Last Updated:
ಗ್ಲ್ಯಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟ 2026 ರಲ್ಲಿ ಭಾರತೀಯ ಬಾಕ್ಸರ್ಗಳು ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದಿ, ಒಂದೇ ದಿನ ಇಬ್ಬರು ಬಾಕ್ಸರ್ಗಳು ಚಿನ್ನದ ಪದಕ ಪಡೆದಿದ್ದಾರೆ.
ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಬಾಕ್ಸರ್ಗಳಾದ ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲ್ಯಾಂಬೋರಿಯಾ ಚಿನ್ನದ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರೀತಿ ಪವಾರ್ ಅದ್ಭುತ ಪ್ರದರ್ಶನ ನೀಡಿ 54 ಕೆಜಿ ತೂಕ ವಿಭಾಗದಲ್ಲಿ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆದ್ದರು. ಜಾಸ್ಮಿನ್ ಲಂಬೋರಿಯಾ ಅವರು 57 ಕೆಜಿ ತೂಕ ವಿಭಾಗದಲ್ಲಿ ಫೈನಲ್ ಗೆಲ್ಲುವ ಮೂಲಕ ದೇಶಕ್ಕೆ ಎರಡನೇ ಚಿನ್ನದ ಪದಕವನ್ನು ತಂದುಕೊಟ್ಟರು. ಒಂದೇ ದಿನ ಭಾರತಕ್ಕೆ ಬಾಕ್ಸಿಂಗ್ನಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಚಿನ್ನದ ಪದಕಗಳು ಒಲಿದು ಬಂದಿರುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಮಹಿಳೆಯರ 54 ಕೆಜಿ ಬ್ಯಾಂಟಮ್ವೇಟ್ ವಿಭಾಗದ ಫೈನಲ್ ಪಂದ್ಯದಲ್ಲಿ ಪ್ರೀತಿ ಪವಾರ್ ಅವರು ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ವಿರುದ್ಧ 5-0 ಅಂತರದ ಜಯಗಳಿಸಿ ಭಾರತಕ್ಕೆ ದಿನದ ಮೊದಲ ಚಿನ್ನದ ಪದಕ ತಂದುಕೊಟ್ಟರು.
ಫೈನಲ್ನಲ್ಲಿ ಪಂದ್ಯದುದ್ದಕ್ಕೂ ಅವರು ಪ್ರಾಬಲ್ಯ ಸಾಧಿಸಿದರು. ಮೊದಲ ಸುತ್ತಿನಲ್ಲಿ 10-8ರಲ್ಲಿ ಗೆದ್ದ ಪ್ರೀತಿ ಮೂರನೇ ಮತ್ತು ಅಂತಿಮ ಸುತ್ತಿನಲ್ಲಿಯೂ ಪ್ರೀತಿ ಪವಾರ್ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಅವರು ತಮ್ಮ ಎದುರಾಳಿ ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ಮೇಲೆ ಸತತವಾಗಿ ಪಂಚ್ಗಳ ದಾಳಿ ನಡೆಸಿದರು. ಇದರಿಂದಾಗಿ ಕೆನಡಾ ಬಾಕ್ಸರ್ ಮತ್ತೆ ಸ್ಪರ್ಧೆಗೆ ಮರಳಲು ಅವಕಾಶ ಸಿಗಲಿಲ್ಲ. ಪ್ರೀತಿ ಅವರ ಆಕ್ರಮಣಕಾರಿ ಆಟ ಕೊನೆಯ ನಿಮಿಷದವರೆಗೂ ಮುಂದುವರೆಯಿತು, ಅವರ ಪ್ರಬಲ ಎಡ ಹುಕ್ ಮತ್ತು ಬಲಗೈ ಪಂಚ್ಗಳು ಹೈಲೈಟ್ ಆಗಿದ್ದವು.
ಬ್ಯಾಂಟಮ್ವೇಟ್ ವಿಭಾಗದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಪ್ರೀತಿ, ಭಾರತಕ್ಕೆ ದಿನದ ಮೊದಲ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ 22 ವರ್ಷದ ಪ್ರೀತಿ, ಸೆಮಿಫೈನಲ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಜಾಂಬಿಯಾದ ಕ್ಯಾಥರೀನ್ ಮ್ವಾಪೆ ಅವರನ್ನು 5-0 ಅಂತರದಿಂದ ಸರ್ವಾನುಮತದ ನಿರ್ಧಾರದಿಂದ ಸೋಲಿಸಿ ಫೈನಲ್ ತಲುಪಿದ್ದರು.
ಪ್ರೀತಿ ಬೆನ್ನಲ್ಲೇ ಮಹಿಳೆಯರ 57 ಕೆಜಿ ಫೆದರ್ವೇಟ್ ವಿಭಾಗದ ಫೈನಲ್ನಲ್ಲಿ ಕಣಕ್ಕಿಳಿದ ಜೈಸ್ಮಿನ್, ಉತ್ತರ ಐರ್ಲೆಂಡ್ನ ನಾಲ್ಕು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಅಮಿ ಬ್ರಾಡ್ಹರ್ಸ್ಟ್ ವಾಲ್ಷ್ ಅವರನ್ನು 5-0 ಅಂತರದಿಂದ ಸೋಲಿಸಿ ಭಾರತಕ್ಕೆ ಬಾಕ್ಸಿಂಗ್ನಲ್ಲಿ ದಿನದ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು.
ಜೈಸ್ಮಿನ್ ಲಂಬೋರಿಯಾ ಅವರ ಚಿನ್ನದ ಗೆಲುವಿನೊಂದಿಗೆ, ಭಾರತವು ಗ್ಲಾಸ್ಗೋ 2026 ರಲ್ಲಿ ತನ್ನ ಏಳನೇ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿತು. ಬಾಕ್ಸಿಂಗ್ ರಿಂಗ್ನಲ್ಲಿ ಇದು ಭಾರತದ ಸತತ ಎರಡನೇ ಚಿನ್ನದ ಪದಕವಾಗಿದ್ದು, ಇಬ್ಬರೂ ಭಾರತೀಯ ಬಾಕ್ಸರ್ಗಳು ತಮ್ಮ ಫೈನಲ್ ಪಂದ್ಯಗಳನ್ನು ಗೆದ್ದು ಚಿನ್ನಕ್ಕೆ ಮುತ್ತಿಟ್ಟರು. ಬರ್ಮಿಂಗ್ಹ್ಯಾಮ್ನಿಂದ ಕಂಚು ಗೆದ್ದ ಜೈಸ್ಮಿನ್ ಗ್ಲಾಸ್ಗೋದಲ್ಲಿ ಚಿನ್ನವಾಗಿ ಪರಿವರ್ತಿಸುವ ಮೂಲಕ, ಮತ್ತೊಮ್ಮೆ ರಿಂಗ್ನಲ್ಲಿ ಹೆಮ್ಮೆಯಿಂದ ಭಾರತದ ಧ್ವಜವನ್ನು ಹಾರಿಸಿದ್ದಾರೆ.
ಭಾರತದ ಉದಯೋನ್ಮುಖ ಬಾಕ್ಸರ್ ಜಾದುಮಣಿ ಸಿಂಗ್ ಮಂಡೆಂಗ್ಬಾಮ್ ಅವರು ಪುರುಷರ 55 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ (Silver Medal) ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆಗಸ್ಟ್ 1, 2026 ರಂದು ನಡೆದ ರೋಮಾಂಚಕ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜ್ಯೆ ಡಿಕ್ಸನ್ ವಿರುದ್ಧ ತೀವ್ರ ಹೋರಾಟ ನಡೆಸಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಮಣಿಪುರ ಮೂಲದ 22 ವರ್ಷದ ಈ ಯುವ ಬಾಕ್ಸರ್, ಈ ಹಿಂದೆ 2025 ರ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್ನಲ್ಲಿಯೂ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದರು.
CWG 2026: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಡಬಲ್ ಗೋಲ್ಡ್! ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದುಕೊಟ್ಟ ಪ್ರೀತಿ, ಜೈಸ್ಮಿನ್














