Last Updated:
Annamalai Submits Resignation To BJP: ನಿತಿನ್ ನಬಿನ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗಿನ ನಿರ್ಣಾಯಕ ಸಭೆಯಲ್ಲಿ, ಅಣ್ಣಾಮಲೈ ಪಕ್ಷದಿಂದ ದೂರವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಐದು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ನವದೆಹಲಿ: ಕಳೆದ ಎರಡ್ಮೂರು ದಿನಗಳಿಂದ ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಬಿಜೆಪಿ ಪಕ್ಷವನ್ನು ತೊರೆಯುತ್ತಾರೆ (Annamalai Quits BJP) ಎಂಬ ಊಹಾಪೋಹಗಳು ಹರಿದಾಡಿತ್ತು. ಇದೀಗ ಈ ಗೊಂದಲಗಳಿಗೆ ಸ್ವತಃ ಕೆ ಅಣ್ಣಾಮಲೈ ಅವರೇ (Tamil Nadu BJP) ತೆರೆ ಎಳೆದಿದ್ದಾರೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಅಣ್ಣಾಮಲೈ ಅವರು ನವದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಕೆ. ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಸಂಜೆ 4 ಗಂಟೆಗೆ ಭೇಟಿಯಾದ ನಂತರ ಅಣ್ಣಾಮಲೈ ಅವರು ಚೆನ್ನೈಗೆ ಮರಳಲಿದ್ದಾರೆ.
ನಿತಿನ್ ನಬಿನ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗಿನ ನಿರ್ಣಾಯಕ ಸಭೆಯಲ್ಲಿ, ಅಣ್ಣಾಮಲೈ ಪಕ್ಷದಿಂದ ದೂರವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಐದು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಆ ಪತ್ರದಲ್ಲಿ ‘ಈಗ ತನ್ನದೇ ಆದ ಮಾರ್ಗವನ್ನು ರೂಪಿಸಿಕೊಳ್ಳಲು’ ಬಯಸುತ್ತಿದ್ದು, ಹೀಗಾಗಿ ತಾನು ಪಕ್ಷಕ್ಕೆ ರಾಜೀನಾಮೆ ನೀಡೋದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ, ಬಿಜೆಪಿ ನಾಯಕತ್ವವು ಮಾಜಿ ಐಪಿಎಸ್ ಅಧಿಕಾರಿಯನ್ನು ಪಕ್ಷದದಲ್ಲಿಯೇ ಇರಲು ಮನವೊಲಿಸುವ ಪ್ರಯತ್ನಗಳನ್ನು ಮಾಡಿತ್ತು. ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸುವ ಯೋಚನೆ ಮಾಡಲಾಗಿತ್ತು. ಮೂಲಗಳ ಪ್ರಕಾರ, ಮುಂದಿನ ಸೂಚನೆ ಬರುವವರೆಗೂ ದೆಹಲಿಯನ್ನು ತೊರೆಯದಂತೆ ಅಣ್ಣಾಮಲೈ ಅವರನ್ನು ಮೊದಲೇ ಕೇಳಲಾಗಿತ್ತು.
ಕೆ ಅಣ್ಣಾಮಲೈ ಸಾರ್ವಜನಿಕ ಆಂದೋಲನವನ್ನು ಪ್ರಾರಂಭಿಸಬಹುದು ಎಂದು ಒಂದೆಡೆ ವರದಿಗಳು ಸೂಚಿಸಿವೆ. ಅದು ಅಂತಿಮವಾಗಿ ಪಕ್ಷವಾಗಿ ವಿಕಸನಗೊಳ್ಳುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ತಮಿಳುನಾಡಿನಲ್ಲಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿಯಾಗಿ ಅಧಿಕಾರಕ್ಕೆ ಬಂದ ನಂತರ ಅದರ ಪ್ರಭಾವದಿಂದ ತಾವು ಕೂಡ ಹೊಸ ಪಕ್ಷ ಕಟ್ಟಲು ಯೋಚನೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ನಟ-ರಾಜಕಾರಣಿ ವಿಜಯ್ ಅವರು ದೊಡ್ಡ ಪರದೆಯಿಂದ ತಮಿಳುನಾಡು ಮುಖ್ಯಮಂತ್ರಿಯಾಗಿ ಉತ್ತುಂಗಕ್ಕೇರಿದ ನಂತರ, ಅಣ್ಣಾಮಲೈ ಅವರು ಬಿಜೆಪಿಯಿಂದ ನಿರ್ಗಮಿಸುವುದು ರಾಜ್ಯದಲ್ಲಿ ಪ್ರಮುಖ ರಾಜಕೀಯ ಬದಲಾವಣೆಯನ್ನು ಸೂಚಿಸುತ್ತದೆ.
ಅಣ್ಣಾಮಲೈ ಅವರ ಆಪ್ತ ಮೂಲಗಳ ಪ್ರಕಾರ, ನಟ ವಿಜಯ್ ರಾಜಕೀಯ ಶಕ್ತಿಯಾಗಿ ಉದಯಿಸಿದ ನಂತರ ತಮಿಳುನಾಡಿನ ರಾಜಕೀಯ ಲೆಕ್ಕಾಚಾರವು ಗಮನಾರ್ಹ ಬದಲಾವಣೆಗೆ ಒಳಗಾಗಿದೆ ಎಂದು ಅವರು ನಂಬುತ್ತಾರೆ. ‘ಇಂದು ವಿಜಯ್ ವಿರುದ್ಧ ಹೋರಾಡಲು ಯಾವುದೇ ನಾಯಕ ಇಲ್ಲ. ದ್ರಾವಿಡ ಯುಗ ಮುಗಿದಿದೆ. ಭಾಷಾ ವಿಷಯಗಳ ಮೇಲೆ ಮಾತ್ರ ಕೇಂದ್ರೀಕೃತವಾದ ರಾಜಕೀಯ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ರಾಜ್ಯದ ರಾಜಕೀಯ ಬದಲಾಗಿದೆ’ ಎಂದು ಚರ್ಚೆಗಳ ಬಗ್ಗೆ ತಿಳಿದಿರುವ ಮೂಲವೊಂದು ತಿಳಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ಅಣ್ಣಾಮಲೈ ಅವರ ಸಂಭಾವ್ಯ ನಿರ್ಗಮನದ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದಾಗ, ಅವರ ಬೆಂಬಲಿಗರು ಮಧುರೈನಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ, ‘ಅಣ್ಣಾಮಲೈ ಮುಂದಿನ ಅವತಾರ’ವನ್ನು ಬಗ್ಗೆ ‘ತಮಿಳುನಾಡನ್ನು ಉಳಿಸಿ’ ಎಂದು ಒತ್ತಾಯಿಸಿದ್ದಾರೆ.
Chennai,Tamil Nadu













