Last Updated:
ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದ ಹಿನ್ನೆಲೆ ಬಂಧನದ ಭೀತಿ ಎದುರಿಸುತ್ತಿದ್ದ ನಟ ಪ್ರಕಾಶ್ ರಾಜ್ಗೆ ಬಿಗ್ ರಿಲೀಫ್ ಸಿಕ್ಕಿದೆ.
ಬೆಂಗಳೂರು: ನಾಲ್ಕು ವೋಟರ್ ಐಡಿ (Voter ID) ಹೊಂದಿರುವ ಆರೋಪ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ಗೆ (Prakash Raj) ಬಿಗ್ ರಿಲೀಫ್ ಸಿಕ್ಕಿದೆ. ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದ ಹಿನ್ನೆಲೆ ಬಂಧನದ ಭೀತಿ ಎದುರಿಸುತ್ತಿದ್ದ ನಟ ಪ್ರಕಾಶ್ ರಾಜ್ಗೆ 48ನೇ ಎಸಿಜೆಎಂ ಕೋರ್ಟ್ ಜಾಮೀನು (Bail) ಮಂಜೂರು ಮಾಡಿದೆ.
ನಟ ಪ್ರಕಾಶ್ ರಾಜ್ ಪರ ವಕೀಲರು ಇಂದು ಬೆಳಗ್ಗೆ ವಾರಂಟ್ ರಿಕಾಲ್ಗೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಖುದ್ದು ಪ್ರಕಾಶ್ ರಾಜ್ ಅವರೇ ವಾರೆಂಟ್ ರೀಕಾಲ್ ಮಾಡಿಸಲು ಕೋರ್ಟ್ ಹಾಜರಾಗಿದ್ದರು. ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ಆರಂಭಿಸಿ 48ನೇ ಎಸಿಜೆಎಂ ಕೋರ್ಟ್, ಪ್ರಕಾಶ್ ರಾಜ್ಗೆ ಜಾಮೀನು ಮಂಜೂರು ಮಾಡಿದೆ. ನಾಲ್ಕು ಸಾವಿರ ಕ್ಯಾಶ್ ಶ್ಯೂರಿಟಿ ಕಟ್ಟಲು ಸೂಚಿಸಿ ಆದೇಶ ಹೊರಡಿಸಿದೆ.
ಪ್ರಕಾಶ್ ರಾಜ್ ಹೆಸರಿನಲ್ಲಿ ನಾಲ್ಕು ಗುರುತಿನ ಚೀಟಿ ಹೊಂದಿರುವ ಆರೋಪ ಕೇಳಿ ಬಂದಿತ್ತು. ಕರ್ನಾಟಕ, ತಮಿಳುನಾಡು, ತೆಲಂಗಾಣ ಸೇರಿ ನಾಲ್ಕು ಕಡೆಗಳಲ್ಲಿ ಗುರುತಿನ ಚೀಟಿ ಹೊಂದಿರುವ ಆರೋಪ ಕೇಳಿ ಬಂದಿದ್ದು ವಕೀಲ ದಿಲೀಪ್ ಕುಮಾರ್ ಅವರಿಂದ ದೂರು ದಾಖಲಾಗಿತ್ತು.
ಮೊದಲಿಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದೂರು ದಾಖಲಾಗಿತ್ತು. ನಂತರ ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ತದನಂತರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಎಲ್ಲೂ ಕ್ರಮ ಕೈಗೊಳ್ಳದ ಕಾರಣ ಕೋರ್ಟ್ ಮೊರೆ ಹೋಗಲಾಗಿತ್ತು. ಪ್ರಕಾಶ್ ರಾಜ್ಗೆ ಕೋರ್ಟ್ ಸಮನ್ಸ್ ಜಾರಿ ಮಾಡಲಾಗಿತ್ತು. ಆದ್ರೆ, ನಟ ಪ್ರಕಾಶ್ ರಾಜ್ ಸಮನ್ಸ್ಗೆ ಉತ್ತರ ನೀಡದ ಹಿನ್ನೆಲೆ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
(ವರದಿ: ಗಂಗಾಧರ ವಾಗಟ, ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka














