Last Updated:
ಕರೂರ್ ಪ್ರವಾಸದ ವೇಳೆ ಮುಖ್ಯಮಂತ್ರಿ ವಿಜಯ್, ಕಾಲ್ತುಳಿತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದ 32 ಕುಟುಂಬಗಳಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.
ಕರೂರ್ ಕಾಲ್ತುಳಿತ ದುರಂತದ ಬಳಿಕ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಭರವಸೆಯನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C. Joseph Vijay) ಮತ್ತೊಮ್ಮೆ ಕಾರ್ಯರೂಪಕ್ಕೆ ತಂದಿದ್ದಾರೆ. ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕರೂರ್‌ಗೆ (Karur) ಭೇಟಿ ನೀಡಿದ ಅವರು, ಕಾಲ್ತುಳಿತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿ. ಜೋಸೆಫ್ ವಿಜಯ್ ಮೊದಲ ಬಾರಿಗೆ ಕರೂರ್ ಜಿಲ್ಲೆಗೆ ಭೇಟಿ ನೀಡಿದರು. ಕಳೆದ ವರ್ಷ ನಡೆದ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟ ಘಟನೆ ರಾಜ್ಯದಾದ್ಯಂತ ಭಾರಿ ಆಘಾತ ಮೂಡಿಸಿತ್ತು. ಆ ಘಟನೆಯ ನಂತರ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು.
ಕರೂರ್ ಪ್ರವಾಸದ ವೇಳೆ ಮುಖ್ಯಮಂತ್ರಿ ವಿಜಯ್, ಕಾಲ್ತುಳಿತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದ 32 ಕುಟುಂಬಗಳಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಸಂತ್ರಸ್ತ ಕುಟುಂಬದ ಸದಸ್ಯರು ಭಾಗವಹಿಸಿದ್ದು, ಸರ್ಕಾರದ ನೆರವಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಉದ್ಯೋಗ ನೀಡುವ ಮೂಲಕ ಕುಟುಂಬಗಳ ಆರ್ಥಿಕ ಸ್ಥಿತಿಗೆ ಬೆಂಬಲ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ತಿಳಿಸಲಾಯಿತು.
ಕರೂರ್ ಜಿಲ್ಲೆಯ ಅಭಿವೃದ್ಧಿಗೆ ಮತ್ತೊಂದು ದೊಡ್ಡ ಹೆಜ್ಜೆಯಾಗಿ ಮುಖ್ಯಮಂತ್ರಿ ವಿಜಯ್ ಸುಮಾರು 1,700 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು. ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ಕಾಮಗಾರಿ, ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಗಳ ವಿಸ್ತರಣೆಗೆ ಸಂಬಂಧಿಸಿದ ಹಲವು ಯೋಜನೆಗಳು ಇದರಲ್ಲಿ ಸೇರಿವೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ಕರೂರ್ ಕಾಲ್ತುಳಿತ ದುರಂತವನ್ನು ನೆನೆದು ಭಾವುಕರಾದರು. ಆ ಘಟನೆಯಲ್ಲಿ ಮೃತಪಟ್ಟವರ ಬಗ್ಗೆ ಆಳವಾದ ಸಂತಾಪ ವ್ಯಕ್ತಪಡಿಸಿದ ಅವರು, ಇದು ತಮ್ಮನ್ನು ವೈಯಕ್ತಿಕವಾಗಿಯೂ ನೋಯಿಸಿದೆ ಎಂದು ಹೇಳಿದರು. ‘ನಾವು ನಮ್ಮ ಕುಟುಂಬದವರನ್ನೇ ಕಳೆದುಕೊಂಡಂತಾಗಿದೆ. ಆ ದುಃಖವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿಜಯ್ ಪೊಲೀಸರ ಕಾರ್ಯವೈಖರಿಯ ಮೇಲೂ ಪ್ರಶ್ನೆ ಎತ್ತಿದರು. ಜನಸಂದಣಿ ನಿಯಂತ್ರಣ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಮಾಹಿತಿ ಇದ್ದರೆ ಮುಂಚಿತವಾಗಿಯೇ ಎಚ್ಚರಿಕೆ ನೀಡಬಹುದಿತ್ತು ಎಂದು ಅವರು ಹೇಳಿದರು. ಅಗತ್ಯವಿದ್ದರೆ ಸಭೆಯನ್ನು ರದ್ದುಗೊಳಿಸುವ ಅಧಿಕಾರವೂ ಪೊಲೀಸರಿಗೆ ಇತ್ತು. ಆದರೆ ಅಂತಹ ಕ್ರಮ ಕೈಗೊಳ್ಳದೆ ಕಾರ್ಯಕ್ರಮ ಮುಂದುವರಿಯಲು ಅವಕಾಶ ನೀಡಲಾಯಿತು ಎಂದು ಅವರು ಆರೋಪಿಸಿದರು.
Bangalore [Bangalore],Bangalore,Karnataka














