Last Updated:
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಭಾನುವಾರ ಜಿಟಿ ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಮುಲ್ಲನ್‌ಪುರದ (ನ್ಯೂ ಚಂಡೀಗಢ) ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ IPL 2026ರ ಎರಡನೇ ಕ್ವಾಲಿಫೈಯರ್ (Qualifiers 2) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ (Gujarat Titans vs Rajasthan Royals) 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ಸ್ ವೈಭವ್ ಸೂರ್ಯವಂಶಿ (Vaibhav Sooryavanshi) ಸಿಡಿಸಿದ 96 ರನ್ಗಳ ನೆರವಿನಿಂದ 214 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. 215 ರನ್ಗಳ ಗುರಿಯನ್ನ ಗುಜರಾತ್ ತಂಡ ನಾಯಕ ಶುಭ್ಮನ್ ಗಿಲ್ (104) ಸಿಡಿಸಿದ ಶತಕದ ನೆರವಿನಿಂದ ಇನ್ನೂ 8 ಎಸೆತಗಳಿರುವಂತೆ ಲೀಲಾಜಾಲವಾಗಿ ಚೇಸ್ ಮಾಡಿತು. ಈ ಗೆಲುವಿನ ಮೂಲಕ 2 ಆವೃತ್ತಿಗಳ ಬಳಿಕ ಫೈನಲ್ ಪ್ರವೇಶಿಸಿದೆ. ಇದು ಗುಜರಾತ್ ಟೈಟನ್ಸ್ ತಂಡದ 3ನೇ ಫೈನಲ್ ಆಗಿದ್ದು. ಗಿಲ್ ಪಡೆ ಭಾನುವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿರುದ್ಧ ಫೈನಲ್ನಲ್ಲಿ ತಮ್ಮ 2ನೇ ಟ್ರೋಫಿಗಾಗಿ ಪೈಪೋಟಿ ನಡೆಯಲಿದೆ.
215 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಇನ್ಫಾರ್ಮ್ ಬ್ಯಾಟರ್ಗಳಾದ ಸಾಯಿ ಸುದರ್ಶನ್ ಹಾಗೂ ಶುಭ್ಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 167 ರನ್ಗಳ ಜೊತೆಯಾಟ ನಡೆಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲೇ ಈ ಜೋಡಿ ಗುಜರಾತ್ಗೆ ಗೆಲುವು ಖಚಿತಗೊಳಿಸಿತು.
ಸುಲಭ ಗೆಲುವಿನತ್ತಾ ಮುನ್ನಡೆಯುತ್ತಿದ್ದ ಗುಜರಾತ್ ಟೈಟನ್ಸ್ ತಂಡ ಆರಂಭಿಕರಿಬ್ಬರನ್ನ 15 ರನ್ಗಳ ಅಂತರದಲ್ಲಿ ಕಳೆದುಕೊಂಡಿತು. 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 58 ರನ್ಗಳಿಸಿದ್ದ ಸಾಯಿ ಸುದರ್ಶನ್ ಇಂದೂ ಕೂಡ ದುರಾದೃಷ್ಟಕರ ರೀತಿಯಲ್ಲಿ ಹಿಟ್ ವಿಕೆಟ್ ಆದರು. ಆರ್ಸಿಬಿ ವಿರುದ್ಧವೂ ಸುದರ್ಶನ್ ಇದೇ ರೀತಿ ಚೆಂಡನ್ನ ಬೌಂಡರಿಗೆ ಸಿಡಿಸಿದರಾದರೂ, ಬ್ಯಾಟರ್ ಕೈಜಾರಿ ಸ್ಟಂಪ್ಗೆ ಬಿದ್ದು ಹಿಟ್ ವಿಕೆಟ್ ಆಗಿದ್ದರು. ಇಂದೂ ಕೂಡ ಅದೇ ರೀತಿ ಔಟ್ ಆಗಿ ನಿರಾಶೆ ಅನುಭವಿಸಿದರು.
ಸುದರ್ಶನ್ 13ನೇ ಓವರ್ನಲ್ಲಿ ಔಟ್ ಆದರೆ, ಗಿಲ್ 15ನೇ ಓವರ್ನ ಕೊನೆಯ ಎಸೆತದಲ್ಲಿ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ವಾಷಿಂಗ್ಟನ್ ಸುಂದರ್ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 16 ರನ್ಗಳಿಸಿ ನಾಂಡ್ರೆ ಬರ್ಗರ್ ಬೌಲಿಂಗ್ನಲ್ಲಿ ಫೆರೇರಾಗೆ ಕ್ಯಾಚ್ ನೀಡಿ ಔಟ್ ಆದರು. ಜೋಸ್ ಬಟ್ಲರ್ 9 ಎಸೆತಗಳಲ್ಲಿ ಅಜೇಯ 9 ರನ್ ಹಾಗೂ ತೆವಾಟಿಯಾ ಅಜೇಯ 9 ಎಸೆತಗಳಲ್ಲಿ 17 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ಬ್ರಿಜೇಶ್ ಶರ್ಮಾ ಹಾಗೂ ನಾಂಡ್ರೆ ಬರ್ಗರ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 214 ರನ್ಗಳಿಸಿತ್ತು. ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ಗಳ ಸಹಿತ 96 ರನ್ಗಳಿಸಿ ಟಾಪ್ ಸ್ಕೋರರ್ ಆಗಿದ್ದರು. ಜಡೇಜಾ 35 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 45, ಡೊನೊವನ್ ಫೆರೇರಾ 11 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 38 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿತ್ತು.
May 29, 2026 11:26 PM IST
GT vs RR, IPL 2026: ಗಿಲ್ ಭರ್ಜರಿ ಶತಕ, ರಾಜಸ್ಥಾನ ರಾಯಲ್ಸ್ ಮಣಿಸಿ ಫೈನಲ್ ಪ್ರವೇಶಿಸಿದ ಗುಜರಾತ್! ಆರ್ಸಿಬಿ ವಿರುದ್ಧ ಟ್ರೋಫಿಗಾಗಿ ಸೆಣಸಾಟ













