S Janaki: ಮೈಸೂರಿಂದ ಮದ್ರಾಸ್​ಗೆ, ಅಮ್ಮನ ಚಿನ್ನ ಅಡವಿಟ್ಟು ತನ್ನ ನೋಡಲು ಬಂದ ಬಾಲಕನಿಗೆ ಅಮ್ಮನಾದ್ರು ಜಾನಕಿ | | ACTPnews

S Janaki: ಮೈಸೂರಿಂದ ಮದ್ರಾಸ್​ಗೆ, ಅಮ್ಮನ ಚಿನ್ನ ಅಡವಿಟ್ಟು ತನ್ನ ನೋಡಲು ಬಂದ ಬಾಲಕನಿಗೆ ಅಮ್ಮನಾದ್ರು ಜಾನಕಿ |


ಸುಮಾರು 30 ವರ್ಷಗಳ ಹಿಂದೆ ಅಮ್ಮನ ಚಿನ್ನವನ್ನು ಅಡವಿಟ್ಟು ಜಾನಕಮ್ಮನ ನೋಡಲು ಹೋದ ಬಾಲಕನ ಮನಸ್ಸಿನಲ್ಲಿ ಎಷ್ಟೊಂದು ಅಭಿಮಾನ ಇದ್ದಿರಬಹುದಲ್ವಾ? ಹೌದು, ಜಸ್ಟ್ 13 ವರ್ಷವಿದ್ದಾಗ ಬಾಲಕನೊಬ್ಬ ತನ್ನ ನೆಚ್ಚಿನ ಗಾಯಕಿಯನ್ನು ಒಮ್ಮೆ ಕಣ್ಣಾರೆ ನೋಡಬೇಕೆಂದು ಅಮ್ಮನ ಚಿನ್ನ ಅಡವಿಟ್ಟು ಚೆನ್ನೈಗೆ ಓಡಿಹೋಗಿದ್ದ. ಅಂದಿನಿಂದ ಜಾನಕಮ್ಮನ ಆ ಬಾಲಕನಿಗೆ ಅಮ್ಮನಾದರು.

ಆ ದಿನ ತಾಯಿಯ ಒಡವೆ ಅಡವಿಟ್ಟು ಹೊರಟಿದ್ದ ಬಾಲಕ ಜಾನಕಿ ಅವರ ಕೊನೆಯ ದಿನಗಳಲ್ಲಿ ಮಗುವಿನಂತೆ ಆರೈಕೆ ಮಾಡಿ ನೋಡಿಕೊಂಡರು. ಎಂಥಾ ರಕ್ತ ಸಂಬಂಧ, ಎಂಥಾ ಬಂಧುಗಳು.. ಅಭಿಮಾನ ಹಾಗೂ ಮಮತೆಯಿಂದಲೇ ಹುಟ್ಟಿಕೊಂಡ ಇಂಥಹ ಅಮ್ಮ-ಮಗನ ಬಂಧವನ್ನು ಪದಗಳಲ್ಲಿ ಹೇಳೋಕೆ ಸಾಧ್ಯವೇ?

ಜಾನಕಿ ಅವರ ಅಂತ್ಯಸಂಸ್ಕಾರ ಅಭಿಮಾನಿಯ ಮಣ್ಣಿನಲ್ಲೇ ನೆರವೇರಿತು. ಜಾನಕಿ ಅವರು ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗೆ ಬರುತ್ತಿರುತ್ತಾರೆ ಎಂದು ತಿಳಿದುಕೊಂಡಿದ್ದ ನವೀನ್ ಅವರು ಸ್ಟುಡಿಯೋ ಗೇಟ್ ಬಳಿ ಕಾಯುತ್ತಿದ್ದರು.

ನಿರ್ಮಾಪಕ ಎಂ.ಪಿ. ಶಂಕರ್ ಬಾಲಕನನ್ನು ಗಮನಿಸಿ ಒಂದು ದಿನ ಆತನನ್ನು ಹತ್ತಿರ ಕರೆದು ವಿಚಾರಿಸಿದರು. ನವೀನ್‌ನ ಅಭಿಮಾನಕ್ಕೆ ಬೆರಗಾಗಿ ಜಾನಕಿ ಅವರ ಚೆನ್ನೈ ನಿವಾಸದ ಫೋನ್ ನಂಬರ್ ಕೊಟ್ಟಿದ್ದರು.

ಜಾನಕಮ್ಮನಿಗೆ ನವೀನ್ ಕರೆ

ಸಹೋದರ ಪವನ್ ಜತೆಗೂಡಿ ಜಾನಕಿ ಅವರ ಮನೆಗೆ ಕರೆ ಮಾಡಿದ ನವೀನ್, ಭೇಟಿಗೆ ಅವಕಾಶ ಕೇಳಿಕೊಂಡಿದ್ದರು. ಜಾನಕಿ ಅವರು ತಾನು ಮಾತನಾಡುತ್ತಿರುವುದು ಒಬ್ಬ ಪುಟ್ಟ ಬಾಲಕ ಎಂಬುದನ್ನು ಕೂಡಾ ತಿಳಿಯದೆಯೇ ಭೇಟಿ ಮಾಡೋಕೆ ಒಪ್ಪಿಗೆ ಕೊಟ್ಟಿದ್ದರು.

