ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 12.2 ಓವರ್ಗಳಲ್ಲಿ 125 ರನ್ಗಳ ಜೊತೆಯಾಟ ನೀಡಿದರು. ಆರಂಭದಿಂದ ಅಬ್ಬರಿಸಿದ ಗಿಲ್ 37 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 64 ರನ್ಗಳಿಸಿ ಸ್ಪೆನ್ಸರ್ ಜಾನ್ಸನ್ ಬೌಲಿಂಗ್ನಲ್ಲಿ ದುಬೆಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಬಂದ ಜೋಸ್ ಬಟ್ಲರ್ 2ನೇ ವಿಕೆಟ್ಗೆ ಸಾಯಿ ಸುದರ್ಶನ್ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಈ ಜೋಡಿ ಕೇವಲ 37 ಎಸೆತಗಳಲ್ಲಿ 82 ರನ್ಗಳಿಸಿತು. ಆರಂಭದಲ್ಲಿ ಪರದಾಡಿದ ಸುದರ್ಶನ್ ನಂತರ ರಿದಮ್ ಕಂಡುಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಒಟ್ಟಾರೆ 53 ಎಸೆತಗಳನ್ನಾಡಿದ ಅವರು 7 ಬೌಂಡರಿ, 4 ಸಿಕ್ಸರ್ಗಳ ಸಹಿತ 84 ರನ್ಗಳಿಸಿ ಕಾಂಬೋಜ್ ಬೌಲಿಂಗ್ನಲ್ಲಿ ಮ್ಯಾಥ್ಯೂ ಶಾರ್ಟ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಜೋಸ್ ಬಟ್ಲರ್ 27 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 57 ರನ್ಗಳಿಸಿ ಮಿಂಚಿದರು. ವಾಷಿಂಗ್ಟನ್ ಸುಂದರ್ 3 ಎಸೆತಗಳಲ್ಲಿ ಅಜೇಯ 7 ರನ್ಗಳಿಸಿದರು.
ಸಿಎಸ್ಕೆ ಪರ ಮುಕೇಶ್ ಚೌಧರಿ, ಅನ್ಶುಲ್ ಕಾಂಬೋಜ್ ಹಾಗೂ ಸ್ಪೆನ್ಸರ್ ಜಾನ್ಸನ್ ತಲಾ 1 ವಿಕೆಟ್ ಪಡೆದರು.
ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಾದರೆ ಸಿಎಸ್ಕೆ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ನೇರ ಪ್ಲೇಆಫ್ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಚೆನ್ನೈ ಗೆದ್ದರೂ, ಅದು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಇದು ಎರಡೂ ತಂಡಗಳಿಗೆ ಕೊನೆಯ ಲೀಗ್ ಪಂದ್ಯವಾಗಿದೆ. ಚೆನ್ನೈ 13 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಏಳು ಸೋತಿದೆ.
ಜಿಟಿ ಈಗಾಗಲೇ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ಅಗ್ರ ಎರಡರಲ್ಲಿ ಸ್ಥಾನ ಪಡೆಯುವತ್ತ ಅವರ ಕಣ್ಣುಗಳು ನೆಟ್ಟಿವೆ. ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ತಂಡವು 13 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ಪಂದ್ಯಗಳನ್ನು ಗೆದ್ದಿದೆ. ಗುಜರಾತ್ ಪ್ರಸ್ತುತ 16 ಅಂಕಗಳನ್ನು ಹೊಂದಿದ್ದು, ಪಾಯಿಂಟ್ಸ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೆ, ಆರ್ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ.
ಪ್ಲೇಯಿಂಗ್ ಇಲೆವೆನ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್(ವಿಕೀ), ರುತುರಾಜ್ ಗಾಯಕ್ವಾಡ್(ನಾಯಕ), ಉರ್ವಿಲ್ ಪಟೇಲ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಮ್ಯಾಥ್ಯೂ ಶಾರ್ಟ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್
ಗುಜರಾತ್ ಟೈಟನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೀ), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಅರ್ಷದ್ ಖಾನ್












