Last Updated:
ತ್ರಿಕೋನ ಸರಣಿಯ (Tri-Nation A-Series 2026) ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ‘ಎ’ ತಂಡವು ಭಾರತ ‘ಎ’ ತಂಡದ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ (Tri-Nation A-Series 2026) ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ‘ಎ’ ತಂಡವು ಭಾರತ ‘ಎ’ ತಂಡದ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿದೆ. ಮಳೆಯ ಕಾರಣದಿಂದಾಗಿ ಡೆಕ್ವರ್ತ್ ಲೂಯಿಸ್ ನಿಯಮದ (DLS Method) ಆಧಾರದ ಮೇಲೆ ಈ ಫಲಿತಾಂಶವನ್ನು ಪ್ರಕಟಿಸಲಾಯಿತು. ಭಾರತ ಎ ತಂಡ ನಿಗದಿತ 49 ಓವರ್ಗಳಲ್ಲಿ 349 ರನ್ಗಳನ್ನು ಗಳಿಸಿತ್ತು. ಚೇಸಿಂಗ್ ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು ಮೊಟಕುಗೊಳಿಸಲಾಗಿದೆ. ಅಫ್ಘಾನಿಸ್ತಾನಕ್ಕೆ 38 ಓವರ್ಗಳಲ್ಲಿ 294 ರನ್ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಆದರೆ ಮತ್ತೆ ಮಳೆ ಕಾರಣ ಪಂದ್ಯ ಸ್ಥಗಿತಗೊಂಡಿತು. ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಅಫ್ಘಾನಿಸ್ತಾನ ತಂಡವನ್ನ ವಿಜಯಿ ಎಂದು ಘೋಷಿಸಲಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡ ನಿಗದಿತ 49 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 349 ರನ್ಗಳ ಬೃಹತ್ ಮೊತ್ತ ಪೇರಿಸಿತು. ವೈಭವ್ ಸೂರ್ಯವಂಶಿ ಮತ್ತು ಪ್ರಭ್ಸಿಮ್ರನ್ ಸಿಂಗ್ ಮೊದಲ ವಿಕೆಟ್ಗೆ 74 ರನ್ಗಳ ಜೊತೆಯಾಟ ಹಂಚಿಕೊಂಡು ಭಾರತೀಯ ಇನ್ನಿಂಗ್ಸ್ಗೆ ಸ್ಫೋಟಕ ಆರಂಭ ನೀಡಿದರು. ವೈಭವ್ ಸೂರ್ಯವಂಶಿ ವಿಕೆಟ್ ಭಾರತಕ್ಕೆ ಮೊದಲ ಹಿನ್ನಡೆಯಾಯಿತು. ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಬೀಸಿದ ವೈಭವ್ ಸೂರ್ಯವಂಶಿ ಅರ್ಧಶತಕ ಗಳಿಸಲು ವಿಫಲರಾದರು. ಆದರೆ ಕೇವಲ 21 ಎಸೆತಗಳಲ್ಲಿ 44 ರನ್ ಗಳಿಸಿದರು.
ಆದರೆ ನಂತರ ಬಂದ ಪ್ರಿಯಾಂಶ್ ಆರ್ಯ 8 ರನ್ಗಳಿಗೆ ಔಟಾದರು. ಭಾರತ 12ನೇ ಓವರ್ನಲ್ಲಿ 100 ರನ್ಗಳ ಗಡಿ ದಾಟಿತು. ಪ್ರಭಸಿಮ್ರನ್ ಸಿಂಗ್ 39 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 84 ರನ್ ಗಳಿಸಿ 22 ನೇ ಓವರ್ನಲ್ಲಿ ಔಟ್ ಆದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರುತುರಾಜ್ ಗಾಯಕ್ವಾಡ್ 80 ಎಸೆತಗಳಲ್ಲಿ 66 ರನ್ಗಳಿಸಿ ಮಿಂಚಿದರು. ನಾಯಕ ತಿಲಕ್ ವರ್ಮಾ ಕೂಡ ಅರ್ಧಶತಕ ಗಳಿಸಿದರು. ತಿಲಕ್ 73 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 66 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಕೊನೆಯಲ್ಲಿ ಅಬ್ಬರಿಸಿದ ಸೂರ್ಯಾಂಶ್ ಶೆಡ್ಗೆ 27 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ಸಹಿತ 40 ರನ್ಗಳಿಸಿದರು. ಅನುಕುಲ್ ರಾಯ್ 8 ಎಸೆತಗಳಲ್ಲಿ ಅಜೇಯ 16 ರನ್ಗಳಿಸಿದರು.
