Last Updated:
ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗಯಾನಾ ಅಮೆಜಾನ್ ವಾರಿಯರ್ಸ್ ಕೇವಲ 85 ರನ್‌ಗಳಿಗೆ ಆಲೌಟ್ ಆಯಿತು. ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪಂದ್ಯವನ್ನು ಸುಲಭವಾಗಿ ಹಾಗೂ ಬೇಗನೆ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಮುಂದೆ ಏನಾಯಿತು ಎಂಬುದನ್ನ ಸುದ್ದಿಯಲ್ಲಿ ಓದಿ
ಕ್ರಿಕೆಟ್ ಜಗತ್ತು ಇದುವರೆಗೆ ಹಲವು ರೋಚಕ ಪಂದ್ಯಗಳನ್ನು ಕಂಡಿದೆ. ಆದರೆ ಟಿ20 ಕ್ರಿಕೆಟ್‌ನ (T20 Cricket) ಫೈನಲ್ ಪಂದ್ಯವೊಂದರಲ್ಲಿ ಕೇವಲ 85 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡು ತಂಡವೊಂದು ಗೆಲ್ಲಬಹುದು, ಅದುವೇ ಚಾಂಪಿಯನ್ ಪಟ್ಟವನ್ನ ನಿರ್ಧರಿಸುವ ಪಂದ್ಯದಲ್ಲಿ ಗೆಲ್ಲುತ್ತದೆ ಎಂದು ಯಾರೂ ಊಹಿಸಿರುವುದಿಲ್ಲ. ಇಂತಹದ್ದೊಂದು ಅಸಾಧ್ಯ ಪವಾಡವನ್ನು ಗಯಾನಾ ಅಮೆಜಾನ್ ವಾರಿಯರ್ಸ್ ತಂಡ ನಿಜ ಮಾಡಿ ತೋರಿಸಿದೆ. ಆಗಸ್ಟ್ 1ರಂದು ನಡೆದ ಪ್ರತಿಷ್ಠಿತ ಗ್ಲೋಬಲ್ ಸೂಪರ್ ಲೀಗ್ (GSL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ವಿರುದ್ಧ ಗಯಾನಾ ತಂಡ ಐತಿಹಾಸಿಕ ಜಯ ದಾಖಲಿಸಿದೆ.
ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗಯಾನಾ ಅಮೆಜಾನ್ ವಾರಿಯರ್ಸ್ ಕೇವಲ 85 ರನ್‌ಗಳಿಗೆ ಆಲೌಟ್ ಆಯಿತು. ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪಂದ್ಯವನ್ನು ಸುಲಭವಾಗಿ ಹಾಗೂ ಬೇಗನೆ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಮುಂದೆ ಏನಾಯಿತು ಎಂಬುದು ಕ್ರಿಕೆಟ್ ಇತಿಹಾಸಕ್ಕೆ ಹೊಸ ಅಧ್ಯಾಯವನ್ನು ಸೇರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಗಯಾನಾ ಅಮೆಜಾನ್ ವಾರಿಯರ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಎದುರಾಳಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಗಯಾನಾ, ಕೇವಲ 29 ರನ್‌ಗಳಿಗೆ ತನ್ನ ಪ್ರಮುಖ 8 ವಿಕೆಟ್‌ಗಳನ್ನು ಕಳೆದುಕೊಂಡು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿತ್ತು. ತಂಡವು 50 ರನ್ ದಾಟುವುದೂ ಕಷ್ಟ ಎಂದೇ ಎಲ್ಲರೂ ಭಾವಿಸಿದ್ದರು. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಗಯಾನಾ ತಂಡದ ಹೀನಾಯ ಸೋಲನ್ನು ಕಣ್ಣಾರೆ ನೋಡಲು ಸಿದ್ಧರಾಗಿದ್ದರು.
ವೆಸ್ಟ್ ಇಂಡೀಸ್‌ನ ತಾರೆಯರಾದ ಜಾನ್ಸನ್ ಚಾರ್ಲ್ಸ್ ಮತ್ತು ಶಿಮ್ರಾನ್ ಹೆಟ್ಮೈರ್, ಅಫ್ಘಾನಿಸ್ತಾನದ ವಿಕೆಟ್ ಕೀಪರ್ ರಹಮಾನಲ್ಲಾ ಗುರ್ಬಾಜ್ ಮತ್ತು ಆಲ್‌ರೌಂಡರ್ ಮೊಹಮ್ಮದ್ ನಬಿ ಎಲ್ಲರೂ ವಿಫಲರಾದರು. ತಂಡವು 50 ರನ್‌ಗಳನ್ನು ಸಹ ಗಳಿಸುವುದಿಲ್ಲ ಎಂದು ತೋರುತ್ತಿತ್ತು, ಆದರೆ ಕೆಳ ಕ್ರಮಾಂಕವು ಹೋರಾಡಿ ಸ್ಕೋರ್ ಅನ್ನು 85 ಕ್ಕೆ ಕೊಂಡೊಯ್ದಿತು.
