Last Updated:
ಅಪಹರಣ, ಚಿತ್ರಹಿಂಸೆ ಮತ್ತು ಅತ್ಯಾಚಾರ ಅಪರಾಧದಲ್ಲಿ ಶಿಕ್ಷೆಗೊಳಗಾದ ಭಾರತೀಯ ಮೂಲದ ವ್ಯಕ್ತಿಗೆ ಶುಕ್ರವಾರ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಐಲ್ವರ್ತ್ ಕ್ರೌನ್ ನ್ಯಾಯಾಲಯದಲ್ಲಿ ನಡೆದ ಈ ಪ್ರಕರಣದ ವಿಚಾರಣೆಯ ನಂತರ, ಗಗನ್ದೀಪ್ ಸಿಂಗ್ ಎಂಬಾತ ಜೈಲುಶಿಕ್ಷೆಗೆ ಗುರಿಯಾಗಿದ್ದಾನೆ.
ಲಂಡನ್: ಯುವತಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಿ ನಂತರ ಅತ್ಯಾಚಾರ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಕಾಮುಕನೊಬ್ಬನಿಗೆ ಲಂಡನ್ನಲ್ಲಿ 34 ವರ್ಷ ಜೈಲುಶಿಕ್ಷೆ ((Isleworth Crown Court)) ವಿಧಿಸಲಾಗಿದೆ.
ಅಪಹರಣ, ಚಿತ್ರಹಿಂಸೆ ಮತ್ತು ಅತ್ಯಾಚಾರ ಅಪರಾಧದಲ್ಲಿ ಶಿಕ್ಷೆಗೊಳಗಾದ ಭಾರತೀಯ ಮೂಲದ ವ್ಯಕ್ತಿಗೆ ಶುಕ್ರವಾರ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಐಲ್ವರ್ತ್ ಕ್ರೌನ್ ನ್ಯಾಯಾಲಯದಲ್ಲಿ ನಡೆದ ಈ ಪ್ರಕರಣದ ವಿಚಾರಣೆಯ ನಂತರ, ಗಗನ್ದೀಪ್ ಸಿಂಗ್ ಎಂಬಾತ ಜೈಲುಶಿಕ್ಷೆಗೆ ಗುರಿಯಾಗಿದ್ದಾನೆ. ಈ ಘೋರ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿದ ಇಸ್ಲ್ವರ್ತ್ ಕ್ರೌನ್ ಕೋರ್ಟ್ ಫೆಬ್ರವರಿಯಲ್ಲೆ ಇತನನ್ನು ಅಪರಾಧಿ ಎಂದು ಘೋಷಿಸಿತ್ತು, ಈಗ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
2024ರ ಜೂನ್ನಲ್ಲಿ 24 ವರ್ಷದ ಯುವತಿಯೊಬ್ಬಳಿಗೆ ಥೈಲ್ಯಾಂಡ್ನಿಂದ ಯುಕೆಗೆ (UK) ಒಂದು ಸೂಟ್ಕೇಸ್ ತಲುಪಿಸುವಂತೆ ಕೇಳಲಾಗಿತ್ತು. ಆದರೆ ಆ ಸೂಟ್ಕೇಸ್ನಲ್ಲಿ ಏನಿದೆ ಎಂಬ ಅನುಮಾನ ಬಂದು ಯುವತಿ ಅದನ್ನು ತರಲು ನಿರಾಕರಿಸಿದ್ದಳು. ಇದರಿಂದ ಸಿಟ್ಟಾದ ಆರೋಪಿ, ಯುವತಿ ಬರ್ಮಿಂಗ್ಹ್ಯಾಮ್ ಏರ್ಪೋರ್ಟ್ಗೆ ತಲುಪುತ್ತಿದ್ದಂತೆ ಮಾಸ್ಕ್ ಧರಿಸಿ ಬಂದು ಆಕೆಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾನೆ. ಅಲ್ಲಿಂದ ಪಶ್ಚಿಮ ಲಂಡನ್ನಲ್ಲಿರುವ ಹ್ಯಾನ್ವೆಲ್ನಲ್ಲಿರುವ ಮನೆಗೆ ಕರೆದೊಯ್ದು ಕಾಮುಕ ಗಗನ್ದೀಪ್ ಸಿಂಗ್ ಮತ್ತು ಆತನ ಗ್ಯಾಂಗ್ ಯುವತಿಯನ್ನು ಅತ್ಯಾಚಾರ ಮಾಡಿದೆ ಎಂದು ತಿಳಿದು ಬಂದಿದೆ.
ಆರೋಪಿ ಗಗನ್ದೀಪ್ ಸಿಂಗ್ ಯುವತಿಯನ್ನು ರೂಮಿನಲ್ಲಿ ಕೂಡಿಹಾಕಿ ಎರಡು ಬಾರಿ ರೇಪ್ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಮುಖಕ್ಕೆ ಹೊಡೆದು, ಬಟ್ಟೆ ಬಿಚ್ಚಿಸಿ, ಚಾಕುವಿನಿಂದ ಇರಿದು, ಬೆಂಕಿ ಕಡ್ಡಿಯಿಂದ ಸುಟ್ಟು ಕ್ರೂರವಾಗಿ ಹಿಂಸಿಸಿದ್ದಾನೆ. ಒಂದು ದಿನಕ್ಕೂ ಹೆಚ್ಚು ಕಾಲ ನರಕಯಾತನೆ ನೀಡಿದ ಬಳಿಕ, ‘ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಕೊಲ್ಲುತ್ತೇವೆ’ ಎಂದು ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದಾನೆ. ಈ ಭೀಕರ ಘಟನೆಯಿಂದ ಯುವತಿ ಮಾನಸಿಕವಾಗಿ ಜರ್ಜರಿತರಾಗಿದ್ದಳದೇ, ತೀವ್ರ ಹೆದರಿ ಹೋಗಿದ್ದಳು ಎಂದು ವರದಿಯಾಗಿದೆ.
