ಎಲ್ಲರಿಗೂ ತಿಳಿದಿರುವಂತೆ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೊನೆಯ ಚಿತ್ರ ಜನ ನಾಯಗನ್ ಜುಲೈ 24 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸುದ್ದಿಯ ಬೆನ್ನಲ್ಲೇ, ತಮಿಳು ಸಿನಿಮಾ ಸಿಗ್ಮಾ ಮೂಲಕ ನಿರ್ದೇಶಕನಾಗಿ ಕಾಲಿವುಡ್ನಲ್ಲಿ ಪಾದಾರ್ಪಣೆ ಮಾಡುತ್ತಿರುವ ವಿಜಯ್ ಅವರ ಮಗ ಜೇಸನ್ ಸಂಜಯ್ ಸಿನಿಮಾ ರಿಲೀಸ್ ಮುಂದೂಡಿಕೆಯಾಗುವ ಸುದ್ದಿ ಸಿಕ್ಕಿದೆ.
ಸಿಗ್ಮಾ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಜಿಕೆಎಂ ತಮಿಳು ಕುಮಾರನ್ ಅದನ್ನು ನಿರ್ಮಿಸಿದ್ದಾರೆ ಎಂದು ಮೂಲಗಳು ಎನ್ಡಿಟಿವಿಗೆ ಪ್ರತ್ಯೇಕವಾಗಿ ತಿಳಿಸಿವೆ. ಜೇಸನ್ ಸಂಜಯ್ ಅವರ ಸಿಗ್ಮಾ ಜುಲೈ 31 ರಂದು ಬಿಡುಗಡೆಯಾಗುವುದಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
ಜೇಸನ್ ಅವರ ತಂದೆ ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ಬಿಡುಗಡೆ ನಿಗದಿಯಾಗಿರುವ ಕಾರಣ ಸಿಗ್ಮಾವನ್ನು ಆಗಸ್ಟ್ ಗೆ ಮುಂದೂಡಲಾಗಿದೆ ಎನ್ನಲಾಗಿದೆ.
ಜಿಕೆಎಂ ತಮಿಳು ಕುಮಾರನ್ ಮುಖ್ಯಸ್ಥರಾಗಿರುವ ಲೈಕಾ ಪ್ರೊಡಕ್ಷನ್ಸ್, ಸಿಗ್ಮಾ ಚಿತ್ರವನ್ನು ನಿರ್ಮಿಸಿದೆ. ಆದರೆ ಮೂಲಗಳು ಹೇಳುವಂತೆ ಜೇಸನ್ ಸಂಜಯ್ ಅವರ ನಟನೆಯ ಚೊಚ್ಚಲ ಚಿತ್ರವನ್ನು ತಮಿಳು ಕುಮಾರನ್ ತನ್ನದೇ ಆದ ಬ್ಯಾನರ್ ಅಡಿಯಲ್ಲಿ ನಿರ್ಮಿಸುವ ಸಾಧ್ಯತೆಯಿದೆ.
ಸಿಗ್ಮಾ ಸಿನಿಮಾದ ಬಗ್ಗೆ ಹೇಳುವುದಾದರೆ , ಈ ಚಿತ್ರದಲ್ಲಿ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಾಕಷ್ಟು ಕಾಮಿಡಿ ಸೀನ್ಸ್ ಹೊಂದಿದ್ದು ನಿಧಿ ಹುಡುಕಾಟದ ರೀತಿಯ ಸನ್ನಿವೇಶಗಳನ್ನು ಹೊಂದಿರುವ ಹೈ-ಆಕ್ಟೇನ್ ಎಂಟರ್ಟೈನರ್ ಎಂದು ಹೇಳಲಾಗುತ್ತಿದೆ
ತಮಿಳುನಾಡು ಮತ್ತು ಥೈಲ್ಯಾಂಡ್ನಾದ್ಯಂತ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಎಸ್ ಥಮನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಫರಿಯಾ ಅಬ್ದುಲ್ಲಾ, ರಾಜು ಸುಂದರಂ, ಸಂಪತ್ ರಾಜ್, ಶಿವ ಪಂಡಿತ್, ಅನ್ಬು ಥಾಸನ್, ಯೋಗ್ ಜಪೀ, ಮಗಲಕ್ಷ್ಮಿ, ಶೀಲಾ ರಾಜ್ಕುಮಾರ್, ಕಮಲೇಶ್, ಮತ್ತು ಕಿರಣ್ ಕೊಂಡ ಮುಂತಾದವರು ಇದ್ದಾರೆ.
