲಿ ನೆನಪಾಗಿ ಉಳಿದಿದೆ.
ಇದೀಗ ಇದೇ ದುರಂತದ ಹಿನ್ನೆಲೆಯಲ್ಲಿರುವ ಆದರೆ ಹೆಚ್ಚು ಬೆಳಕಿಗೆ ಬಾರದ ಕೆಲವು ಮಾನವೀಯ ಕಥೆಗಳನ್ನು ಆಧರಿಸಿದ ಭಾರತ್ ಭಾಗ್ಯ ವಿಧಾತ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಕಂಗನಾ ರನೌತ್ (Kangana Ranaut) 26/11 ದಾಳಿಯ ಸಮಯದಲ್ಲಿ ತಾವು ಅನುಭವಿಸಿದ ಆತಂಕದ ಕ್ಷಣಗಳನ್ನು ಹಂಚಿಕೊಂಡಿದ್ದು, ಆ ಘಟನೆಗಳ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದ್ದಾರೆ.
ಕಂಗನಾ ರನೌತ್ ಅವರ ಹೇಳಿಕೆಯ ಪ್ರಕಾರ, 26/11 ದಾಳಿ ನಡೆದ ರಾತ್ರಿ ಅವರು ನಟಿ ಶಹಾನಾ ಗೋಸ್ವಾಮಿ ಅವರ ಹೊಸ ಮನೆಯಲ್ಲಿ ಸ್ನೇಹಿತರು ಹಾಗೂ ಕೆಲ ಕಲಾವಿದರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಂದು ವಾತಾವರಣ ಸಂಪೂರ್ಣ ಸಂತೋಷ ಮತ್ತು ಸಂಭ್ರಮದಿಂದ ಕೂಡಿತ್ತು.
ಆದರೆ ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಎಲ್ಲರಿಗೂ ಅಚ್ಚರಿ ಮೂಡಿಸುವ ರೀತಿಯಲ್ಲಿ ನಿರ್ದೇಶಕ ಮಹೇಶ್ ಭಟ್ ಅಲ್ಲಿ ಆಗಮಿಸಿ ತಕ್ಷಣ ಟಿವಿ ಆನ್ ಮಾಡಲು ಸೂಚಿಸಿದ್ದಾರಂತೆ. ಆರಂಭದಲ್ಲಿ ಏನಾಗಿದೆ ಎಂಬುದು ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ದೃಶ್ಯಗಳನ್ನು ನೋಡಿದ ನಂತರ ಪರಿಸ್ಥಿತಿಯ ಗಂಭೀರತೆ ಎಲ್ಲರಿಗೂ ತಿಳಿಯತೊಡಗಿತು.
ಕಂಗನಾ ಹೇಳುವಂತೆ, ಆ ರಾತ್ರಿ ಮಹೇಶ್ ಭಟ್ ನಿರಂತರವಾಗಿ ಸುದ್ದಿಗಳನ್ನು ಗಮನಿಸುತ್ತಿದ್ದರು. ಟಿವಿಯಲ್ಲಿ ಮುಂಬೈನ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ದಾಳಿಯ ದೃಶ್ಯಗಳು ಕಾಣಿಸಿಕೊಳ್ಳುತ್ತಿದ್ದಂತೆ ಪಾರ್ಟಿಯಲ್ಲಿದ್ದವರು ಆತಂಕಕ್ಕೊಳಗಾದರು.
ಸುಮಾರು 20ರಿಂದ 25 ಮಂದಿ ಆ ಮನೆಯಲ್ಲಿ ಉಳಿದುಕೊಂಡಿದ್ದರೆಂದು ಕಂಗನಾ ನೆನಪಿಸಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಎಚ್ಚರಿಕೆ ಸಿಗದಿದ್ದರೆ, ದಾಳಿಯ ತೀವ್ರತೆಯ ಬಗ್ಗೆ ತಮಗೆ ಇನ್ನೂ ತಡವಾಗಿ ತಿಳಿಯುತ್ತಿತ್ತು ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ 26/11 ದಾಳಿಯ ಬಗ್ಗೆ ಮಾತನಾಡುವಾಗ ಪೊಲೀಸ್ ಅಧಿಕಾರಿಗಳು, ಭದ್ರತಾ ಪಡೆಗಳು ಮತ್ತು ದಾಳಿಯಲ್ಲಿ ಬಲಿಯಾದವರ ಕಥೆಗಳು ಹೆಚ್ಚು ಚರ್ಚೆಯಾಗುತ್ತವೆ. ಆದರೆ ಭಾರತ್ ಭಾಗ್ಯ ವಿಧಾತ ಚಿತ್ರವು ಹೆಚ್ಚು ಗಮನಕ್ಕೆ ಬಾರದ ಮತ್ತೊಂದು ವೀರಗಾಥೆಯನ್ನು ತೆರೆದಿಡಲಿದೆ.
ಈ ಚಿತ್ರದಲ್ಲಿ ಕಂಗನಾ ರನೌತ್ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಾಳಿಯ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಗಳು ಹಾಗೂ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೋಗಿಗಳ ರಕ್ಷಣೆಗೆ ಮುಂದಾದ ಕಥೆಯನ್ನು ಚಿತ್ರವು ಹೇಳಲಿದೆ.
26/11 ದಾಳಿಯ ಸಂದರ್ಭದಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ರಕ್ಷಿಸುವುದು, ಚಿಕಿತ್ಸೆ ನೀಡುವುದು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸುವುದು ವೈದ್ಯರು ಮತ್ತು ನರ್ಸ್‌ಗಳಿಗೆ ದೊಡ್ಡ ಸವಾಲಾಗಿತ್ತು.
ಚಿತ್ರದ ಕಥೆ ಓದಿದ ವೇಳೆ ತಾವು ಭಾವುಕರಾಗಿದ್ದಾಗಿ ಕಂಗನಾ ಒಪ್ಪಿಕೊಂಡಿದ್ದಾರೆ. ನಿಜ ಜೀವನದ ವೀರರು ಬಹುಮಟ್ಟಿಗೆ ಬೆಳಕಿಗೆ ಬರುವುದಿಲ್ಲ. ಅವರು ಕ್ಯಾಮೆರಾಗಳಿಂದ ಮತ್ತು ಪ್ರಚಾರದಿಂದ ದೂರವಿದ್ದು, ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆ ಎಂಬುದನ್ನು ಈ ಸಿನಿಮಾ ಮತ್ತೊಮ್ಮೆ ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.
Bangalore [Bangalore],Bangalore,Karnataka