ಅಫ್ಘಾನಿಸ್ತಾನದ ಪರ ಅಬ್ಧುಲ್ಲಾ ಅಹ್ಮದ್ಝಾಯ್ 68ಕ್ಕೆ5, ಫರ್ಮಾನುಲ್ಹಾ ಸಫಿ 3 ವಿಕೆಟ್ ಪಡೆದರೆ, ನಾಯಕ ಇಮ್ರಾನ್ ಮಿರ್ 1 ವಿಕೆಟ್ ಪಡೆದರು.
ಮಳೆಯ ಕಾರಣ ಪಂದ್ಯವನ್ನ 38 ಓವರ್ಗಳಲ್ಲಿ ಅಫ್ಘಾನಿಸ್ತಾನಕ್ಕೆ 294 ರನ್ಗಳನ್ನ ನಿಗದಿ ಮಾಡಲಾಗಿತ್ತು. ಈ ಗುರಿಯನ್ನ ಬೆನ್ನಟ್ಟಿದ ಅಫ್ಘಾನ್ ತಂಡ ಕೆಚ್ಚೆದೆಯ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ ಇಮ್ರಾನ್ ಮಿರ್ ಹಾಗೂ ಹಸನ್ ಇಸಾಖಿಲ್ 8 ಓವರ್ಗಳಲ್ಲಿ 63 ರನ್ ಸೇರಿಸಿದರು. ಹಸನ್ ಇಸಾಖಿಲ್ 29 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 34 ರನ್ಗಳಿಸಿ 9ನೇ ಓವರ್ನಲ್ಲಿ ಅರ್ಷದ್ ಖಾನ್ಗೆ ವಿಕೆಟ್ ಒಪ್ಪಿಸಿದರು. 10ನೇ ಓವರ್ನಲ್ಲಿ ಅನುಕುಲ್ ರಾಯ್ 3ನೇ ಕ್ರಮಾಂಕದಲ್ಲಿ ಬಂದ ಖಲೀದ್ ತನಿವಾಲ್(2) ವಿಕೆಟ್ ಪಡೆದು ಅಫ್ಘಾನ್ಗೆ ಶಾಕ್ ಕೊಟ್ಟರು.
ಆದರೆ ನಾಯಕ ಮಿರ್ ಹಾಗೂ ಬಹಿರ್ ಶಾ ಭಾರತದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದರು. ರನ್ರೇಟ್ಗೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಾ ಸಾಗಿದರು. ತಂಡದ ಮೊತ್ತ 25.5 ಓವರ್ಗಳಲ್ಲಿ 177/2 ಇದ್ದಾಗ ಮತ್ತೆ ಮಳೆ ಬಂದಿತು. ಮತ್ತೆ ಪಂದ್ಯ ಆರಂಭಕ್ಕೆ ಮಳೆ ಅವಕಾಶ ನೀಡಲಿಲ್ಲ. ಈಗಾಗಲೇ 20 ಓವರ್ಗಳ ಆಟ ಮುಗಿದಿದ್ದರಿಂದ ಡೆಕ್ವರ್ತ್ ನಿಯಮದನುಸಾರ ಅಫ್ಘಾನ್ 4 ರನ್ಗಳ ಮುನ್ನಡೆಯಲ್ಲಿತ್ತು. ಅಂಪೈರ್ಗಳು ಅಫ್ಘಾನ್ ವಿಜಯಿ ಎಂದು ಘೋಷಿಸಿದರು.
ಭಾರತದ ಪರ ಅರ್ಷದ್ ಖಾನ್ ಮತ್ತು ಅನುಕುಲ್ ರಾಯ್ ತಲಾ 1 ವಿಕೆಟ್ ಪಡೆದರು. ತ್ರಿಕೋನ ಸರಣಿಯಲ್ಲಿ ಭಾರತ ಹಾಗೂ ಅಫ್ಘಾನ್ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಂತಾಗಿದೆ. ಎರಡೂ ತಂಡಗಳು ತಲಾ 2 ಅಂಕಗಳನ್ನ ಹೊಂದಿದ್ದು ರನ್ರೇಟ್ ಆಧಾರದ ಮೇಲೆ ಅಫ್ಘಾನ್ ತಂಡ ಮುನ್ನಡೆ ಸಾಧಿಸಿ ಅಗ್ರಸ್ಥಾನ ಪಡೆದುಕೊಂಡಿದೆ. ಮುಂದಿನ ಪಂದ್ಯ ಅಫ್ಘಾನಿಸ್ತಾನ್ ಎ ಹಾಗೂ ಶ್ರೀಲಂಕಾ ಎ ನಡುವೆ ಶನಿವಾರ ನಡೆಯಲಿದೆ.













