Last Updated:
ಚಿತ್ರ ಮಾ ಇಂಟಿ ಬಂಗಾರಂ ತೆರೆಕಂಡ ದಿನವೇ, ರಾಜ್ ನಿಡಿಮೋರು (Raj Nidimoru) ಅವರ ಸಹೋದರಿ ಶೀತಲ್ ನಿಡಿಮೋರು (Sheetal Nidimoru) ಸಮಂತಾ ಬಗ್ಗೆ ಬರೆದ ಹೃದಯಸ್ಪರ್ಶಿ ನೋಟ್ ವೈರಲ್ ಆಗಿದೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಪರದೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ನಿಜವಾದ ಬಂಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಹೊಸ ಚಿತ್ರ ಮಾ ಇಂಟಿ ಬಂಗಾರಂ ತೆರೆಕಂಡ ದಿನವೇ, ರಾಜ್ ನಿಡಿಮೋರು (Raj Nidimoru) ಅವರ ಸಹೋದರಿ ಶೀತಲ್ ನಿಡಿಮೋರು (Sheetal Nidimoru) ಸಮಂತಾ ಬಗ್ಗೆ ಬರೆದ ಹೃದಯಸ್ಪರ್ಶಿ ನೋಟ್ ವೈರಲ್ ಆಗಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ, ರಾತ್ರಿ 3 ಗಂಟೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನನ್ನು ಸಮಂತಾ ಹೇಗೆ ತಾಯಿಯಂತೆ ಆರೈಕೆ ಮಾಡಿದರು ಎಂಬುದನ್ನು ಶೀತಲ್ ನೆನಪಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆಗೂ ಮುನ್ನವೇ ತಾನು ನಿಜವಾದ ಬಂಗಾರವನ್ನು ಭೇಟಿಯಾಗಿದ್ದೆ ಎಂದು ಶೀತಲ್ ಬರೆದುಕೊಂಡಿದ್ದಾರೆ.
ಶೀತಲ್ ನಿಡಿಮೋರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಮಂತಾ ಅವರ ಸಿನಿಮಾ ನೋಡಿಲ್ಲ, ಆದರೆ ಅವರನ್ನು ರಾತ್ರಿ 3 ಗಂಟೆಗೆ ನೋಡಿದ್ದೇನೆ ಎಂದು ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ರಾಜ್ ನಿಡಿಮೋರು ಜೊತೆ ಮದುವೆಯಾದ ಕೆಲವೇ ದಿನಗಳ ಬಳಿಕ ಶೀತಲ್ ಹೈದರಾಬಾದ್‌ನಲ್ಲಿ ಸಮಂತಾ ಅವರ ಮನೆಯಲ್ಲಿ ತಂಗಿದ್ದರು. ಆ ರಾತ್ರಿ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಾಂತಿ, ತಲೆನೋವು ಕಾಣಿಸಿಕೊಂಡು ನಡುಗಲು ಆರಂಭಿಸಿದ್ದರು. ಔಷಧಿ ಮತ್ತು ಹೆಚ್ಚುವರಿ ಹೊದಿಕೆ ಹುಡುಕಲು ಹಾಸಿಗೆಯಿಂದ ಏಳಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿದ್ದರು.
ಅಸಹಾಯಕ ಸ್ಥಿತಿಯಲ್ಲಿ ಶೀತಲ್ ಕುಟುಂಬದ ವಾಟ್ಸಾಪ್ ಗ್ರೂಪ್‌ಗೆ ಮೆಸೇಜ್ ಕಳುಹಿಸಿ ಮನೆಯಲ್ಲಿ ಔಷಧಿ ಇದೆಯಾ, ಹೊದಿಕೆ ಎಲ್ಲಿ ಸಿಗುತ್ತೆ ಎಂದು ಕೇಳಿದ್ದರು. ಕೆಲವೇ ನಿಮಿಷಗಳಲ್ಲಿ ಸಮಂತಾ ನಾನು ಬರುತ್ತೇನೆ ಎಂದು ಉತ್ತರಿಸಿದ್ದಾರೆ. ಯಾರನ್ನೂ ಎಬ್ಬಿಸದೆ, ಪತಿ ರಾಜ್‌ಗೂ ಹೇಳದೆ, ಸಮಂತಾ ಅವರೇ ಸ್ವತಃ ಬಂದಿದ್ದಾರೆ ಎಂದು ಶೀತಲ್ ಬರೆದುಕೊಂಡಿದ್ದಾರೆ. ಹೊದಿಕೆ ಸಿಗದ ಕಾರಣ ದೊಡ್ಡ ಟವೆಲ್‌ಗಳನ್ನೇ ಮೈತುಂಬಾ ಸುತ್ತಿ ಬೆಚ್ಚಗೆ ಮಾಡಿದ್ದಾರೆ. ಔಷಧಿ, ನೀರು ಕೊಟ್ಟು ಪದೇ ಪದೇ ಆರೋಗ್ಯ ವಿಚಾರಿಸಿದ್ದಾರೆ.
