Last Updated:
ಸಾಮಾಜಿಕ ಜಾಲತಾಣದಲ್ಲಿ ಲೈಕ್, ವೀವ್ಸ್ ಹಾಗೂ ಫಾಲೋವರ್ಸ್ಗಾಗಿ ವ್ಯಕ್ತಿಯೊಬ್ಬರು ಜೀವ ಕಳೆದುಕೊಳ್ಳುವ ಹಂತಕ್ಕೆ ತೆರಳಿದ ಘಟನೆ ನಡೆದಿದೆ. ತನ್ನ ಬಳಿ ಕಂತೆ ಕಂತೆ ಹಣ ಇರುವಂತೆ ಎಐ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ವ್ಯಕ್ತಿಯ ಮನೆಯಲ್ಲಿ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ (Social Media) ತಮ್ಮನ್ನು ತಾವು ಶ್ರೀಮಂತರು ಎಂದು ತೋರಿಸಿಕೊಳ್ಳುವುದು ಹಲವರಿಗೆ ಅಭ್ಯಾಸವಾಗಿದೆ. ಆದರೆ ಮಹಾರಾಷ್ಟ್ರದ (Maharashtra) ನಾಗಪುರ್ ಮೂಲದ ಸಮೀರ್ ಯಾಚಲ್ವಾರ್ ಎಂಬಾತ ಇಂತಹದ್ದೇ ಫೇಕ್ ವಿಡಿಯೋ (Fake AI Video) ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ತಾನು ಭಾರೀ ಶ್ರೀಮಂತ ಅಂತ ಸ್ನೇಹಿತರ ಬಳಿ ಬಿಲ್ಡಪ್ ನೀಡುತ್ತಿದ್ದನಂತೆ. ಅಲ್ಲದೇ ಎಐ ತಂತ್ರಜ್ಞಾನ ಬಳಸಿ ಆತನ ಮನೆಯಲ್ಲಿ ಕಂತೆ ಕಂತೆ ನೋಟು (Money) ಇರುವಂತೆ ವಿಡಿಯೋ ಮಾಡುತ್ತಿದ್ದನಂತೆ. ಅಚ್ಚರಿ ವಿಷಯ ಅಂದರೆ, ಸ್ನೇಹಿತರೇ (Friends) ವಿಡಿಯೋ ನೋಡಿ ದರೋಡೆಗೆ ಯತ್ನಿಸಿದ್ದಾರೆ.
ನಾಗಪುರ ಮೂಲದ ಸಂತ್ರಸ್ತ ಸಮೀರ್, ಸ್ನೇಹಿತರ ಬಳಿ ಶ್ರೀಮಂತನಂತೆ ಪೋಸ್ ಕೊಡುತ್ತಿದ್ದ. ಇದಕ್ಕಾಗಿ ಆತ ಎಐ ಟೂಲ್ಸ್ ಬಳಕೆ ಮಾಡಿಕೊಂಡು ತನ್ನ ಮಗಳು ಕಂತೆ ಕಂತೆ ಹಣದೊಂದಿಗೆ ಆಟವಾಡುತ್ತಿದ್ದಂತೆ. ತನ್ನ ಮನೆಯಲ್ಲಿ ಕಂತೆ ಕಂತೆ ಹಣ ಜೋಡಿಸಿ ಇಟ್ಟಂತೆ ಪದೇ ಪದೇ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದನಂತೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರು
ಆದರೆ, ಮನೆಯಲ್ಲಿ ಕಳ್ಳತನ ಮಾಡಿದ ಬಳಿಕವೂ ಆರೋಪಿಗಳ ಹಣದ ಆಸೆ ದೂರ ಆಗಿರಲಿಲ್ಲ. ಆತನ ಬಳಿ ಇನ್ನು ಹಣ ಇದೆ ಎಂದು ಭಾವಿಸಿ, ಆತನಿಗೆ ವಾಟ್ಸಾಪ್ ಕರೆಯ ಮೂಲಕ ಬೆದರಿಕೆ ಹಾಕಿ, 40 ಲಕ್ಷ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರಂತೆ. ಇಲ್ಲ ಎಂದರೇ, ನಿನ್ನ ಪತ್ನಿ, ಮಗಳನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರಂತೆ. ಆರೋಪಿಗಳ ಬೆದರಿಕೆ ಕರೆಗಳು ಹೆಚ್ಚಾಗುತ್ತಿದ್ದಂತೆ ಸಂತ್ರಸ್ತ ಪೊಲೀಸರಿಗೆ ಮಾಹಿತಿ ನೀಡಿದ್ದ.
ಸಂತ್ರಸ್ತ ವ್ಯಕ್ತಿಯ ದೂರಿನ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವಿಚಿತ್ರ ಪ್ರಕರಣದ ಬಗ್ಗೆ ಮಾತನಾಡಿದ ಬೆಳ್ತರೋಡಿ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಅಹೆರ್, ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸ್ಟೇಟಸ್ ಹಾಕಿದ ಕಾರಣದಿಂದಲೇ ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ. ಆರೋಪಿಗಳು ಸಮೀರ್ ಎಲ್ಲಿ ಹೋಗ್ತಾನೆ ಬರ್ತಾನೆ ಅಂತ ತಿಳಿದುಕೊಳ್ಳಲು, ಆತನ ಬೈಕ್ನಲ್ಲಿ ಮೊಬೈಲ್ ಒಂದನ್ನು ಸೈಲೆಂಟ್ ಮಾಡಿ ಯಾರಿಗೂ ತಿಳಿಯದಂತೆ ಇಟ್ಟಿದ್ದರಂತೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಶ್ರೀಮಂತಿಕೆ ಪ್ರದರ್ಶನಕ್ಕೆ ನಿಂತರೆ ಏನೆಲ್ಲಾ ಅಪಾಯಗಳು ಎದುರಾಗಬಹುದು ಎಂಬುವುದಕ್ಕೆ ಇದು ನೈಜ ಉದಾಹರಣೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
Jul 09, 2026 12:46 PM IST
WhatsApp status: ‘ಲಕ್ಷ ಲಕ್ಷ ಹಣದೊಂದಿಗೆ ಮಗು ಆಟ’, ಸ್ನೇಹಿತನ ಸ್ಟೇಟಸ್ ನೋಡಿ ಕಳ್ಳತನ; ಆದರೆ ಕೊನೆಗೆ ಬಿಗ್ ಟ್ವಿಸ್ಟ್!














