Last Updated:
ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಜುಲೈ 20ರಂದು ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗುತ್ತಿವೆ.
ಪ್ರಪಂಚದಾದ್ಯಂತದ ಕೋಟ್ಯಂತರ ಫುಟ್‌ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಫಿಫಾ ವಿಶ್ವಕಪ್ 2026 ರ ಮಹಾ ಫೈನಲ್ (Final Match) ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯರಾತ್ರಿ 12.30 ಕ್ಕೆ ನ್ಯೂಜೆರ್ಸಿಯ ಪ್ರಸಿದ್ಧ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಈ ಬೃಹತ್ ಫೈನಲ್ ಪಂದ್ಯವು ಅದ್ಧೂರಿಯಾಗಿ ಜರುಗಲಿದೆ.
ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಮತ್ತು ಯುರೋಪಿಯನ್ ಚಾಂಪಿಯನ್ (European Champion) ಸ್ಪೇನ್ ಈ ಮಹಾ ಯುದ್ಧದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಬಾರಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿರುವ ಅರ್ಜೆಂಟೀನಾದ ದಾಳಿ ಹಾಗೂ ಅತ್ಯಂತ ಕಡಿಮೆ ಗೋಲುಗಳನ್ನು ಬಿಟ್ಟುಕೊಟ್ಟಿರುವ ಸ್ಪ್ಯಾನಿಷ್ ರಕ್ಷಣೆ ನಡುವೆ ಈ ರೋಚಕ ಹೋರಾಟ ನಡೆಯಲಿದೆ.
ಇಡೀ ಜಗತ್ತಿನ ಕಣ್ಣು ಈಗ 39 ವರ್ಷದ ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಮತ್ತು 19 ವರ್ಷದ ಸ್ಪ್ಯಾನಿಷ್ ಯುವ ಸಂವೇದನೆ ಲ್ಯಾಮಿನ್ ಯಮಲ್ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯ ಮೇಲೆ ನೆಟ್ಟಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಕಾರಣದಿಂದ ಕೇರಳ ಸರ್ಕಾರ ಸೋಮವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ.
ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ನಾಳೆ ಸೋಮವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ (ವೃತ್ತಿಪರ ಕಾಲೇಜುಗಳು ಸಹ) ರಜೆ ನೀಡುವಂತೆ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶ್ ಅವರು ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರು ಸೋಮವಾರ, ಜುಲೈ 20 ರಂದು ರಜೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಫೈನಲ್ ಪಂದ್ಯವು ಭಾನುವಾರ ರಾತ್ರಿ 12:30ಕ್ಕೆ ಆರಂಭವಾಗುತ್ತದೆ. ಪಂದ್ಯವು ಹೆಚ್ಚುವರಿ ಸಮಯ ಮತ್ತು ಪೆನಾಲ್ಟಿ ಶೂಟೌಟ್‌ಗೆ ಹೋದರೆ ಬೆಳಗ್ಗೆಯವರೆಗೂ ನಡೆಯಬಹುದು. ಆದ್ದರಿಂದ ಪಂದ್ಯ ನೋಡಿ ತಡವಾಗಿ ನಿದ್ರೆ ಮಾಡುವ ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ ಆಯಾಸದಿಂದ ಶಾಲೆಗೆ ಬರುವುದು ಕಷ್ಟ ಎಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇದಕ್ಕೂ ಮುಂಚೆ, ಹಿಂದಿನ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮತ್ತು ಯುವ ಕಾಂಗ್ರೆಸ್‌ನ ಕೆಲವರು, ಜುಲೈ 20 ಸೋಮವಾರ ವಿಶ್ವಕಪ್ ಫೈನಲ್ ಪಂದ್ಯದ ಕಾರಣ ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿದ್ದರು. ಪಂದ್ಯವು ಮುಂಜಾನೆವರೆಗೆ ನಡೆಯುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಂದ್ಯವನ್ನು ವೀಕ್ಷಿಸಿ ಆನಂದಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು. ಇದಾದ ನಂತರ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರು ರಜೆ ಘೋಷಿಸಿದ್ದಾರೆ.