ದಿನವೂ ತಾನು ಭೇಟಿ ಮಾಡಬೇಕು ಎಂದುಕೊಂಡಿದ್ದ ವ್ಯಕ್ತಿ ಬನ್ನಿ ಭೇಟಿ ಮಾಡಿ ಅಂತ ಹೇಳಿದ್ರೂ 13 ವರ್ಷದ ಹುಡುಗನಲ್ಲಿ ಮದ್ರಾಸ್​ಗೆ ಹೋಗೋ ದುಡ್ಡು ಎಲ್ಲಿಂದ ತಾನೇ ಇರುತ್ತೆ? ಚೆನ್ನೈಗೆ ಹೋಗಲು ಆ ಪುಟ್ಟ ಹುಡುಗರ ಬಳಿ ಹಣವಿರಲಿಲ್ಲ. ಆಗ ನವೀನ್ ಸದ್ದಿಲ್ಲದೆ ತಾಯಿಯ ಚಿನ್ನ ಅಡವಿಟ್ಟು ಹಣ ಹೊಂದಿಸಿದ್ದ.

ಸಹೋದರನ ಕೈ ಹಿಡಿದು ರೈಲು ಹತ್ತಿದ್ದ ನವೀನ್

ಸಹೋದರನ ಕೈಹಿಡಿದು ರೈಲಿನಲ್ಲಿ ಚೆನ್ನೈಗೆ ಮುಖ ಮಾಡಿದ. ತಮ್ಮನ್ನು ನೋಡಲು ಮೈಸೂರಿನಿಂದ ಬಂದಿರುವುದು 13 ವರ್ಷದ ಪುಟ್ಟ ಬಾಲಕ ಎಂದು ತಿಳಿದಾಗ ಜಾನಕಿ ಅಮ್ಮನ ಕಣ್ಣಾಲಿಗಳು ತುಂಬಿದ್ದವು. ಆ ಮೊದಲ ಭೇಟಿಯಿಂದಲೇ ನವೀನ್‌ಗೆ ಜಾನಕಮ್ಮನ ಬದುಕಿನಲ್ಲಿ ವಿಶೇಷ ಸ್ಥಾನ ಸಿಕ್ಕಾಗಿತ್ತು.

ಮೈಸೂರಿಗೆ ಬಂದಾಗಲೆಲ್ಲ ಜಾನಕಮ್ಮ ಆತನನ್ನು ಭೇಟಿಯಾಗುತ್ತಿದ್ದರು. ಪುಟ್ಟ ಹುಡುಗನನ್ನು ಮಗನೆಂದೇ ಪರಿಗಣಿಸಿದ ಅವರ ಮಧ್ಯೆ ರಕ್ತಸಂಬಂಧವನ್ನೂ ಮೀರಿದ ಅಮ್ಮ-ಮಗನ ಬಾಂಧವ್ಯ ಗಟ್ಟಿಯಾಗಿತ್ತು.

ಜಾನಕಮ್ಮನವರ ಇಳಿ ವಯಸ್ಸಿನಲ್ಲಿ ಅವರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ನವೀನ್. ನವೀನ್ ಆರಂಭದಲ್ಲಿ ಎನ್.ಆರ್. ಮೊಹಲ್ಲಾದ ತಮ್ಮ ಮನೆಯಲ್ಲೇ ಇರಿಸಿಕೊಂಡು ಉಪಚರಿಸಿದರು. ಬಳಿಕ ಸ್ನೇಹಿತನ ಮಹದೇವಪುರ ರಸ್ತೆಯ ತೋಟದ ಮನೆಯಲ್ಲಿ ಪ್ರಶಾಂತ ವಾತಾವರಣ ಕಲ್ಪಿಸಿದರು. ಜಾನಕಿ ಅವರ ಆರೈಕೆಯನ್ನು ನವೀನ್ ಅವರ ತಾಯಿ ಶಾಂತಾ ಅವರು ಸ್ವಂತ ಸಹೋದರಿಯಂತೆ ಮಮತೆಯಿಂದ ಮಾಡಿದರು.

ಹೈದರಾಬಾದ್​ನಲ್ಲಿದ್ದರೂ ಮನಸು ಮೈಸೂರು ಕಡೆ ಬಾಗಿತು

ಕೆಲವು ವರ್ಷ ಹೈದರಾಬಾದ್‌ನಲ್ಲಿ ವಾಸವಿದ್ದ ಜಾನಕಿ ಅವರು, ಕೊನೆಯ ದಿನಗಳಲ್ಲಿ ಮತ್ತೆ ಮೈಸೂರಿನ ಬೋಗಾದಿ ನಿವಾಸಕ್ಕೇ ಮರಳಿ ಬಂದಿದ್ದರು. ಜಾನಕಿ ಅವರ ಅಂತ್ಯಸಂಸ್ಕಾರ ನೆರವೇರಿದ್ದೂ ಸಹ ನವೀನ್ ಅವರ ಕಣಿಯನಹುಂಡಿಯ ತೋಟದ ಮನೆಯಲ್ಲಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed