Govt Job: ಗೋಲ್ಡ್ ಮೆಡಲಿಸ್ಟ್‌ಗೆ ಸಿಗಲಿಲ್ವಂತೆ ಸರ್ಕಾರಿ ಕೆಲಸ! ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೃತ ಯುವಕ


Last Updated:

‘ಅಪ್ಪಾ ನನ್ನನ್ನು ಕ್ಷಮಿಸು, ನಾನು ಸರ್ಕಾರಿ ಕೆಲಸಕ್ಕೆ 50 ಬಾರಿ ಪ್ರಯತ್ನಿಸಿದೆ, ಆದರೆ ನಾನು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ’ ಇದು ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಯುವಕನ ಡೆತ್​ನೋಟ್​.

ಮೃತ ಯುವಕ
ಮೃತ ಯುವಕ

ಕಾನ್ಪುರ್ (ಉತ್ತರ ಪ್ರದೇಶ): ಸರ್ಕಾರಿ ಕೆಲಸ (Government Job) ಪಡೆಯಬೇಕು ಲಕ್ಷಾಂತರ ಯುವಕರ ಕನಸು. ಸರ್ಕಾರಿ ಕೆಲಸಕ್ಕಾಗಿ ಮನೆ ಊರು ಬಿಟ್ಟು, ಪೋಷಕರ (Parents) ಅಕ್ಕರೆಯನ್ನೆಲ್ಲಾ ತ್ಯಾಗ ಮಾಡಿ ಅದೆಷ್ಟೋ ಆಕಾಂಕ್ಷಿಗಳು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಓದುತ್ತಾರೆ. ಆದರೆ, ಕೆಲವೇ ಕೆಲವೊಂದಿಷ್ಟು ಜನರಿಗೆ ಮಾತ್ರ ಸರ್ಕಾರಿ ಕೆಲಸದ ಭಾಗ್ಯ ಸಿಗುತ್ತದೆ. ಹೀಗೆ ಸರ್ಕಾರಿ ಕೆಲಸದ ಕನಸು ಕಂಡಿದ್ದ ಯುವಕನೊಬ್ಬ ಕನಸು ನನಸಾಗದೇ ಇದ್ದಿದ್ದಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.

‘ಅಪ್ಪಾ ನನ್ನನ್ನು ಕ್ಷಮಿಸು, ನಾನು ಸರ್ಕಾರಿ ಕೆಲಸಕ್ಕೆ 50 ಬಾರಿ ಪ್ರಯತ್ನಿಸಿದೆ, ಆದರೆ ನಾನು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ’ ಇದು ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಯುವಕನ ಡೆತ್​ನೋಟ್​. ಸರ್ಕಾರಿ ಕೆಲಸ ಸಿಗದೇ ಇದ್ದಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಬಾಡಿಗೆ ಮನೆ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯ ರಾಮ ಮಂದಿರವನ್ನು ರಕ್ಷಿಸಲು ನಾವು ಹೊಸ ಹೋರಾಟ ಮಾಡಬೇಕಿದೆ: ಉದ್ಧವ್ ಠಾಕ್ರೆ

ಮೃತ ಯುವಕನ ಹೆಸರು ಆನಂದ್ ಕುಮಾರ್. ಮೂಲತಃ ಬಿಹಾರದ ಬಕ್ಸಾರ್‌ನವರು. ಓದಿನಲ್ಲಿ ಚುರುಕಾಗಿದ್ದ ಆನಂದ್​ 2024 ರಲ್ಲಿ ಕಾನ್ಪುರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ್ದರು. ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಕ್ಕಾಗಿ, ಆಗಸ್ಟ್ 13, 2024 ರಂದು ಕಾಲೇಜು ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದ್ದರು. ಪದವಿ ಮುಗಿಸಿದ ನಂತರ, ಆನಂದ್ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಜೊತೆಗೆ ಸರ್ಕಾರಿ ಕೆಲಸಕ್ಕೆ ತಯಾರಿ ಕೂಡ ನಡೆಸುತ್ತಿದ್ದರು.

ಆದರೆ, ಎಷ್ಟೇ ಪರೀಕ್ಷೆಗಳನ್ನು ಬರೆದರೂ ಆಯ್ಕೆಯಾಗುವಲ್ಲಿ ವಿಫಲರಾಗಿದ್ದ ಆನಂದ್​​ ಮಾನಸಿಕ ಒತ್ತಡಕ್ಕೆ ಸಿಲುಕಿ ದುಡುಕಿನ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಕಾನ್ಪುರ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಆನಂದ್​​ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನಂದ್​ ಸಾವಿನ ಸುದ್ದಿ ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದ್ದು, ಮಗನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಆನಂದ್ ಅವರ ತಂದೆ ರಾಜ್‌ಕುಮಾರ್ ಲೋಹಿಯಾ ಪ್ರೈವೇಟ್ ಲಿಮಿಟೆಡ್‌ನ ನಿವೃತ್ತ ಉದ್ಯೋಗಿ. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ. ಆನಂದ್ ಅವರ ಅಣ್ಣ ಮತ್ತು ತಂಗಿ ಬಿಹಾರದ ಸರ್ಕಾರಿ ಶಾಲಾ ಶಿಕ್ಷಕರು. ಐದು ದಿನಗಳ ಹಿಂದೆ ತಮ್ಮ ತಂದೆ (ಆನಂದ್ ಅವರ ಅಜ್ಜ) ಜೊತೆ ತಮ್ಮ ಹಿರಿಯ ಮಗನ ಮದುವೆ ಏರ್ಪಡಿಸಲು ಬಿಹಾರಕ್ಕೆ ಹೋಗಿದ್ದೆ ಎಂದು ರಾಜ್‌ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಆನಂದ್ ಕೂಡ ಅವರೊಂದಿಗೆ ಹೋಗಬೇಕಿತ್ತು, ಆದರೆ ಕೊನೆಯ ಕ್ಷಣದಲ್ಲಿ ನಾನು ಬರುವುದಿಲ್ಲ ನೀವು ಹೋಗಿ ಬನ್ನಿ ಎಂದು ಹೇಳಿದ್ದರಂತೆ.

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಆನಂದ್​ ಸರ್ಕಾರಿ ಕೆಲಸ ಸಿಗದ ಕಾರಣ ಖಿನ್ನತೆಗೊಳಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರುವಂತೆ ಕಾಣುತ್ತದೆ ಎಂದು ಗೋವಿಂದ್ ನಗರ ಎಸ್‌ಎಚ್‌ಒ ಅಶೋಕ್ ಕುಮಾರ್ ದುಬೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports