Ex-Judges Back EC: ಚುನಾವಣಾ ಆಯೋಗದ ಪರ ನಿಂತ 42 ಮಾಜಿ ನ್ಯಾಯಾದೀಶರು! ದೇಶದ ಜನತೆಗೆ ಬಹಿರಂಗ ಪತ್ರ ಬರೆದು ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಚುನಾವಣಾ ಆಯೋಗ

[ad_1]

Last Updated:


ರಾಜಕೀಯ ಪಕ್ಷಗಳು ಮಾಡುತ್ತಿರುವ ‘ಮತಗಳ ಕಳ್ಳತನ’ದ ಆರೋಪಗಳ ಹಿಂದಿರುವ ನೈಜತೆಯನ್ನು ಮಾಜಿ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಇಂತಹ ಗಂಭೀರ ಆರೋಪಗಳನ್ನು ಕೇವಲ ಪತ್ರಿಕಾಗೋಷ್ಠಿಗಳಲ್ಲಿ ಮಾಧ್ಯಮಗಳ ಮುಂದೆ ಮಾಡಲಾಗುತ್ತಿದೆಯೇ ಹೊರತು, ಕಾನೂನುಬದ್ಧವಾಗಿ ನ್ಯಾಯಾಲಯಗಳ ಮುಂದೆ ತರುತ್ತಿಲ್ಲ ಎಂದು ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

ಚುನಾವಣಾ ಆಯೋಗ
ಚುನಾವಣಾ ಆಯೋಗ

‘ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯು ಪ್ರಸ್ತುತ ಭಾರತೀಯ ರಾಜಕಾರಣದಲ್ಲಿ ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಅಕ್ರಮಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ (INDIA) ಬ್ಲಾಕ್ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಈ ರಾಜಕೀಯ ಸಂಘರ್ಷದ ನಡುವೆಯೇ, ದೇಶದ 42 ಜನ ಮಾಜಿ ನ್ಯಾಯಮೂರ್ತಿಗಳು ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ್ದ ನಿವೃತ್ತ ಹಿರಿಯ ಅಧಿಕಾರಿಗಳು ಒಟ್ಟಾಗಿ ಚುನಾವಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆಗೆ ಧಾವಿಸಿದ್ದಾರೆ.

ದೇಶದ ಜನತೆಗೆ ಬಹಿರಂಗ ಪತ್ರ

ಅಕ್ಟೋಬರ್ 7 ರಂದು ಈ 42 ಮಾಜಿ ನ್ಯಾಯಮೂರ್ತಿಗಳ ತಂಡವು ದೇಶದ ಜನತೆಯನ್ನುದ್ದೇಶಿಸಿ ಒಂದು ಪ್ರಮುಖ ಬಹಿರಂಗ ಪತ್ರವನ್ನು ಬರೆದಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಇತರ ಶಾಸನಬದ್ಧ ಸಂಸ್ಥೆಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ವಾಗ್ದಾಳಿಗಳ ಬಗ್ಗೆ ಅವರು ತಮ್ಮ ಪತ್ರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿರೋಧ ಪಕ್ಷಗಳು ನಡೆಸುತ್ತಿರುವ ‘ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ’ (SIR) ವಿರೋಧಿ ಹೋರಾಟವು ಇಡೀ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೇ ಕುಂದಿಸುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಟೀಕೆ ಸ್ವಾಗತಾರ್ಹ, ನಿಂದನೆ ಮಾಡುವ ಹಕ್ಕಿಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯನ್ನು ಟೀಕಿಸುವುದು ಪ್ರತಿಯೊಬ್ಬರ ಕಾನೂನುಬದ್ಧ ಹಕ್ಕಾಗಿದೆ ಎಂದು ನ್ಯಾಯಮೂರ್ತಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ರಾಜಕೀಯ ಭಾಷಣಗಳಲ್ಲಿ ಈ ಸಂಸ್ಥೆಗಳನ್ನು “ಕಳ್ಳರು”, “ಕೈಗೊಂಬೆಗಳು” ಮತ್ತು “ರಾಜಿ ಮಾಡಿಕೊಂಡ ಸಂಸ್ಥೆಗಳು” ಎಂದು ಕರೆಯುವ ಮೂಲಕ ಸಾಂಸ್ಥಿಕ ನಿಂದನೆ ಮಾಡಲಾಗುತ್ತಿದೆ, ಇದು ಪ್ರಜಾಪ್ರಭುತ್ವದ ಗೆರೆಯನ್ನು ದಾಟುವ ಕೆಲಸವಾಗಿದೆ ಎಂದು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮತಗಳ ಕಳ್ಳತನ ಸಾಕ್ಷ್ಯ ರಹಿತ ಆರೋಪ

ರಾಜಕೀಯ ಪಕ್ಷಗಳು ಮಾಡುತ್ತಿರುವ ‘ಮತಗಳ ಕಳ್ಳತನ’ದ ಆರೋಪಗಳ ಹಿಂದಿರುವ ನೈಜತೆಯನ್ನು ಮಾಜಿ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಇಂತಹ ಗಂಭೀರ ಆರೋಪಗಳನ್ನು ಕೇವಲ ಪತ್ರಿಕಾಗೋಷ್ಠಿಗಳಲ್ಲಿ ಮಾಧ್ಯಮಗಳ ಮುಂದೆ ಮಾಡಲಾಗುತ್ತಿದೆಯೇ ಹೊರತು, ಕಾನೂನುಬದ್ಧವಾಗಿ ನ್ಯಾಯಾಲಯಗಳ ಮುಂದೆ ತರುತ್ತಿಲ್ಲ. ಅಷ್ಟೇ ಅಲ್ಲದೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಮಾಣೀಕೃತ ಘೋಷಣೆಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಕೇಳಿದಾಗ, ಯಾವುದೇ ಪಕ್ಷಗಳು ಸಾಕ್ಷ್ಯದೊಂದಿಗೆ ಮುಂದೆ ಬರುತ್ತಿಲ್ಲ ಎಂದು ಅವರು ಬೆರಳು ಮಾಡಿ ತೋರಿಸಿದ್ದಾರೆ.

