Last Updated:
ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದಲ್ಲಿ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಏಕೆ ಅವಕಾಶ ನೀಡಿಲ್ಲ ಎಂಬುದಕ್ಕೆ ನಾಯಕ ಶ್ರೇಯಸ್ ಕೊಟ್ಟ ಕಾರಣ ಇಲ್ಲಿದೆ.
ಐರ್ಲೆಂಡ್ ವಿರುದ್ಧದ (India vs Ireland) ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ಬೆಲ್‌ಫಾಸ್ಟ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ನಾಯಕನಾಗಿ ಪದಾರ್ಪಣೆ ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ವೈಭವ್ ಸೂರ್ಯವಂಶಿ (Vaibhav Sooryavanshi) ಪದಾರ್ಪಣೆ ಸಾಧ್ಯವಾಗಲಿಲ್ಲ. ತಂಡದ ಸಂಯೋಜನೆಯಿಂದಾಗಿ ಯಂಗ್ ಸೆನ್ಷೇಷನ್ ವೈಭವ್ ಸೂರ್ಯವಂಶಿಯನ್ನ ಈ ಪಂದ್ಯದಲ್ಲಿ ಆಡಿಸುತ್ತಿಲ್ಲ ಎಂದು ನಾಯಕ ಅಯ್ಯರ್ ತಿಳಿಸಿದ್ದಾರೆ. ಸರಿಯಾದ ಸಮಯ ಬಂದಾಗ ಅವರಿಗೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ ಎಂದು ಸಮಜಾಯಿಸಿ ನೀಡಿದ್ದಾರೆ.
ಟಾಸ್ ಸಮಯದಲ್ಲಿ ಮಾತನಾಡಿದ ಅವರು “ನಾವು ಮೊದಲು ಫೀಲ್ಡಿಂಗ್ ಮಾಡಲಿದ್ದೇವೆ. ಬೆಲ್‌ಫಾಸ್ಟ್‌ನಲ್ಲಿ ಆಡುತ್ತಿರುವುದು ಇದೇ ಮೊದಲು, ಮತ್ತು ಪಿಚ್ ನಮಗೆ ಹೊಸದು. ಹವಾಮಾನ, ಪರಿಸ್ಥಿತಿಗಳು ಮತ್ತು ವಿಕೆಟ್ ಅನ್ನು ಗಮನದಲ್ಲಿಟ್ಟುಕೊಂಡು ನಾವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಕೋಚ್ ಎಲ್ಲಾ ಆಟಗಾರರಿಗೆ ತಮ್ಮ ನೈಸರ್ಗಿಕ ಆಟವನ್ನು ಆಡಲು ಮತ್ತು ದೃಢನಿಶ್ಚಯದಿಂದ ಮುಂದುವರಿಯಲು ಹೇಳಿದ್ದಾರೆ. ನಾವು ಸಾಧ್ಯವಾದಷ್ಟು ಬೇಗ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು. ನಾವು ಒಂದೊಂದೇ ಪಂದ್ಯದ ಮೇಲೆ ಗಮನ ಹರಿಸುತ್ತಿದ್ದೇವೆ” ಎಂದರು.
ವೈಭವ್ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಅಯ್ಯರ್, ಈ ವಿಷಯವನ್ನ ಹೆಚ್ಚು ಎಳೆದಾಡುವ ಅಗತ್ಯವಿಲ್ಲ. ದುರದೃಷ್ಟವಶಾತ್, ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಸಮಯ ಬಂದಾಗ ಅವರಿಗೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ. ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಟಗಾರರನ್ನ ಕಡೆಗಣಿಸಲು ಸಾಧ್ಯವಿಲ್ಲ ಎಂದರು. ಈ ಪಂದ್ಯದಲ್ಲಿ ನಾವು ಮೂವರು ತಜ್ಞ ವೇಗಿಗಳು ಮತ್ತು ಒಬ್ಬ ಆಲ್‌ರೌಂಡರ್ ಅನ್ನು ಫೀಲ್ಡಿಂಗ್ ಮಾಡುತ್ತಿದ್ದೇವೆ” ಎಂದು ಶ್ರೇಯಸ್ ಅಯ್ಯರ್ ಹೇಳಿದರು.
ಗಂಭೀರ್ ವಿರುದ್ಧ ಫ್ಯಾನ್ಸ್ ಗರಂ
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಾರೆಂದು ನಿರೀಕ್ಷಿಸಿದ್ದ ಅಭಿಮಾನಿಗಳು ಅಯ್ಯರ್ ಮಾತಿನಿಂದ ತೀವ್ರ ನಿರಾಶೆಗೊಂಡಿದ್ದಾರೆ. ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಡುವ ಮೂಲಕ ಗಂಭೀರ್ ತಂಡದಲ್ಲಿ ತಮ್ಮದೇ ನಡೆಯಬೇಕೆಂಬ ಹಠವನ್ನ ಸಾಧಿಸಿದ್ದಾರೆ ಎಂದು ನೆಟಿಜನ್‌ಗಳು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಕೋರರ್ ಆಗಿ ಪ್ರದರ್ಶನ ನೀಡಿದ್ದರೂ ಅವರಿಗೆ ಏಕೆ ಅವಕಾಶ ನೀಡಲಿಲ್ಲ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಗಂಭೀರ್ ಅಭಿಮಾನಿಗಳು ಹಾಗೂ ಕ್ರಿಕೆಟ್ ದಿಗ್ಗಜರು ಶ್ಲಾಘಿಸುವ ಆಟಗಾರರಿಗೆ ಅವಕಾಶ ನೀಡುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಐರ್ಲೆಂಡ್: ಟಿಮ್ ಟೆಕ್ಟರ್, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್/ಕ್ಯಾಪ್ಟನ್), ಬೆಂಜಮಿನ್ ಕ್ಯಾಲಿಟ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಲಿಯಾಮ್ ಮೆಕಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೈ ಮೂಂದ್ರ, ಮ್ಯಾಥ್ಯೂ ಹಲ್ಲಾರ್ಡ್.
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.













