Last Updated:
ನೈಟ್ಕ್ಲಬ್ ವಿವಾದದ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪರಿಸ್ಥಿತಿಗಳು ಇನ್ನಷ್ಟು ಹದಗೆಟ್ಟಿವೆ.
ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಇಸಿಬಿ ತನಿಖೆ ಆರಂಭಿಸಿದೆ.
ಇಂಗ್ಲೆಂಡ್ (England) ಮತ್ತು ನ್ಯೂಜಿಲೆಂಡ್ (New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ (Test series) ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತು. ಈ ಪಂದ್ಯದ ನಂತರ, ನಾಯಕ ಬೆನ್ ಸ್ಟೋಕ್ಸ್ (Ben Stokes) ಮತ್ತು ವೇಗಿ ಗಸ್ ಅಟ್ಕಿನ್ಸನ್ (Gus Atkinson) ತಡರಾತ್ರಿ ಲಂಡನ್ (London) ನೈಟ್ಕ್ಲಬ್(Nightclub)ಗೆ ಹೋಗಿ ರಗ್ಬಿ (Rugby) ಆಟಗಾರನೊಂದಿಗೆ ವಾಗ್ವಾದ ನಡೆಸಿದರು. ಇದರ ಪರಿಣಾಮವಾಗಿ ಇಸಿಬಿ ಭದ್ರತಾ ಸಿಬ್ಬಂದಿ ಗಾಯಗೊಂಡು ಅವರಿಗೆ ಹೊಲಿಗೆ ಹಾಕಬೇಕಾಯಿತು. ಈ ವಿಷಯದ ಬಗ್ಗೆ ಇಸಿಬಿ (ECB) ತನಿಖೆ ಆರಂಭಿಸಿದೆ. ಈ ವಿವಾದದ ನಡುವೆ ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂಬ ವರದಿಗಳಿವೆ.
ಟಾಕ್ಸ್ಪೋರ್ಟ್ನ ವರದಿಯ ಪ್ರಕಾರ, ನೈಟ್ಕ್ಲಬ್ ವಿವಾದದ ನಂತರ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು. ಸ್ಟೋಕ್ಸ್ ನಿವೃತ್ತಿಯ ಕುರಿತು ದಿ ಕ್ರಿಕೆಟರ್ನ ಹಿರಿಯ ವರದಿಗಾರ ಜಾರ್ಜ್ ಡೊಬೆಲ್ ಮಾತನಾಡಿದ್ದಾರೆ.
ನಾನು ಕೇಳುತ್ತಿರುವ ಮಾಹಿತಿಯ ಪ್ರಕಾರ, ಸ್ಟೋಕ್ಸ್ ಅವರು ರಾಜೀನಾಮೆ ನೀಡಿ ನಿವೃತ್ತರಾಗುತ್ತಾರೆ ಎಂದು ನಾನು ಕೇಳುತ್ತಿದ್ದೇನೆ. ಈ ರೀತಿ ನಿವೃತ್ತಿ ಘೋಷಣೆ ಮಾಡುವುದು ತುಂಬಾ ವಿಷಾದಕರ. ಆದರೆ, ಅವರು ಹಾಗೆ ಮಾಡುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಅವರು ಎದ್ದು ನಿಂತು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಅದು ನಮಗೆ ಗೊತ್ತಿರುವ ಬೆನ್ ಸ್ಟೋಕ್ಸ್ ಎಂದು ಜಾರ್ಜ್ ಡೊಬೆಲ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಹಲವು ಗೆಲುವುಗಳಲ್ಲಿ ಬೆನ್ ಸ್ಟೋಕ್ಸ್ ಪ್ರಮುಖ ಪಾತ್ರವಹಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಅಗತ್ಯವಿರುವ ಆಟಗಾರ. ಒಂದು ವೇಳೆ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ ತೊರೆದರೆ, ಇಂಗ್ಲೆಂಡ್ ತಂಡದ ಮೇಲೆ ಪರಿಣಾಮ ಬೀರಲಿದೆ. ವಿಶ್ವದ ಬೆಸ್ಟ್ ಆಲ್ರೌಂಡರ್ ಆಗಿರುವ ಸ್ಟೋಕ್ಸ್ ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸ ಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಸ್ಟೋಕ್ಸ್ ಅಂತಹ ಆಟಗಾರ ಇಂಗ್ಲೆಂಡ್ ತಂಡಕ್ಕೆ ಬೇಕಾಗಿದೆ.
ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ 121 ಟೆಸ್ಟ್ ಪಂದ್ಯಗಳಲ್ಲಿ 34.58 ಸರಾಸರಿಯಲ್ಲಿ 7,228 ರನ್ ಗಳಿಸಿದ್ದಾರೆ. 114 ಏಕದಿನ ಪಂದ್ಯಗಳಲ್ಲಿ 41.22 ಸರಾಸರಿಯಲ್ಲಿ 3,463 ರನ್ ಗಳಿಸಿದ್ದಾರೆ. 43 ಟಿ20 ಪಂದ್ಯಗಳಲ್ಲಿ 21.66 ಸರಾಸರಿಯಲ್ಲಿ 585 ರನ್ ಗಳಿಸಿದ್ದಾರೆ.
ನೈಟ್ಕ್ಲಬ್ನಲ್ಲಿ ನಡೆದ ಗಲಾಟೆಯ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನಿಖೆಯನ್ನು ಪ್ರಾರಂಭಿಸಿದೆ. “ಸೋಮವಾರ ಬೆಳಗಿನ ಜಾವ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ನೈಟ್ಕ್ಲಬ್ನಲ್ಲಿದ್ದಾಗ ಘಟನೆ ನಡೆದಿದೆ. ನಾವು ಪ್ರಸ್ತುತ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಕೆಲಸ ಮಾಡುತ್ತಿದ್ದೇವೆ ಮತ್ತು ಎರಡನೇ ಟೆಸ್ಟ್ಗೆ ತಂಡವನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು” ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾನುವಾರ ರಾತ್ರಿ ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ 115 ರನ್ಗಳಿಂದ ಜಯ ಸಾಧಿಸಿ ಅದ್ಭುತ ಜಯ ಸಾಧಿಸಿತು. ಈ ಐತಿಹಾಸಿಕ ಗೆಲುವಿನ ನಂತರ, ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಗಸ್ ಅಟ್ಕಿನ್ಸನ್ ಸೋಮವಾರ ಬೆಳಿಗ್ಗೆ ನೈಟ್ಕ್ಲಬ್ನಲ್ಲಿದ್ದರು. ಈ ವೇಳೆ ಇಂಗ್ಲೆಂಡ್ ರಗ್ಬಿ ಕ್ಲಬ್ ಆದ ಸರಾಸೆನ್ಸ್ನ ಆಟಗಾರರು ಸಹ ಅದೇ ಕ್ಲಬ್ನಲ್ಲಿದ್ದರು.
ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು, ರಗ್ಬಿ ಕ್ಲಬ್ ಆಟಗಾರನೊಬ್ಬ ಅಟ್ಕಿನ್ಸನ್ಗೆ ಗುದ್ದುವ ಹಂತಕ್ಕೆ ಹೋಗಿದ್ದರು. ಅಟ್ಕಿನ್ಸನ್ ಸಮಯಕ್ಕೆ ಸರಿಯಾಗಿ ಇದರಿಂದ ತಪ್ಪಿಸಿಕೊಂಡರು. ಆದರೆ ಗುದ್ದಾಟದಲ್ಲಿ ಇಸಿಬಿ ಭದ್ರತಾ ಅಧಿಕಾರಿ ಗಾಯಗೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ ತಕ್ಷಣ ಇಸಿಬಿ ಕ್ರಮ ಕೈಗೊಂಡಿತು. ತಂಡದ ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ಇಸಿಬಿ ತನಿಖೆ ಆರಂಭಿಸಿದೆ.
Jun 10, 2026 12:43 PM IST
Ben Stokes: ನೈಟ್ಕ್ಲಬ್ ವಿವಾದದ ನಡುವೆ ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರ? ಇದೊಂದು ನಡೆದ್ರೆ ಇಂಗ್ಲೆಂಡ್ ಟೀಮ್ಗೆ ಬಿಗ್ ಪ್ರಾಬ್ಲಮ್!













