Last Updated:
ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ಜೀವನದಲ್ಲಿ ನಡೆದ ಅತ್ಯಂತ ಭಯಾನಕ ಘಟನೆಯೊಂದನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ಜೀವನದಲ್ಲಿ ನಡೆದ ಅತ್ಯಂತ ಭಯಾನಕ ಘಟನೆಯೊಂದನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಅವರ ನಿವಾಸದಲ್ಲಿ ನಡೆದ ಚಾಕು ದಾಳಿ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಆ ಘಟನೆ ಬಗ್ಗೆ ಮಾತನಾಡಿರುವ ಸೈಫ್, ಆ ದಿನದ ನೆನಪು ಇಂದಿಗೂ ತಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವುದಾಗಿ ನಟ ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಹೇಳುವ ಪ್ರಕಾರ, ದಾಳಿಕೋರ ಮನೆಯ ಬಾತ್ರೂಮ್ ಕಿಟಕಿಯ ಮೂಲಕ ಒಳನುಗ್ಗಿದ್ದ. ಮನೆಯೊಳಗೆ ಪ್ರವೇಶಿಸಿದ ಬಳಿಕ ಆತ ನೇರವಾಗಿ ಪುತ್ರ ಜೆಹ್ ಮಲಗಿದ್ದ ಕೊಠಡಿಗೆ ತೆರಳಿದ್ದಾನೆ. ಆ ಸಮಯದಲ್ಲಿ ಮಗುವಿನ ಆರೈಕೆಗೆ ನೇಮಿಸಲಾಗಿದ್ದ ದಾದಿ ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ಸೈಫ್ ಅವರ ಕೊಠಡಿಗೆ ಬಂದು ಅಪಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೈಯಲ್ಲಿ ಚಾಕು ಹಿಡಿದಿದ್ದ ವ್ಯಕ್ತಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ ಎಂದು ತಿಳಿಸಿದ ತಕ್ಷಣ ಸೈಫ್ ಯಾವುದೇ ವಿಳಂಬ ಮಾಡದೆ ಮಗನ ಕೊಠಡಿಯತ್ತ ಧಾವಿಸಿದ್ದಾರೆ.
ಮಗ ಅಪಾಯದಲ್ಲಿದ್ದಾನೆ ಎಂಬ ವಿಚಾರ ತಿಳಿದ ಕೂಡಲೇ ಸೈಫ್ ಅಲಿ ಖಾನ್ ಯಾವುದೇ ಭಯವಿಲ್ಲದೆ ದಾಳಿಕೋರನ ಎದುರು ನಿಂತರು. ತಮ್ಮ ಮಗನನ್ನು ರಕ್ಷಿಸುವ ಉದ್ದೇಶದಿಂದ ಅವರು ನೇರವಾಗಿ ದಾಳಿಕೋರನ ಮೇಲೆ ಹಾರಿಬಿದ್ದಿದ್ದಾರೆ.
ಆ ದಿನದ ಘಟನೆ ಬಗ್ಗೆ ಮಾತನಾಡಿದ ಸೈಫ್, ಒಂದು ವೇಳೆ ತಾವು ಸ್ವಲ್ಪ ಸಮಯ ತೆಗೆದುಕೊಂಡು ಲೈಟ್ ಆನ್ ಮಾಡಿ ಆ ವ್ಯಕ್ತಿಯೊಂದಿಗೆ ಮಾತನಾಡಿದ್ದರೆ ಪರಿಸ್ಥಿತಿ ಬೇರೆಯಾಗಿ ಇರಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆತ ಎಲ್ಲಿಗೆ ಬಂದಿದ್ದಾನೆ ಎಂಬ ಅರಿವು ಅವನಿಗೂ ಆಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಆ ಕ್ಷಣದಲ್ಲಿ ಮಗನ ಸುರಕ್ಷತೆಯೇ ಮುಖ್ಯವಾಗಿದ್ದ ಕಾರಣ ಯಾವುದೇ ಯೋಚನೆ ಮಾಡದೇ ತಕ್ಷಣ ಪ್ರತಿಕ್ರಿಯೆ ನೀಡಿದ್ದಾಗಿ ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಹೇಳುವಂತೆ, ದಾಳಿಕೋರ ಯಾವುದೇ ಹಿಂಜರಿಕೆಯಿಲ್ಲದೆ ಸತತವಾಗಿ ಚಾಕುವಿನಿಂದ ಇರಿದ. ತನ್ನನ್ನು ಕೊಲ್ಲುವ ಉದ್ದೇಶದಲ್ಲೇ ಆತ ದಾಳಿ ನಡೆಸಿದಂತೆ ಅನಿಸಿತು ಎಂದು ಅವರು ಹೇಳಿದ್ದಾರೆ. ಈ ಘಟನೆಯಲ್ಲಿ ತಮ್ಮ ಮಗ ಜೆಹ್ಗೂ ಗಾಯಗಳಾಗಿದ್ದವು ಎಂಬ ಸಂಗತಿಯನ್ನು ಅವರು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
ಆ ದಿನದ ಭೀಕರ ಕ್ಷಣಗಳನ್ನು ನೆನಪಿಸಿಕೊಂಡ ಸೈಫ್ ಅಲಿ ಖಾನ್, ಜೀವನದಲ್ಲಿ ಮೊದಲ ಬಾರಿಗೆ ತಾವು ನಿಜವಾಗಿಯೂ ಸಾವಿನ ಭಯವನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ. ತಮ್ಮ ಬಿಳಿ ಬಣ್ಣದ ಕುರ್ತಾ-ಪೈಜಾಮಾ ಸಂಪೂರ್ಣ ರಕ್ತದಿಂದ ನೆನೆದಿತ್ತು. ಒಂದು ಹಂತದಲ್ಲಿ ತಾವು ನೆಲದ ಮೇಲೆ ಬಿದ್ದಿದ್ದೆ ಮತ್ತು ಅಲ್ಲಿಯೇ ಜೀವ ಹೋಗಬಹುದು ಎಂದು ಭಾವಿಸಿದ್ದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಬಳಿಕ ತಮ್ಮ ಕುಟುಂಬದ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದಾಗಿ ಸೈಫ್ ತಿಳಿಸಿದ್ದಾರೆ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸೈಫ್ ಅಲಿ ಖಾನ್ ಇತ್ತೀಚಿನ ಸಂದರ್ಶನದಲ್ಲಿ ಈ ಘಟನೆ ಕುರಿತು ನೀಡಿದ ಹೊಸ ವಿವರಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮನರಂಜನಾ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
Bangalore [Bangalore],Bangalore,Karnataka













