Last Updated:
ತಮಿಳುನಾಡು ಸಿಎಂ ವಿಜಯ್ ದಳಪತಿ ಕರ್ನಾಟಕ ಪ್ರವಾಸದಲ್ಲಿರುವಾಗ, ಟಿವಿಕೆ ಕಾರ್ಯದರ್ಶಿ ವೆಂಬುಲಿ ಮೇಲೆ ವಿಧವೆ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ, ಪ್ರಕರಣ ದಾಖಲು, ಟಿವಿಕೆಯಿಂದ ಉಚ್ಛಾಟನೆ
ತಮಿಳುನಾಡು: ಒಂದೆಡೆ ತಮಿಳುನಾಡು ಸಿಎಂ (Tamil Nadu CM) ವಿಜಯ್ ದಳಪತಿ (Vijay Thalapathy) ಕರ್ನಾಟಕ (Karnataka) ಪ್ರವಾಸದಲ್ಲಿದ್ದಾರೆ. ಉಡುಪಿಯ (Udupi) ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ (Kollur Mookambike Temple) ಆಗಮಿಸಿದ್ದ ವಿಜಯ್ ದಳಪತಿ, ದೇವಿಗೆ ಬೆಳ್ಳಿ ಖಡ್ಗ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಅವರದ್ದೇ ತಮಿಳ್ ವೆಟ್ರಿ ಕಳಗಂ (Tamil Vetri Kalagam – TVK) ಪಕ್ಷದ ಕಾರ್ಯದರ್ಶಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ. ಆತನ ವಿರುದ್ಧ ಒಂಟಿ ಮಹಿಳೆಯೊಬ್ಬರು ದೂರು ನೀಡಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ.
ತಮಿಳುನಾಡು ಸಿಎಂ ವಿಜಯ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ವೆಂಬುಲಿ ಎಂಬಾತನ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಟಿವಿಕೆ ಉತ್ತರ ಪ್ರಾದೇಶಿಕ ಘಟಕದ ಕಾರ್ಯದರ್ಶಿಯೂ ಆಗಿರುವ ವೆಂಬುಲಿ ವಿರುದ್ಧ ಅಲಂದೂರಿನಲ್ಲಿರುವ ಮಹಿಳಾ ಫಿಟ್ನೆಸ್ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ದೂರುದಾರೆಯು ಅಲಂದೂರು ನಿವಾಸಿಯಾಗಿದ್ದು, ಗಂಡನ ನಿಧನದ ಬಳಿಕ ಒಂಟಿಯಾಗಿ ವಾಸಿಸುತ್ತಿದ್ದಾರಂತೆ. ವಾರ್ಡ್ 160 ರಲ್ಲಿರುವ ಮಹಿಳಾ ಫಿಟ್ನೆಸ್ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸೇಂಟ್ ಥಾಮಸ್ ಮೌಂಟ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಅಲಂದೂರು ಉತ್ತರ ಟಿವಿಕೆ ಪ್ರದೇಶ ಕಾರ್ಯದರ್ಶಿ ವೆಂಬುಲಿ ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಸೌಲಭ್ಯದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವೆಂಬುಲಿ ತಡರಾತ್ರಿ ತನ್ನ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ. ಅಲ್ಲದೇ ನನಗೆ ಲೈಂಗಿಕವಾಗಿ ತೊಂದರೆ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ಸೇಂಟ್ ಥಾಮಸ್ ಮೌಂಟ್ ಪೊಲೀಸರು ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ನಿಷೇಧ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದರ ಮಧ್ಯೆ ಟಿವಿಕೆ ಪಕ್ಷಕ್ಕೆ ಅಪಖ್ಯಾತಿ ತಂದಿರುವ ನಡವಳಿಕೆಯನ್ನು ಉಲ್ಲೇಖಿಸಿ, ಚೆನ್ನೈ ಸಬರ್ಬನ್ ಟಿವಿಕೆ ಜಿಲ್ಲಾ ಕಾರ್ಯದರ್ಶಿ ಸರವಣನ್, ವೆಂಬುಲಿಯನ್ನು ಟಿವಿಕೆ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕುವುದಾಗಿ ಘೋಷಿಸಿದ್ದಾರೆ. ಅತ್ತ ವೆಂಬುಲಿ ತಲೆ ಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
தவெக ஆலந்தூர் வடக்கு பகுதிச் செயலாளர் வேம்புலி என்ற நபர், கணவரை இழந்து தனியே வசிக்கும் பெண்ணின் வீடு புகுந்து, பாலியல் அத்துமீறலில் ஈடுபட்டுள்ள செய்தி, மிகுந்த அதிர்ச்சி அளிக்கிறது.
பெண்களின் பாதுகாப்பு குறித்து தவெக தலைவர் முதலமைச்சர் திரு @TVKVijayHQ அவர்கள் கூறிவரும்… pic.twitter.com/2h3IJKXZw2
— K.Annamalai (@annamalai_k) June 12, 2026
ಇನ್ನು ಘಟನೆ ಕುರಿತಂತೆ ಮಾಜಿ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ. ಟಿವಿಕೆ ಉತ್ತರ ಪ್ರಾದೇಶಿಕ ಘಟಕದ ಕಾರ್ಯದರ್ಶಿ ವೆಂಬುಲಿ ಎಂಬ ವ್ಯಕ್ತಿ ತನ್ನ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ಘಟನೆ ತೀವ್ರ ಆಘಾತಕಾರಿಯಾಗಿದೆ. ಟಿವಿಕೆ ನಾಯಕ ಹಾಗೂ ಮುಖ್ಯಮಂತ್ರಿ ವಿಜಯ್ ಅವರು ಅವರು ಮಹಿಳಾ ಸುರಕ್ಷತೆಯ ಬಗ್ಗೆ ಪದೇ ಪದೇ ನೀಡಿದ ಭರವಸೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಈ ವಾಸ್ತವವು ತೀವ್ರ ನಿರಾಶಾದಾಯಕವಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.
ಡಿಎಂಕೆ ಆಡಳಿತದಲ್ಲಿ ನಡೆದ ಮಹಿಳೆಯರ ಮೇಲಿನ ಅಪರಾಧಗಳು ಪ್ರಸ್ತುತ ಆಡಳಿತದಲ್ಲೂ ಕಡಿಮೆಯಾಗಿಲ್ಲ. ಇಂತಹ ಘೋರ ಅಪರಾಧಗಳನ್ನು ಮಾಡಲು ಅವರಿಗೆ ಈ ಧೈರ್ಯ ಎಲ್ಲಿಂದ ಬರುತ್ತದೆ? ಅಂತ ಪ್ರಶ್ನಿಸಿದ್ದಾರೆ. ರಾಜಕೀಯ ಗುರುತು ಸಮಾಜ ವಿರೋಧಿ ಚಟುವಟಿಕೆಗಳಿಗೆ ರಕ್ಷಣೆ ನೀಡುವುದಿಲ್ಲ ಎಂದು ದೃಢವಾಗಿ ಖಚಿತಪಡಿಸಿಕೊಳ್ಳಬೇಕೆಂದು ನಾನು ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಬಲವಾಗಿ ಒತ್ತಾಯಿಸುತ್ತೇನೆ ಅಂತ ಅಣ್ಣಾಮಲೈ ಹೇಳಿದ್ದಾರೆ.













