Last Updated:
ಭಾರತ ಎ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 86 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 333 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಧ್ರವ್ ಜುರೆಲ್ ಹಾಗೂ ಶೇಕ್ ರಶೀದ್ ಕೂಡ ಅರ್ಧಶತಕ ಸಿಡಿಸಿ ಗಮನ ಸೆಳೆದರು.
ಶ್ರೀಲಂಕಾ ಎ ವಿರುದ್ಧದ (India A vs Sri Lanka A) ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ (132) (Sai Sudarshan) ಶತಕ ಬಾರಿಸಿ ಅಬ್ಬರಿಸಿದ್ದಾರೆ. ಮೊದಲ ದಿನದಾಟದ ಅಂತ್ಯದ ವೇಳೆಗೆ, ಭಾರತ ಎ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 86 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 333 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಧ್ರುವ್ ಜುರೆಲ್ ಹಾಗೂ ಶೇಕ್ ರಶೀದ್ ಕೂಡ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಆದರೆ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಗಾಯಕ್ವಾಡ್ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಆರಂಭಿಕರಾದ ಸಾಯಿ ಸುದರ್ಶನ್ ಮತ್ತು ಆಯುಷ್ ಪಾಂಡೆ (25) ಮೊದಲ ವಿಕೆಟ್ಗೆ 82 ರನ್ ಸೇರಿಸುವ ಮೂಲಕ ಅದ್ಭುತ ಆರಂಭ ನೀಡಿದರು. ದಿಲುನ್ ಸುದೀರಾ 25 ರನ್ಗಳಿಸಿದ್ದ ಆಯುಷ್ ಪಾಂಡೆಯನ್ನು ಔಟ್ ಮಾಡಿದರು. ಆದರೆ 3ನೇ ಕ್ರಮಾಂಕದಲ್ಲಿ ಬಂದ ಕನ್ನಡಿಗ ಪಡಿಕ್ಕಲ್ 7 ಎಸೆತಗಳಲ್ಲಿ 12 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಸಾಯಿ ಸುದರ್ಶನ್ ಜೊತೆಗೂಡಿದ ರುತುರಾಜ್ ಗಾಯಕ್ವಾಡ್ ಜೊತೆಗೆ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಇಬ್ಬರೂ ಎಚ್ಚರಿಕೆಯಿಂದ ಆಡಿದ್ದರಿಂದ ಸ್ಕೋರಿಂಗ್ ವೇಗ ತಗ್ಗಿತು. ಈ ಜೋಡಿ ಮೂರನೇ ವಿಕೆಟ್ಗೆ 90 ರನ್ ಸೇರಿಸಿದರು. ರುತುರಾಜ್ (22) ರವಿಂದುಗೆ ಎಲ್ಬಿಡಬ್ಲ್ಯೂ ಆಗಿ ಔಟ್ ಆದರು. ನಂತರ ಧ್ರುವ್ ಜುರೆಲ್ ಕ್ರೀಸ್ಗೆ ಬಂದರು. ಜುರೆಲ್ ಜೊತೆ 35 ರನ್ ಸೇರಿಸಿದರು. 175 ಎಸೆತಗಳಲ್ಲಿ 19 ಬೌಂಡರಿಗಳ ನೆರವಿನಿಂದ 132 ರನ್ಗಳಿಸಿ ಸುದರ್ಶನ್ ಚಮಿಕಾ ಗುಣಶೇಖರಗೆ ವಿಕೆಟ್ ಒಪ್ಪಿಸಿದರು.
ಶತಕದ ಜೊತೆಯಾಟ ನೀಡಿದ ಕ್ಯಾಪ್ಟನ್
ಸಾಯಿ ಸುದರ್ಶನ್ ವಿಕೆಟ್ ನಂತರ ನಾಯಕ ಧ್ರುವ್ ಜುರೆಲ್ (138 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 68 ರನ್) ಮತ್ತು ಯುವ ಪ್ರತಿಭೆ ಶೇಕ್ ರಶೀದ್ (92 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 53 ರನ್) ಮುರಿಯದ 5ನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಸೇರಿಸಿ ಮೈದಾನದಲ್ಲಿದ್ದಾರೆ.
ಶ್ರೀಲಂಕಾ ಎ ಬೌಲರ್ಗಳಲ್ಲಿ, ಸುದೀರಾ ಎರಡು ವಿಕೆಟ್ ಪಡೆದರೆ, ಚಮಿಕಾ ಗುಣಶೇಖರ ಮತ್ತು ರವಿಂದು ಫರ್ನಾಂಡೊ ತಲಾ ಒಂದು ವಿಕೆಟ್ ಪಡೆದರು.
ಈ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧದ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವೈಭವ್ ಸೂರ್ಯವಂಶಿ ಫೈನಲ್ನಲ್ಲಿ 29 ಎಸೆತಗಳಲ್ಲಿ 94 ರನ್ ಚಚ್ಚಿದ್ದರು. ಆ ಸರಣಿಯಲ್ಲಿ ತಿಲಕ್ ಭಾರತ ತಂಡವನ್ನ ಮುನ್ನಡೆಸಿದ್ದರು. ಇದೀಗ ಧ್ರುವ್ ಜುರೆಲ್ ಟೆಸ್ಟ್ ತಂಡದ ನಾಯಕನಾಗಿ ಆಡುತ್ತಿದ್ದಾರೆ.













