Last Updated:
Dhruv Rathee-Zakir Khan: ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರದರ್ಶಿಸಿ, ತಾವು ಭಾರತೀಯ ನಾಗರಿಕರು ಎಂದು ಧ್ರುವ್ ರಾಠಿ ಸ್ಪಷ್ಟವಾಗಿ ತಿಳಿಸಿದ್ದರು. ಇದೀಗ ಧ್ರುವ್ ರಾಠಿ ಇಂಡಿಯನ್ ಪಾಸ್‌ಪೋರ್ಟ್ ವಿಡಿಯೋಗೆ ಖ್ಯಾತ ಕಾಮಿಡಿಯನ್ ಝಾಕೀರ್ ಖಾನ್ ಕಾಮೆಂಟ್ ಮಾಡಿದ್ದಾರೆ. ಅವರ ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.
ದೆಹಲಿ: ಬೆಂಗಳೂರಿನ (Bengaluru) ಸಿಜೆಪಿ ಪ್ರತಿಭಟನೆಯಲ್ಲಿ (CJP protest) ಭಾಗಿಯಾದ ಯೂಟ್ಯೂಬರ್ ಧ್ರುವ್ ರಾಠಿ (YouTuber Dhruv Rathee) ಪೌರತ್ವದ ಕುರಿತು ಮತ್ತೆ ಚರ್ಚೆಯಾಗಿದೆ. ಇದೇ ಕಾರಣಕ್ಕೆ ತಮ್ಮ ಭಾರತೀಯ ಪಾಸ್‌ಪೋರ್ಟ್ (Indian Passport) ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರದರ್ಶಿಸಿ, ತಾವು ಭಾರತೀಯ ನಾಗರಿಕರು ಎಂದು ಧ್ರುವ್ ರಾಠಿ ಸ್ಪಷ್ಟವಾಗಿ ತಿಳಿಸಿದ್ದರು. ಇದೀಗ ಧ್ರುವ್ ರಾಠಿ ಇಂಡಿಯನ್ ಪಾಸ್‌ಪೋರ್ಟ್ ವಿಡಿಯೋಗೆ ಖ್ಯಾತ ಕಾಮಿಡಿಯನ್ ಝಾಕೀರ್ ಖಾನ್ (Comedian Zakir Khan) ಕಾಮೆಂಟ್ ಮಾಡಿದ್ದಾರೆ. ಅವರ ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.
ತಮ್ಮ ಪೌರತ್ವದ ಕುರಿತಂತೆ ಅಕ್ಟೋಬರ್ 11ರಂದು ಪೋಸ್ಟ್ ಮಾಡಿದ್ದ ಧ್ರುವ್ ರಾಠಿ, ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆ ವಿಡಿಯೋದಲ್ಲಿ ಅವರು “ನಾನು ಭಾರತೀಯ ನಾಗರಿಕ, ಇದು ನನ್ನ ಪಾಸ್‌ಪೋರ್ಟ್. ನಾನು ಭಾರತೀಯ ನಾಗರಿಕನಾಗಿದ್ದೇನೆ ಮತ್ತು ಇರುತ್ತೇನೆ” ಎಂದು ಹೇಳಿದ್ದರು. ಈ ಮೂಲಕ ಧ್ರುವ್ ರಾಠಿ ಭಾರತೀಯರಲ್ಲ, ಭಾರತೀಯ ಪೌರತ್ವ ಹೊಂದಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ್ದರು.
ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಧ್ರುವ್ ರಾಠಿ ಭಾಗವಹಿಸಿದ್ದರು. ಇದರ ನಂತರ ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ ಹಾಗೂ ಹಾಲಿ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಧ್ರುವ್ ರಾಠಿ ಜರ್ಮನ್ ನಾಗರಿಕರಾಗಿರಬಹುದು ಎಂದು ಆರೋಪಿಸಿ, ಅವರ ಪಾಸ್‌ಪೋರ್ಟ್, ವೀಸಾ ಸ್ಥಿತಿ ಮತ್ತು ಭಾರತದಲ್ಲಿನ ಅನುಮತಿಯನ್ನು ಪರಿಶೀಲಿಸುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು.
