Last Updated:
ಡಿಎಸ್ಪಿ ಸಮವಸ್ತ್ರ ಧರಿಸಿ ಓಡಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಕಂಡು ಪ್ರಶ್ನಿಸಿದಾಗ ಆಕೆ ನಕಲಿ ಪೊಲೀಸ್ ಎಂದು ತಿಳಿದು ಬಂದಿದೆ. ಆಕೆಯನ್ನು ಹಿಡಿದು ತನಿಖೆ ಮಾಡಿದಾಗ ಆಕೆ ತನ್ನ ಗೆಳೆಯನನ್ನು ಮೆಚ್ಚಿಸಲು ಈ ಕೃತ್ಯದಲ್ಲಿ ಭಾಗಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ವೆಲ್ಲೂರ್: ಉಪ ಪೊಲೀಸ್ ವರಿಷ್ಠಾಧಿಕಾರಿ ಸಮವಸ್ತ್ರ ಧರಿಸಿ ಓಡಾಡುತ್ತಿದ್ದ ನಕಲಿ ಡಿಎಸ್ಪಿ ಮಹಿಳೆಯನ್ನು (Fake DSP) ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವೆಲ್ಲೂರು ಕೋಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಮವಸ್ತ್ರ ಧರಿಸಿ ಓಡಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಕಂಡು ಪ್ರಶ್ನಿಸಿದಾಗ ಆಕೆ ನಕಲಿ ಪೊಲೀಸ್ ಎಂದು ತಿಳಿದು ಬಂದಿದೆ. ಆಕೆಯನ್ನು ಹಿಡಿದು ತನಿಖೆ ಮಾಡಿದಾಗ ಆಕೆ ತನ್ನ ಗೆಳೆಯನನ್ನು ಮೆಚ್ಚಿಸಲು ಈ ಕೃತ್ಯದಲ್ಲಿ ಭಾಗಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಉಮಾಮಹೇಶ್ವರಿ (33) ವೆಲ್ಲೂರು ಜಿಲ್ಲೆಯ ಒಡುಕ್ಕತ್ತೂರ್ ಬಳಿಯ ಹಳ್ಳಿಯ ನಿವಾಸಿಯಾಗಿದ್ದು, ಆಕೆಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ, ಆಕೆಯ ಪತಿ ರೈತನಾಗಿದ್ದು, ಈ ಮಧ್ಯೆ ಆಕೆಗೆ ಉಮಾಮಹೇಶ್ವರಿ ಅಪ್ಪರ್ ಅರಸಂಪಟ್ಟಿಯ ಲಾರಿ ಚಾಲಕನೊಂದಿಗೆ ಲವ್ ಆಗಿ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ತಿಳಿದು ಬಂದಿದೆ.
ಉಮಾಮಹೇಶ್ವರಿಗೆ ಪೊಲೀಸ್ ಸಮವಸ್ತ್ರ ಧರಿಸುವ ಆಸೆ ಬಹಳ ದಿನಗಳಿಂದ ಇತ್ತು. ಹೀಗಿರೋವಾಗ ತನ್ನ ಲವರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಾನು ಪೊಲೀಸ್ ಸಮವಸ್ತ್ರ ಧರಿಸಿ ಬರುವ ಬಯಕೆಯನ್ನು ವ್ಯಕ್ತಪಡಿಸಿದ್ದಳು. ‘ನಾನು ಪೊಲೀಸ್ ಸಮವಸ್ತ್ರ ಧರಿಸಿ ನಿನ್ನ ಬರ್ತ್ಡೇ ದಿನ ಕೇಕ್ ಕತ್ತರಿಸಬೇಕು’ ಎಂದು ಹೇಳಿದ್ದಳು. ಅದರಂತೆ ಆತ ಆಕೆಗೆ ಬಾಡಿಗೆಗೆ ಡಿಎಸ್ಪಿ ಅಧಿಕಾರಿಯ ಬಟ್ಟೆಗಳು ಮತ್ತು ಪರಿಕರಗಳನ್ನು ತಂದು ಕೊಟ್ಟಿದ್ದ ಎಂದು ಹೇಳಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಆರೋಪಿ ಉಮಾಮಹೇಶ್ವರಿ ಡಿಎಸ್ಪಿ ಸಮವಸ್ತ್ರ ಧರಿಸಿ ವೆಲ್ಲೂರು ಕೋಟೆಗೆ ಬಂದಿದ್ದಳು. ಆಕೆ ಪೊಲೀಸ್ ಸಮವಸ್ತ್ರದಲ್ಲೇ ತನ್ನ ಗೆಳೆಯನೊಂದಿಗೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದ್ದಳು. ಆ ಸಮಯದಲ್ಲಿ, ಅಲ್ಲಿ ಗಸ್ತು ತಿರುಗುತ್ತಿದ್ದ ವೆಲ್ಲೂರು ಉತ್ತರ ಪೊಲೀಸರಿಗೆ ಉಮಾಮಹೇಶ್ವರಿಯನ್ನು ಕಂಡು ಆಕೆಯ ನೋಟದ ಬಗ್ಗೆ ಅನುಮಾನ ಬಂದಿದೆ.
ಪೊಲೀಸರು ಅವರಿಬ್ಬರ ಬಳಿಗೆ ಹೋಗಿ, ‘ನೀವು ಡಿಎಸ್ಪಿಯೇ? ನೀವು ಯಾವ ನಗರದಲ್ಲಿ ಕೆಲಸ ಮಾಡುತ್ತೀರಿ?’ ಎಂದು ಕೇಳಿದ್ದಾರೆ. ಆಗ ಆಕೆ ವ್ಯತಿರಿಕ್ತ ಉತ್ತರಗಳನ್ನು ನೀಡಿದಾಗ, ಅನುಮಾನಗೊಂಡ ಪೊಲೀಸರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಸಂಪೂರ್ಣ ತನಿಖೆ ನಡೆಸಿದರು.
ಪೊಲೀಸರು ನಡೆಸಿದ ತನಿಖೆಯಲ್ಲಿ, ಆಕೆ ಪೊಲೀಸ್ ಕರ್ತವ್ಯದಲ್ಲಿ ಇರಲಿಲ್ಲ, ಬದಲಾಗಿ ತನ್ನ ಗೆಳೆಯನನ್ನು ಮೆಚ್ಚಿಸಲು ಮತ್ತು ತನ್ನ ಸ್ವಂತ ಸಂತೋಷಕ್ಕಾಗಿ ಡಿಎಸ್ಪಿ ಸಮವಸ್ತ್ರ ಧರಿಸಿ ಸಾರ್ವಜನಿಕವಾಗಿ ಓಡಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇದರ ನಂತರ, ಪೊಲೀಸರು ಅನುಮತಿಯಿಲ್ಲದೆ ಪೊಲೀಸ್ ಸಮವಸ್ತ್ರ ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡು ಉಮಾಮಹೇಶ್ವರಿಯನ್ನು ಬಂಧಿಸಿದರು.
ಅಚ್ಚರಿಯ ಸಂಗತಿ ಎಂದರೆ, ಬಂಧಿತ ಉಮಾಮಹೇಶ್ವರಿ ವಿರುದ್ಧ ಚೆನ್ನೈ ಪೂಕಡೈ ಮತ್ತು ವಡಪಳನಿ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣಗಳು ಬಾಕಿ ಇದೆ ಎಂದು ತಿಳಿದು ಬಂದಿದೆ.
Vellore,Tamil Nadu