ಇಂತಹ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ 9ನೇ ವಿಕೆಟ್‌ಗೆ ಜೊತೆಯಾದ ಮ್ಯಾಥ್ಯೂ ಫೋರ್ಡ್ ಮತ್ತು ಡ್ವೇನ್ ಪ್ರಿಟೋರಿಯಸ್ ಜೋಡಿ ತಂಡದ ಪಾಲಿಗೆ ಸಂಜೀವಿನಿಯಾಯಿತು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಫೋರ್ಡ್ 28 ರನ್ ಗಳಿಸಿದರೆ, ಪ್ರಿಟೋರಿಯಸ್ ಅಜೇಯ 17 ರನ್ ಕಾಣಿಕೆ ನೀಡಿದರು. ಈ ಇಬ್ಬರ ಹೋರಾಟದ ಬಲದಿಂದ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ 18.5 ಓವರ್‌ಗಳಲ್ಲಿ ಆಲ್-ಔಟ್ ಆಗುವ ಮುನ್ನ 85 ರನ್‌ಗಳ ಗೌರವಯುತ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಆದರೂ 86 ರನ್‌ಗಳ ಗುರಿ ಕೂಡ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಸುಲಭದ ಮೊತ್ತವಾಗಿತ್ತು.
ಸುಲಭವಾದ ಗುರಿ ಬೆನ್ನಟ್ಟಿದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡವನ್ನು ಕೇವಲ 79 ರನ್‌ಗಳಿಗೆ ಆಲೌಟ್ ಮಾಡಿ 6 ರನ್‌ಗಳ ರೋಮಾಂಚಕ ಗೆಲುವು ಸಾಧಿಸಿತು. ಇದು ಟಿ20 ಫೈನಲ್‌ನಲ್ಲಿ ಹಿಂದೆಂದೂ ಕಾಣದ ದಾಖಲೆಯಾಗಿದೆ. ಅಧಿಕೃತ ಟಿ20 ಫೈನಲ್‌ನಲ್ಲಿ ಯಶಸ್ವಿಯಾಗಿ ರಕ್ಷಿಸಲ್ಪಟ್ಟ ಅತ್ಯಂತ ಕಡಿಮೆ ಮೊತ್ತ ಇದಾಗಿದೆ.
86 ರನ್‌ಗಳ ಗುರಿ ಬೆನ್ನಟ್ಟಿದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಟಿಮ್ ರಾಬಿನ್ಸನ್ ಮೊದಲ ಎಸೆತದಲ್ಲೇ ಔಟ್ ಆದರು. ಮತ್ತು ನಂತರ ವಿಕೆಟ್‌ಗಳ ಸುರಿಮಳೆಯಾಯಿತು. ಒಂದು ಹಂತದಲ್ಲಿ, ಯುನಿಕಾರ್ನ್ಸ್ 53ಕ್ಕೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಶೀಘ್ರದಲ್ಲೇ 58/8 ಕ್ಕೆ ಕುಸಿಯಿತು. ಯುವ ಬ್ಯಾಟ್ಸ್‌ಮನ್ ಆಲಿವರ್ ಪೀಕ್ 31 ರನ್ ಗಳಿಸಲು ಪಂದ್ಯವನ್ನ ಗೆಲ್ಲಿಸಲು ನಡೆಸಿದ ಹೋರಾಟ ವಿಫಲವಾಯಿತು. ಆಸ್ಟ್ರೇಲಿಯಾದ ಲೆಜೆಂಡರಿ ಪೇಸರ್ ಪೀಟರ್ ಸಿಡ್ಲ್ ಕೂಡ ಕೊನೆಯಲ್ಲಿ ಹೋರಾಟ ನಡೆಸಿದರು. ಕೊನೆಯ ಓವರ್ನಲ್ಲಿ ಒಂದು ವಿಕೆಟ್ ಇರುವಾಗ ತಂಡಕ್ಕೆ 8 ರನ್‌ಗಳ ಅಗತ್ಯವಿತ್ತು. ಸಿಡ್ಲ್ ಅಜೇಯ 13 ಹಾಗೂ ಕಾಲುಮ್ ಸ್ಟೋವ್ 1 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಆದರೆ ಮೊದಲ ಎರಡು ಎಸೆತಗಳನ್ನ ಡಾಟ್ ಮಾಡಿದ ಸ್ಟೋವ್ ಸಿಂಗಲ್ ತೆಗೆಯಲು ಹೋಗಿ ರನ್ ಔಟ್ ಆದರು. ಇಲ್ಲಿಗೆ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಇನ್ನಿಂಗ್ಸ್ ಅಂತ್ಯವಾಗಿ ಗಯಾನ ತಂಡ 6 ರನ್‌ಗಳ ರೋಚಕ ಜಯ ಸಾಧಿಸಿತು.
ಡ್ವೇನ್ ಪ್ರಿಟೋರಿಯಸ್ 24ಕ್ಕೆ3, ಮೊಹಮ್ಮದ್ ನಬಿ 12ಕ್ಕೆ3, ನಾಯಕ ಇಮ್ರಾನ್ ತಾಹೀರ್ 16ಕ್ಕೆ2, ಗುಡಕೇಶ್ ಮೋಟಿ 15ಕ್ಕೆ1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಬ್ಯಾಟಿಂಗ್‌ನಲ್ಲಿ 17* ರನ್ ಹಾಗೂ ಬೌಲಿಂಗ್‌ನಲ್ಲಿ 3 ವಿಕೆಟ್ ಪಡೆದು ಗಯಾನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಡ್ವೇನ್ ಪ್ರಿಟೋರಿಯಸ್ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ನಬಿ (ಫೈನಲ್‌ನಲ್ಲಿ 3 ವಿಕೆಟ್) ‘ಸರಣಿ ಶ್ರೇಷ್ಠ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 47ನೇ ವಯಸ್ಸಿನಲ್ಲೂ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ ನಾಯಕ ಇಮ್ರಾನ್ ತಾಹಿರ್ ಅವರ ನಾಯಕತ್ವಕ್ಕೆ ಕ್ರಿಕೆಟ್ ವಲಯದಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.