ಅಕ್ಟೋಬರ್ 10ರ ಬೆಳಿಗ್ಗೆ ಸುಮಾರು ಏಳು ಗಂಟೆಗೆ ಗುರುಗ್ರಾಮದ ನಿವಾಸದಲ್ಲಿ ಮಲಗಿದ್ದಾಗ ಸುಮಾರು ಇಪ್ಪತ್ತು ಮಂದಿ ಸಾಮಾನ್ಯ ಬಟ್ಟೆಯಲ್ಲಿದ್ದ ಜನರು ಮನೆಗೆ ಪ್ರವೇಶಿಸಿ ತಮ್ಮನ್ನು ಎತ್ತಿಕೊಂಡು ಹೋದರು ಎಂದು ಧ್ರುವ್ ರಾಠಿ ಆರೋಪಿಸಿದ್ದರು. ತಾವು ಯಾರೆಂದು ಕೇಳುವಷ್ಟು ಅವಕಾಶವೂ ಸಿಗಲಿಲ್ಲ, ವಿವಿಧ ಪೊಲೀಸ್ ಠಾಣೆಗಳಿಗೆ ಕೊಂಡೊಯ್ಯಲಾಯಿತು, ವಕೀಲರನ್ನು ಸಂಪರ್ಕಿಸಲು ಅಥವಾ ಫೋನ್ ಬಳಸಲು ಸುಮಾರು ಇಪ್ಪತ್ತೆರಡು-ಇಪ್ಪತ್ತಮೂರು ಗಂಟೆಗಳ ಕಾಲ ಅವಕಾಶ ಸಿಗಲಿಲ್ಲ ಎಂದು ಅವರು ಆರೋಪಿಸಿದ್ದರು.
ತಮ್ಮ ತಾಯಿಯನ್ನು ತಳ್ಳಿದ ಘಟನೆ ಮತ್ತು ತಮಗೆ ಗಾಯವಾದ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ದಿಲ್ಲಿಯಲ್ಲಿ ಹೇರಿದ ನಿರ್ಬಂಧಗಳನ್ನು “ಅನಧಿಕೃತ ತುರ್ತು ಪರಿಸ್ಥಿತಿ” ಎಂದು ಟೀಕಿಸಿದ ರಾಠಿ, ದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದು ಘೋಷಿಸಿದ್ದಾರೆ. ವೀಡಿಯೊವನ್ನು “ಜೈ ಹಿಂದ್” ಮತ್ತು “ವಂದೇ ಮಾತರಂ” ಎಂದು ವಿಡಿಯೋದಲ್ಲಿ ಹೇಳಿದ್ದರು.
ಈ ಗಂಭೀರ ಚರ್ಚೆಯ ನಡುವೆ ಕಾಮಿಡಿಯನ್ ಝಾಕೀರ್ ಖಾನ್ ಅವರು ಮಾಡಿದ ತಮಾಷೆಯ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧ್ರುವ್ ರಾಠಿ ಅವರ ಪಾಸ್‌ಪೋರ್ಟ್ ತೋರಿಸಿದ ವಿಡಿಯೋಕ್ಕೆ ಅವರು ಮಾಡಿರೋ ಕಾಮೆಂಟ್ ಸಖತ್ ವೈರಲ್ ಆಗಿದೆ. “ಪಾಸ್‌ಪೋರ್ಟ್‌ನಿಂದ ಏನೂ ಸಾಬೀತಾಗುವುದಿಲ್ಲ. ನಿಮ್ಮ ಧುರಂಧರ್ ಮೂವಿ ಟಿಕೆಟ್ ತೋರಿಸಿ” ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಾಸ್ಯಪೂರ್ಣ ಕಾಮೆಂಟ್, ಧ್ರುವ್ ರಾಠಿ ಪಾಸ್‌ಪೋರ್ಟ್ ವಿವಾದದ ಮಧ್ಯೆ ಚರ್ಚೆಯನ್ನು ಸಿನಿಮಾ ಕಡೆಗೆ ತಿರುಗಿಸಿ, ಅನೇಕರಿಗೆ ನಗು ತಂದಿದೆ. ರಾಠಿ ಅವರ ಕಡೆಯಿಂದ ಈ ಕಾಮೆಂಟ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.














