Last Updated:
ಕಳೆದ ವರ್ಷದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ್ದ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ, ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ACC ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಅಧಿಕೃತವಾಗಿ ಪ್ರಶಸ್ತಿ ಸ್ವೀಕರಿಸಲು ನೇರವಾಗಿ ನಿರಾಕರಿಸಿದ್ದ, ದೊಡ್ಡ ವಿವಾದವಾಗಿತ್ತು.
ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ರಾಜತಾಂತ್ರಿಕ ಹಾಗೂ ಕ್ರೀಡಾ ಸಂಘರ್ಷ ಹೊಸದೇನಲ್ಲ. ಇದೀಗ ಮುಂಬರುವ ಮಹಿಳಾ ಏಷ್ಯಾ ಕಪ್ (Asia Cup) ಟೂರ್ನಿಯ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿ ನಡುವೆ ಮತ್ತೊಂದು ದೊಡ್ಡ ಮಟ್ಟದ ಸಂಘರ್ಷ ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ದುಬೈನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ, “ಒಂದು ವೇಳೆ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ ವೇದಿಕೆಯಲ್ಲಿ ಟ್ರೋಫಿಯನ್ನು ಯಾರು ಪ್ರದಾನ ಮಾಡಲಿದ್ದಾರೆ?” ಎಂಬ ಯಕ್ಷಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.