ಆ ರಾತ್ರಿ ಮದುವೆ ಕಾರ್ಯಕ್ರಮಗಳಿಂದ ಸಮಂತಾ ನಿದ್ರೆಯನ್ನೇ ಮಾಡಿರಲಿಲ್ಲ. ಮರುದಿನ ಬೆಳಗ್ಗೆ ದಿನ ಪೂರ್ತಿ ಶೂಟಿಂಗ್ ಇತ್ತು. ಆದರೂ ಶೀತಲ್ ಅವರನ್ನು ನೋಡಿಕೊಳ್ಳಲು ಇಡೀ ರಾತ್ರಿ ಎಚ್ಚರವಾಗಿದ್ದರು. ಮರುದಿನ ಸೆಟ್‌ಗೆ ಹೋದಾಗ ಸಮಂತಾ ಸೀರೆಯಲ್ಲಿ ಸ್ವಂತ ಸಾಹಸ ದೃಶ್ಯಗಳನ್ನು ಮಾಡುತ್ತಾ, ನಗುತ್ತಾ, ಇಡೀ ರಾತ್ರಿ ಮಲಗಿದವರಂತೆ ಕೆಲಸ ಮಾಡುತ್ತಿದ್ದರು ಎಂದು ಶೀತಲ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸೆಟ್‌ನಲ್ಲಿ ಮೊದಲು ಕೇಳಿದ್ದು ಶೂಟಿಂಗ್ ಬಗ್ಗೆ ಅಲ್ಲ, ಈಗ ಹೇಗಿದ್ದೀಯಾ ಎಂಬ ಕಾಳಜಿಯ ಮಾತು.
ಆಯಾಸದಲ್ಲೂ ಕರಗದ ಕರುಣೆ, ಕಷ್ಟದಲ್ಲೂ ಮರೆಯಾಗದ ಮಾನವೀಯತೆ ಸಮಂತಾ ಅವರಲ್ಲಿದೆ ಎಂದು ಶೀತಲ್ ಭಾವುಕರಾಗಿದ್ದಾರೆ. ಜೀವನ ಸುಲಭವಾಗಿದ್ದಾಗ ತೋರುವ ದಯೆಯಲ್ಲ, ನೀವೇ ಸುಸ್ತಾಗಿರುವಾಗಲೂ ಉಳಿಯುವ ದಯೆ ಅದು ಎಂದು ಬರೆದಿದ್ದಾರೆ. ಯಾರಿಗೂ ತಿಳಿಯದಂತೆ ರಾತ್ರಿಯಿಡೀ ಸೇವೆ ಮಾಡಿ, ಬೆಳಗ್ಗೆ ಏನೂ ಆಗಿಲ್ಲವೆಂಬಂತೆ ಕ್ಯಾಮೆರಾ ಎದುರಿಸುವ ಶಕ್ತಿ ಸಮಂತಾ ಅವರದ್ದು ಎಂದು ಶ್ಲಾಘಿಸಿದ್ದಾರೆ.
ಜೂನ್ 19 ರಂದು ಮಾ ಇಂಟಿ ಬಂಗಾರಂ ಚಿತ್ರ ತೆರೆಕಂಡಿದೆ. ಬಿಡುಗಡೆಗೂ ಮುನ್ನ ಸಮಂತಾ ಮತ್ತು ರಾಜ್ ನಿಡಿಮೋರು ಚಿತ್ರತಂಡದೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಕ್ತರ ನೂಕುನುಗ್ಗಲಿನಲ್ಲಿ ರಾಜ್ ಸಮಂತಾ ಅವರನ್ನು ರಕ್ಷಿಸುತ್ತಾ ಕರೆದೊಯ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Bangalore [Bangalore],Bangalore,Karnataka













