Last Updated:
ಯುರೋಪ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಒಟ್ಟು ಏಳು T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೂ, ಅವುಗಳಲ್ಲಿ ಯಾವುದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಟಿ20 ವಿಶ್ವ ಚಾಂಪಿಯನ್ (T20 World Champions) ಭಾರತಕ್ಕೆ ಕಳೆದ ಎರಡು ವಾರಗಳು ದುಃಸ್ವಪ್ನವಾಗಿತ್ತು. ಸೌತಾಂಪ್ಟನ್ನಲ್ಲಿ ನಡೆದ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು (India vs England) ಏಕಪಕ್ಷೀಯವಾಗಿ ಸೋಲಿಸಿ, ಟಿ20 ಸರಣಿಯನ್ನು 4-0 ಅಂತರದಿಂದ ವಶಪಡಿಸಿಕೊಂಡಿತು. ಈ ಗೆಲುವಿನೊಂದಿಗೆ, ಇಂಗ್ಲೆಂಡ್ ಐತಿಹಾಸಿಕ ಕ್ಲೀನ್ ಸ್ವೀಪ್ ಸಾಧಿಸಿದ್ದಲ್ಲದೆ, ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಭಾರತವನ್ನು ಹಿಂದಿಕ್ಕಿ ನಂ. 1 ತಂಡವಾಯಿತು. ಈ ಮೂಲಕ ಭಾರತ ತಂಡ ಬರೋಬ್ಬರಿ 1605 ದಿನಗಳ (ಸುಮಾರು ನಾಲ್ಕೂವರೆ ವರ್ಷಗಳು) ನಂತರ, ವಿಶ್ವದ ನಂಬರ್ 1 ಸ್ಥಾನವನ್ನು ಕಳೆದುಕೊಂಡಿತು.
ಭಾರತವು ನಾಲ್ಕೂವರೆ ವರ್ಷಗಳಿಗೂ ಹೆಚ್ಚು ಕಾಲ T20I ಶ್ರೇಯಾಂಕದಲ್ಲಿ ನಂಬರ್-1 ಸ್ಥಾನವನ್ನು ಕಾಯ್ದುಕೊಂಡಿತ್ತು. ಇಂಗ್ಲೆಂಡ್ ವಿರುದ್ಧದ 0-4 ಸೋಲಿನಿಂದ ಚುಟುಕು ಕ್ರಿಕೆಟ್ನಲ್ಲಿ ಭಾರತ ತನ್ನ ಆಳ್ವಿಕೆಯನ್ನು ಕಳೆದುಕೊಂಡಿತು. ಸರಣಿಗೂ ಮೊದಲು, ಇಂಗ್ಲೆಂಡ್ ನಂಬರ್-1 ಸ್ಥಾನ ಪಡೆಯಲು ಕ್ಲೀನ್ ಸ್ವೀಪ್ ಅಗತ್ಯವಿತ್ತು. ತವರಿನ ಲಾಭ ಪಡೆದ ಆಂಗ್ಲರು ಅದ್ಭುತ ಪ್ರದರ್ಶನ ತೋರಿ ಕ್ಲೀನ್ ಸ್ವೀಪ್ ಸಾಧಿಸಿದರು.
ಕೊನೆಯ ಟಿ20ಐನಲ್ಲಿ, ಜೋಸ್ ಬಟ್ಲರ್ ಮತ್ತು ನಾಯಕ ಹ್ಯಾರಿ ಬ್ರೂಕ್ ಭಾರತೀಯ ಬೌಲರ್ಗಳನ್ನು ಧ್ವಂಸ ಮಾಡಿದರು. ಎರಡನೇ ವಿಕೆಟ್ಗೆ ಅವರಿಬ್ಬರು ಬರೋಬ್ಬರಿ 233 ರನ್ಗಳ ದಾಖಲೆಯ ಜೊತೆಯಾಟವನ್ನ ಹಂಚಿಕೊಂಡರು. ಬಟ್ಲರ್ 64 ಎಸೆತಗಳಲ್ಲಿ 131 ರನ್ ಗಳಿಸಿದರೆ, ಬ್ರೂಕ್ ಅಜೇಯ 95 ರನ್ಗಳಿಸಿದರು. ಇವರಿಬ್ಬರ ಆಟದ ನೆರವಿಬಿಂದ ಇಂಗ್ಲೆಂಡ್ 20 ಓವರ್ಗಳಲ್ಲಿ 257 ರನ್ಗಳ ಬೃಹತ್ ಮೊತ್ತವನ್ನು ದಾಖಲಿಸಿತು, ನಂತರ ಭಾರತವನ್ನು 201 ರನ್ಗಳಿಗೆ ಸೀಮಿತಗೊಳಿಸಿ 56 ರನ್ಗಳಿಂದ ಗೆದ್ದಿತು.
ಪ್ರತಿಯೊಂದು ವಿಭಾಗದಲ್ಲೂ ವಿಫಲವಾದ ಭಾರತ
ಸರಣಿಯ ಉದ್ದಕ್ಕೂ, ಇಂಗ್ಲೆಂಡ್ನ ವೇಗದ ಮತ್ತು ಬೌನ್ಸಿ ಪಿಚ್ಗಳಲ್ಲಿ ಭಾರತದ ಬ್ಯಾಟರ್ಸ್ ತುಂಬಾ ಕಷ್ಟಪಟ್ಟರು.. ಅಗ್ರ ಕ್ರಮಾಂಕವು ಸ್ಥಿರವಾಗಿ ಆರಂಭ ನೀಡುವಲ್ಲಿ ವಿಫಲವಾಯಿತು. ಅಂತಿಮ ಪಂದ್ಯದಲ್ಲಿ ಬೌಲರ್ಗಳು ಸಹ ಪರಿಣಾಮ ಬೀರುವಲ್ಲಿ ವಿಫಲರಾದರು. ಆದರೆ ಹಲವಾರು ಫೀಲ್ಡಿಂಗ್ ದೋಷಗಳು ಸ್ಪಷ್ಟವಾಗಿ ಕಂಡುಬಂದವು. ಈ ವೈಫಲ್ಯವೇ ಭಾರತ ಒಂದೇ ಒಂದು ಪಂದ್ಯವನ್ನು ಗೆಲ್ಲದಿರಲಿ ಕಾರಣವಾಯಿತು. ಮೊದಲ ಪಂದ್ಯವನ್ನು ಮಳೆಯಿಂದಾಗಿ ರದ್ದಾಗಿತ್ತು.
ಈ ಸರಣಿಯು ಶ್ರೇಯಸ್ ಅಯ್ಯರ್ ಅವರ ಟಿ20 ನಾಯಕತ್ವದ ಮೇಲೆ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಆದರೆ ತಂಡವು ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ವಿಫಲವಾಯಿತು. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅವಧಿಯಲ್ಲಿ, ಭಾರತವು ಈಗಾಗಲೇ ಶ್ರೀಲಂಕಾ , ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ವೈಟ್ ವಾಶ್ ಅನುಭವಿಸಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಕಳೆದುಕೊಂಡಿದೆ. ಇದೀಗ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಹೀನಾಯ ಸೋಲು ತಂಡದ ಆಡಳಿತ ಮಂಡಳಿಯ ಕಾರ್ಯತಂತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Jul 12, 2026 10:52 PM IST














