Last Updated:
1982ರ ನಂತರ ಮೊದಲ ಬಾರಿಗೆ ಭಾರತೀಯ ಮಹಿಳಾ ಹಾಕಿ ತಂಡವು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಭಾರತದ ಮಹಿಳಾ ಹಾಕಿ ತಂಡವು (Indian Women’s Hockey Team) 2026ರ ಏಷ್ಯನ್ ಗೇಮ್ಸ್ನಲ್ಲಿ (Asian Games) ಇತಿಹಾಸ ನಿರ್ಮಿಸಿದೆ. ಫೈನಲ್ನಲ್ಲಿ ಚೀನಾವನ್ನು (China) 1-0 ಗೋಲುಗಳಿಂದ ಸೋಲಿಸಿ ಭಾರತ (India) ತಂಡವು ಚಿನ್ನದ ಪದಕವನ್ನು (Gold Medal) ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಭಾರತೀಯ ಮಹಿಳಾ ಹಾಕಿ ತಂಡವು 2028ರ ಒಲಿಂಪಿಕ್ಸ್ಗೂ ಕೂಡ ಅರ್ಹತೆ ಪಡೆದುಕೊಂಡಿದೆ.
ಮೊದಲ ಕ್ವಾರ್ಟರ್ನಲ್ಲಿ ಭಾರತೀಯ ತಂಡವು ಮುನ್ನಡೆ ಸಾಧಿಸಿತ್ತು. ಭಾರತದ ಪರವಾಗಿ ಲಾಲ್ರೆಮ್ಸಿಯಾಮಿ ಏಕೈಕ ಗೋಲು ಗಳಿಸಿದರು. ಲಾಲ್ರೆಮ್ಸಿಯಾಮಿ ಅವರ ಈ ಗೋಲು ಭಾರತದ ಗೆಲುವಿಗೆ ಮುಖ್ಯ ಕಾರಣವಾಗಿದೆ. ಇದರ ನಂತರ ಉಭಯ ತಂಡಗಳಿಗೂ ಗೋಲು ಗಳಿಸಲು ವಿಫಲರಾದವು. ಈ ಮೂಲಕ ಭಾರತ ತಂಡವು ಹಾಲಿ ಚಾಂಪಿಯನ್ ವಿರುದ್ಧ 1-0 ಅಂತರದ ಜಯಭೇರಿ ಬಾರಿಸಿದೆ.
ಭಾರತೀಯ ತಂಡವು 10ನೇ ನಿಮಿಷದಲ್ಲೇ ಪಂದ್ಯದ ಏಕೈಕ ಗೋಲು ಗಳಿಸಿತ್ತು. ಆ ಬಳಿಕ ಮುಂದಿನ 50 ನಿಮಿಷಗಳ ಕಾಲ ಚೀನಾ ತಂಡವು ಗೋಲು ಗಳಿಸಲು ನಿರಂತರವಾಗಿ ಪ್ರಯತ್ನ ನಡೆಸಿತಾದರೂ ಯಶಸ್ಸು ಸಿಗಲಿಲ್ಲ. ಫೈನಲ್ ಪಂದ್ಯದಲ್ಲಿ ಮುನ್ನಡೆ ಪಡೆದ ನಂತರ ಭಾರತ ತಂಡದ ಡಿಫೆನ್ಸ್ (ರಕ್ಷಣೆ) ನೋಡಲು ಅತ್ಯಂತ ಅದ್ಭುತವಾಗಿತ್ತು. ಚೀನಾದ ಆಟಗಾರ್ತಿಯರು ಭಾರತದ ಡಿಫೆನ್ಸ್ ಅನ್ನು ಭೇದಿಸಲು ಸಾಕಷ್ಟು ಪ್ರಯತ್ನ ನಡೆಸಿದರಾದರೂ, ಗೋಲ್ಕೀಪರ್ ಸವಿತಾ ಎಂಬ ತಡೆಗೋಡೆಯನ್ನು ದಾಟಲು ಸಾಧ್ಯವಾಗಲಿಲ್ಲ.
2026ರ ಏಷ್ಯನ್ ಗೇಮ್ಸ್ನಲ್ಲಿ ಶುಕ್ರವಾರದ ದಿನವು ಭಾರತಕ್ಕೆ ಅತ್ಯಂತ ವಿಶೇಷವಾಗಿತ್ತು. ಇಂದು ಭಾರತದ ಖಾತೆಗೆ ಒಟ್ಟು 6 ಚಿನ್ನದ ಪದಕಗಳು ಬಂದಿವೆ. ಭಾರತವು ಇಂದು 13 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಪದಕಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನಕ್ಕೇರಿದೆ. ಭಾರತದ ಒಟ್ಟು ಪದಕಗಳ ಸಂಖ್ಯೆ ಈಗ 76ಕ್ಕೆ ತಲುಪಿದೆ.
ಇನ್ನು, ಭಾರತದ ವನಿತೆಯರ ತಂಡ ಚಿನ್ನದ ಪದಕ ಗೆಲ್ಲುತ್ತಿದ್ದಂತೆ, ಪ್ರಧಾನಿ ಮೋದಿ ಅವರು ಶುಭಕೋರಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತೀಯ ಹಾಕಿ ತಂಡಕ್ಕೆ ಇದೊಂದು ಅತ್ಯಂತ ವಿಶೇಷ ಕ್ಷಣ. ಏಷ್ಯನ್ ಗೇಮ್ಸ್ನಲ್ಲಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿರುವ ಮತ್ತು ಅದು ಕೂಡ ನಾಲ್ಕು ದಶಕಗಳ ಬಳಿಕ ಈ ಸಾಧನೆ ಮಾಡಿರುವ ಮಹಿಳಾ ಹಾಕಿ ತಂಡದ ಯಶಸ್ಸಿಗೆ ಭಾರತದ ಜನತೆ ಹರ್ಷಗೊಂಡಿದೆ. ಇದು ಅತ್ಯುತ್ತಮ ಕೌಶಲ್ಯ ಮತ್ತು ಟೀಮ್ವರ್ಕ್ನ ಫಲವಾಗಿದೆ. ಅವರ ಛಲ ಕೂಡ ತುಂಬಾ ಸ್ಪೂರ್ತಿದಾಯಕವಾಗಿದೆ. ತಂಡದ ಮುಂದಿನ ಎಲ್ಲಾ ಪ್ರಯತ್ನಗಳಿಗೂ ನನ್ನ ಶುಭ ಹಾರೈಕೆಗಳು. ಈ ಯಶಸ್ಸು ದೇಶಾದ್ಯಂತ ಹಾಕಿ ಜನಪ್ರಿಯತೆಗೆ ಕೊಡುಗೆ ನೀಡಲಿ ಎಂದು ಬರೆದುಕೊಂಡಿದ್ದಾರೆ.