ಘಟನೆಯಿಂದ ತೀವ್ರ ಕಂಗಾಲಾಗಿದ್ದ ಯುವತಿ ಭಯದಿಂದ ಮೊದಲು ಪೊಲೀಸರಿಗೆ ದೂರು ನೀಡಲು ಒಪ್ಪಿರಲಿಲ್ಲ. ಆದರೆ ಆಕೆಯ ತಾಯಿ ಧೈರ್ಯ ತುಂಬಿ ಪೊಲೀಸರಿಗೆ ದೂರು ನೀಡುವಂತೆ ಪ್ರೇರೇಪಿಸಿದ್ದಾರೆ. ಮಗಳು ಕಿಡ್ನ್ಯಾಪ್ ಆದಾಗ ಧರಿಸಿದ್ದ ಬಟ್ಟೆಗಳನ್ನು ಸಾಕ್ಷ್ಯಕ್ಕಾಗಿ ಜೋಪಾನವಾಗಿ ಎತ್ತಿಟ್ಟ ತಾಯಿ ನಂತರ ಡಾಕ್ಟರ್ ನೀಡಿದ ರಿಪೋರ್ಟ್ಗಳನ್ನು ಸೇವ್ ಮಾಡಿಕೊಂಡಿದ್ದಾರೆ. ನಂತರ ತಾಯಿಯೇ ಸ್ವತಃ ಮೆಟ್ರೋಪಾಲಿಟನ್ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಪೊಲೀಸರು ತಕ್ಷಣ ಅಲರ್ಟ್ ಆಗಿ ಬಟ್ಟೆಗಳನ್ನು ಫೋರೆನ್ಸಿಕ್ (Forensic) ತಪಾಸಣೆಗೆ ಒಳಪಡಿಸಿದಾಗ ಗಗನ್ದೀಪ್ ಸಿಂಗ್ ಕ್ರೌರ್ಯ ಎಸಗಿರುವುದು ಸಾಬೀತಾಗಿದೆ.
ಕೋರ್ಟ್ ಶಿಕ್ಷೆ ಪ್ರಕಟಿಸಿದ ಬಳಿಕ ಹೇಳಿಕೆ ನೀಡಿದ ಯುವತಿ ‘ಮೊದಲು ನನಗೆ ಪೋಲೀಸ್ ಸ್ಟೇಷನ್ ಮೆಟ್ಟಿಲು ಹತ್ತಲು ತುಂಬಾ ಭಯವಾಗಿತ್ತು. ಆದರೆ ನನ್ನ ತಾಯಿ ಬಿಡಲಿಲ್ಲ, ನನಗೆ ಧೈರ್ಯ ತುಂಬಿದರು. ಇಂತಹ ಕಟುಕರು ಹೊರಗಿದ್ದರೆ ಬೇರೆ ಹೆಣ್ಣುಮಕ್ಕಳಿಗೂ ತೊಂದರೆ ಮಾಡುತ್ತಾರೆ ಎಂದು ತಾಯಿಯೇ ಮುಂದೆ ನಿಂತು ದೂರು ನೀಡಲು ಸಹಕರಿಸಿದರು. ಲಂಡನ್ ಪೊಲೀಸರು ಈ ಕೇಸ್ ಅನ್ನು ತುಂಬಾ ಸೆನ್ಸಿಟೀವ್ ಆಗಿ ಹ್ಯಾಂಡಲ್ ಮಾಡಿದರು. ನಾವು ನಾಚಿಕೆಪಡುವ ಅಗತ್ಯವಿಲ್ಲ, ತಪ್ಪು ಮಾಡಿದವರು ನಾಚಿಕೆ ಪಡಬೇಕು. ನಾವು ಧೈರ್ಯವಾಗಿ ಇಂತಹ ಪ್ರಕರಣವನ್ನು ಎದುರಿಸಬೇಕು’ ಎಂದು ಹೇಳಿದ್ದಾರೆ.
ಕೋರ್ಟ್ ವಿಧಿಸಿರುವ 34 ವರ್ಷಗಳ ಶಿಕ್ಷೆಯಲ್ಲಿ 28 ವರ್ಷಗಳ ಕಾಲ ಗಗನ್ದೀಪ್ ಕಡ್ಡಾಯವಾಗಿ ಜೈಲಿನಲ್ಲೇ ಇರಬೇಕು. ಆ ಬಳಿಕ 6 ವರ್ಷಗಳ ಕಾಲ ಕಠಿಣ ನಿಯಮಗಳ ಅಡಿಯಲ್ಲಿ ಆತನನ್ನು ನಿಗಾದಲ್ಲಿ ಇಡಲಾಗುತ್ತದೆ (Extended licence). ಅಷ್ಟೇ ಅಲ್ಲ, ಕನಿಷ್ಠ 18 ವರ್ಷ ಮುಗಿಯುವವರೆಗೂ ಆತನಿಗೆ ಯಾವುದೇ ಕಾರಣಕ್ಕೂ ಪೆರೋಲ್ (Parole) ಅಥವಾ ಜಾಮೀನು ಸಿಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಯುವತಿಯ ಧೈರ್ಯವನ್ನು ಮೆಚ್ಚಿದ್ದಾರೆ.
(ವರದಿ: ದಿವ್ಯಶ್ರೀ ಬೇಡರ್)