ರಾಹುಲ್ ರವೀಂದ್ರನ್ ಅವರ ದಿ ಗರ್ಲ್ಫ್ರೆಂಡ್ನಲ್ಲಿ ಕೆಲಸ ಮಾಡಿದ ಛಾಯಾಗ್ರಾಹಕ ಕೃಷ್ಣನ್ ವಾಸನ್ ಒಂದು ಸಂದರ್ಶನದಲ್ಲಿ, ” ಸಿಗ್ಮಾ ಸುತ್ತಲೂ ಕ್ರೇಜಿ ಲೆವೆಲ್ ಪ್ರಚಾರವಿದೆ. ಅದು ನಾನು ಎಂದಿಗೂ ಅನುಭವಿಸದ ವಿಷಯ. ಆದರೆ ಜೇಸನ್ ಸಂಜಯ್ ಒಬ್ಬ ಶಾಂತ ವ್ಯಕ್ತಿಯಾಗಿರುವುದರಿಂದ ಯಾವುದೇ ಒತ್ತಡವಿಲ್ಲ. ಅವರು ಸಿನಿಮಾ ಕುಟುಂಬದಿಂದ ಬಂದಿದ್ದರೂ, ಚಲನಚಿತ್ರ ನಿರ್ಮಾಣವನ್ನು ಅಧ್ಯಯನ ಮಾಡಲು ಅವರು ಪ್ರಯತ್ನ ಮಾಡಿದರು. ನಾನು ಮೊದಲ ಬಾರಿಗೆ ಕೆಲಸ ಮಾಡುತ್ತಿರುವಂತೆ ಇರಲಿಲ್ಲ” ಎಂದು ಹೇಳಿದ್ದರು.
ನಟ ಸಂದೀಪ್ ಕಿಶನ್ ಕೂಡ ತಮ್ಮ ನಿರ್ದೇಶಕ ಜೇಸನ್ ಸಂಜಯ್ ಅವರನ್ನು ‘ಹಾರ್ಡ್ ವರ್ಕಿಂಗ್’ ಎಂದು ಹೊಗಳಿದ್ದಾರೆ. ವೆರೈಟಿಗೆ ನೀಡಿದ ಸಂದರ್ಶನದಲ್ಲಿ, ಜೇಸನ್ ತಮಗೆ ವಿಜಯ್ ಅವರನ್ನು ನೆನಪಿಸುತ್ತಾರೆ ಎಂದು ಅವರು ಹೇಳಿದರು.
“ಅವರು ಮತ್ತು ಅವರ ತಂಡವು ಈ ಸಿನಿಮಾದಲ್ಲಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಅವರು ಪ್ರೀ-ಪ್ರೊಡಕ್ಷನ್ ಮತ್ತು ಎಡಿಟಿಂಗ್ ಕೆಲಸವನ್ನು ಶ್ರಮ ವಹಿಸಿ ಮಾಡಿದ್ದಾರೆ. ತಾಳ್ಮೆಯ ಬಗ್ಗೆ ಅವರಿಂದ ಬಹಳಷ್ಟು ಕಲಿಯಬಹುದು, ಅದನ್ನು ನೋಡಿ ನಾನು ನಿಜವಾಗಿಯೂ ಬೆರಗಾದೆ ಎಂದಿದ್ದಾರೆ.
25 ವರ್ಷದ ಯುವಕನೊಬ್ಬ ತಾಳ್ಮೆ, ಶಾಂತತೆ ಮತ್ತು ನಿರ್ದೇಶನ ಮಾಡುವಾಗ ತನಗೆ ಬೇಕಾದುದನ್ನು ಸ್ಪಷ್ಟವಾಗಿ ತೋರಿಸಿದ್ದು ಅದ್ಭುತವಾಗಿತ್ತು. ಇಂದಿನ ಪೀಳಿಗೆ ಚಲನಚಿತ್ರ ನಿರೂಪಣೆಯನ್ನು ಹೇಗೆ ನೋಡುತ್ತದೆ ಎಂಬುದರ ಒಳನೋಟ ಜೇಸನ್ನಲ್ಲಿ ಕಂಡಿದೆ ಎಂದಿದ್ದಾರೆ.
ತಮ್ಮ ಚಿತ್ರದ ಬಗ್ಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಜೇಸನ್ ಸಂಜಯ್, “ಸಿಗ್ಮಾ ಸಿನಿಮಾ ಸಮಾಜದ ನಿರೀಕ್ಷೆಗಳಿಂದ ಕಟ್ಟಿಹಾಕಲ್ಪಟ್ಟಿಲ್ಲ. ತನ್ನದೇ ಆದ ಮಾರ್ಗವನ್ನು ಆರಿಸಿಕೊಳ್ಳುವ ‘ಸಿಗ್ಮಾ’ ಕಥೆ ಇದು. ಕಥೆಯು ನಿಧಿ-ಬೇಟೆಯ ರೋಮಾಂಚನಗಳು, ದರೋಡೆಯ ಸನ್ನಿವೇಶಗಳು, ಹಾಸ್ಯವನ್ನು ಹೊಂದಿದೆ” ಎಂದು ಹೇಳಿದ್ದರು.













