Last Updated:
ಪಿವಿ ಸಿಂಧು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂಗತಿಯನ್ನು ಉಲ್ಲೇಖಿಸಿ, ಸಿಂಧು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಾಸ್ಯಮಯ ಕಾಮೆಂಟ್ ಅನ್ನು ಹಂಚಿಕೊಂಡಿದ್ದಾರೆ.
2026ರ ಐಪಿಎಲ್ (IPL 2026) ಋತುವಿನಲ್ಲಿ ಗುಜರಾತ್ ಟೈಟನ್ಸ್ (Gujarat Titans) ಮಣಿಸುವ ಮೂಲಕ ಆರ್ಸಿಬಿ (RCB) ಸತತ ಎರಡನೇ ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿತು. ಗುಜರಾತ್ ಟೈಟನ್ಸ್ ವಿರುದ್ಧ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆರ್ಸಿಬಿ 5 ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿತು. ಈ ಐತಿಹಾಸಿಕ ವಿಜಯದ ನಂತರ, ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu), ಸಾಮಾಜಿಕ ಮಾಧ್ಯಮದಲ್ಲಿ ಆರ್ಸಿಬಿ ತಂಡಕ್ಕೆ ವಿಭಿನ್ನವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪಿವಿ ಸಿಂಧು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂಗತಿಯನ್ನು ಉಲ್ಲೇಖಿಸಿ, ಸಿಂಧು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಾಸ್ಯಮಯ ಕಾಮೆಂಟ್ ಅನ್ನು ಹಂಚಿಕೊಂಡಿದ್ದಾರೆ. “ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ, ನಾನು ನಿಮ್ಮ ಲಕ್ಕಿ ಚಾರ್ಮ್ ಎಂದು ಹೇಳುತ್ತಿಲ್ಲ, ಆದರೆ ನಾನು ಬೆಂಗಳೂರಿಗೆ ಸ್ಥಳಾಂತರಗೊಂಡಾಗಿನಿಂದ, ನೀವು ಪ್ರತಿ ವರ್ಷವೂ ಟ್ರೋಫಿಯನ್ನು ಗೆಲ್ಲುತ್ತಿದ್ದೀರಿ. ಬೇಕಾದರೆ ಲೆಕ್ಕಾ ಮಾಡಿ!” ಅವರು ನಗುವ ಎಮೋಜಿಗಳೊಂದಿಗೆ ಪೋಸ್ಟ್ ಮಾಡಿದ್ದಾರೆ.
“ಅದ್ಭುತ ಆರ್ಸಿಬಿ ತಂಡಕ್ಕೆ , ಆಟಗಾರರು, ಸಿಬ್ಬಂದಿ, ಮ್ಯಾನೇಜ್ಮೆಂಟ್ ಮತ್ತು ಎಲ್ಲಾ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಫ್ರಾಂಚೈಸಿ ವರ್ಷಗಳಲ್ಲಿ ಹಲವು ನೋವು, ಹಾರ್ಟ್ ಬ್ರೆಕ್ಗಳನ್ನ ಅನುಭವಿಸಿದೆ. ಆದರೂ ಈ ತಂಡ ನಂಬಿಕೆ ಮತ್ತು ಪ್ರೀತಿಗೆ ಸಾಕ್ಷಿಯಾಗಿದೆ. ಅಂತಹ ತಂಡವು ಸತತ ಎರಡು ವರ್ಷಗಳಲ್ಲಿ ಚಾಂಪಿಯನ್ ಆಗಿ ಎತ್ತರಕ್ಕೆ ನಿಂತಿರುವುದನ್ನು ನೋಡುವುದು ನಿಜಕ್ಕೂ ವಿಶೇಷವಾಗಿದೆ” ಎಂದು ಪಿವಿ ಸಿಂಧು ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಹೈದರಾಬಾದ್ ಮೂಲದ ಪಿವಿ ಸಿಂಧು ವಾಸ್ತವವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ದೊಡ್ಡ ಅಭಿಮಾನಿ. ಐಪಿಎಲ್ 2026ರ ಫೈನಲ್ ಪಂದ್ಯ ಆರ್ಸಿಬಿ ಮತ್ತು ಎಸ್ಆರ್ಹೆಚ್ ನಡುವೆ ನಡೆದಿದ್ದರೆ ಅದು ಅದ್ಭುತವಾಗುತ್ತಿತ್ತು ಎಂದು ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. “ಸನ್ರೈಸರ್ಸ್ ಹೈದರಾಬಾದ್ ಮತ್ತು ಆರ್ಸಿಬಿ ನಡುವಿನ ಫೈನಲ್ ಪಂದ್ಯವು ‘ಕನಸಿನ ಪಂದ್ಯ’ವಾಗುತ್ತಿತ್ತು. ಈ ಎರಡು ತಂಡಗಳ ನಡುವಿನ ಸ್ಪರ್ಧೆಯು ನಮ್ಮನ್ನು ಭಾವನಾತ್ಮಕ ರೋಲರ್ಕೋಸ್ಟರ್ನಲ್ಲಿ ಕರೆದೊಯ್ಯುತ್ತಿತ್ತು” ಎಂದು ಅವರು ಹೇಳಿಕೊಂಡಿದ್ದಾರೆ.
ಕೊನೆಗೆ, ಸಿಂಧು ಆರ್ಸಿಬಿ ಸಹ-ಮಾಲೀಕ ಮತ್ತು ಅವರ ಆಪ್ತ ಸ್ನೇಹಿತೆ ಅನನ್ಯ ಬಿರ್ಲಾ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. “ನನ್ನ ಆತ್ಮೀಯ ಸ್ನೇಹಿತೆ ಅನನ್ಯಾ ಬಿರ್ಲಾ ಮತ್ತು ಅವರ ಕುಟುಂಬಕ್ಕೆ ಅಭಿನಂದನೆಗಳು. ತಂಡದ ಮಾಲೀಕತ್ವವನ್ನು ವಹಿಸಿಕೊಂಡ ತಕ್ಷಣ ಚಾಂಪಿಯನ್ಶಿಪ್ ಗೆದ್ದಿರುವುದು ನೈಜ ಯಶಸ್ಸು” ಎಂದು ಪಿವಿ ಸಿಂಧು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.