ಇವಿಎಂ (EVM) ಕುರಿತ ಇಬ್ಬಂದಿ ನೀತಿ

ಚುನಾವಣೆಗಳಲ್ಲಿ ಸೋಲು ಅನುಭವಿಸಿದ ತಕ್ಷಣವೇ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ನಿಯಂತ್ರಣ ಹಾಗೂ ನಂಬಿಕೆಯನ್ನು ಪ್ರಶ್ನಿಸುವ ರಾಜಕೀಯ ಪಕ್ಷಗಳ ಪ್ರವೃತ್ತಿಯನ್ನು ಪತ್ರದಲ್ಲಿ ತೀವ್ರವಾಗಿ ಖಂಡಿಸಲಾಗಿದೆ. ಇದೇ ಇವಿಎಂ ಯಂತ್ರಗಳ ಮೂಲಕ ಚುನಾವಣೆ ನಡೆದು ತಾವು ಜಯಗಳಿಸಿದಾಗ ಯಾವುದೇ ಪ್ರಶ್ನೆ ಎತ್ತದ ನಾಯಕರು, ಸೋತಾಗ ಮಾತ್ರ ಯಂತ್ರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಯ (SIR) ಕಾನೂನುಬದ್ಧತೆ

ಚುನಾವಣಾ ಆಯೋಗವು ಕೈಗೊಂಡಿರುವ ‘ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯನ್ನು ಮಾಜಿ ನ್ಯಾಯಮೂರ್ತಿಗಳು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 21(3) ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಸಂಪೂರ್ಣ ಕಾನೂನಾತ್ಮಕ ಅಧಿಕಾರವಿದೆ ಎಂಬುದನ್ನು ಅವರು ನೆನಪಿಸಿದ್ದಾರೆ. ಈ ಪ್ರಕ್ರಿಯೆಯು ಮರಣ ಹೊಂದಿದವರು, ವಲಸೆ ಹೋದವರು ಮತ್ತು ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಇರುವ ಕಾನೂನುಬದ್ಧ ಕ್ರಮವಾಗಿದ್ದು, ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಸಮ್ಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಅಪಾಯದ ಎಚ್ಚರಿಕೆ

ಒಂದು ವೇಳೆ ನಾಗರಿಕರಲ್ಲಿ ಚುನಾವಣಾ ಸಂಸ್ಥೆಗಳ ಮೇಲಿನ ವಿಶ್ವಾಸವೇ ನಾಶವಾದರೆ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ನ್ಯಾಯಮೂರ್ತಿಗಳು ತೀವ್ರ ಎಚ್ಚರಿಕೆ ನೀಡಿದ್ದಾರೆ. “ನಂಬಿಕೆಯೇ ಪ್ರಜಾಪ್ರಭುತ್ವದ ಕರೆನ್ಸಿ”. ಮತದಾನದ ಪ್ರಕ್ರಿಯೆಗೆ ಬೆಲೆಯೇ ಇಲ್ಲ ಎಂದು ಜನಸಾಮಾನ್ಯರಿಗೆ ಪದೇ ಪದೇ ಮನವರಿಕೆ ಮಾಡಿಕೊಟ್ಟರೆ, ಅವರು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಆಗ ಬ್ಯಾಲೆಟ್ (ಮತಪೆಟ್ಟಿಗೆ) ತನ್ನ ಮೌಲ್ಯ ಕಳೆದುಕೊಂಡು, ಬೀದಿ ಹೋರಾಟಗಳು ಮತ್ತು ಅರಾಜಕ ಶಕ್ತಿಗಳು ದೇಶವನ್ನು ಆವರಿಸಿಕೊಳ್ಳುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮಗಳಿಗೆ ಕರೆ

ಅಂತಿಮವಾಗಿ ಪತ್ರದಲ್ಲಿ, ರಾಜಕೀಯ ಪಕ್ಷಗಳು ಚುನಾವಣೆಗಳನ್ನು ಎದುರಿಸಬೇಕೇ ಹೊರತು, ಅವುಗಳ ಸಾಂವಿಧಾನಿಕ ಅರ್ಹತೆಯನ್ನೇ ಇಲ್ಲದಂತೆ ಮಾಡಬಾರದು ಎಂದು ಕರೆ ನೀಡಲಾಗಿದೆ. ಯಾವುದೇ ದೂರುಗಳಿದ್ದರೂ ಸಾಕ್ಷ್ಯಾಧಾರಗಳೊಂದಿಗೆ ಆಯೋಗ ಅಥವಾ ಕೋರ್ಟ್‌ಗೆ ಹೋಗಬೇಕು ಎಂದು ತಿಳಿಸಲಾಗಿದೆ. ಇದರೊಂದಿಗೆ ಮಾಧ್ಯಮಗಳಿಗೂ ಮನವಿ ಮಾಡಲಾಗಿದ್ದು, ಕೇವಲ ಹೆಡ್‌ಲೈನ್‌ಗಳಿಗಾಗಿ ಸತ್ಯಾಸತ್ಯತೆ ತಿಳಿಯದೆ ಇಂತಹ ಆರೋಪಗಳನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಮೂರ್ತಿಗಳು ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed