Last Updated:
ವರದಿಗಳ ಪ್ರಕಾರ, ಟೈಗರ್ ಶ್ರಾಫ್ ಮುಂಬರುವ ಡ್ಯುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ (Durand Cup Football Tournament) ಮುಂಬೈ ಎಫ್ಸಿ ಪರ ಆಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಾಲಿವುಡ್ನ ಆಕ್ಷನ್ ಹೀರೋ ಟೈಗರ್ ಶ್ರಾಫ್ (Tiger Shroff) ತಮ್ಮ ಸಿನಿಮಾಗಳಷ್ಟೇ ಅಲ್ಲ, ಫಿಟ್ನೆಸ್, ಮಾರ್ಷಲ್ ಆರ್ಟ್ಸ್ ಮತ್ತು ಡ್ಯಾನ್ಸ್ನಿಂದಲೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಈಗ ಅವರು ಮತ್ತೊಂದು ಹೊಸ ಸವಾಲಿನತ್ತ ಹೆಜ್ಜೆ ಇಡುತ್ತಿರುವ ಸುದ್ದಿ ಸಿನಿಪ್ರಿಯರು ಹಾಗೂ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ವರದಿಗಳ ಪ್ರಕಾರ, ಟೈಗರ್ ಶ್ರಾಫ್ ಮುಂಬರುವ ಡ್ಯುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ (Durand Cup Football Tournament) ಮುಂಬೈ ಎಫ್ಸಿ ಪರ ಆಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಟೈಗರ್ ಶ್ರಾಫ್ಗೆ ಫುಟ್ಬಾಲ್ ಮೇಲಿನ ಆಸಕ್ತಿ ಹೊಸದೇನಲ್ಲ. ಬಿಡುವಿನ ವೇಳೆಯಲ್ಲಿ ಅವರು ಆಗಾಗ್ಗೆ ಫುಟ್ಬಾಲ್ ಆಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಕ್ರಿಕೆಟ್ ಹಾಗೂ ಫುಟ್ಬಾಲ್ ಎರಡರ ಮೇಲೂ ಅವರಿಗೆ ವಿಶೇಷ ಆಸಕ್ತಿ ಇದೆ.
ಈಗ ಆ ಹವ್ಯಾಸವನ್ನು ವೃತ್ತಿಪರ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದ್ದು, ಇದೇ ಕಾರಣದಿಂದ ಅವರು ಮುಂಬೈ ಎಫ್ಸಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.
ಜುಲೈ 30ರಂದು ತಂಡ ಶಿಲ್ಲಾಂಗ್ಗೆ ತೆರಳಲಿದ್ದು, ಟೈಗರ್ ಶ್ರಾಫ್ ಕೂಡ ತಂಡದೊಂದಿಗೆ ಪ್ರಯಾಣಿಸಬಹುದು ಎಂದು ವರದಿಗಳು ತಿಳಿಸಿವೆ. ಆದರೆ ಈ ಕುರಿತು ನಟ ಅಥವಾ ಕ್ಲಬ್ನಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಮುಂಬೈ ಎಫ್ಸಿ ಕ್ಲಬ್ ಆರಂಭವಾದ ದಿನಗಳಿಂದಲೇ ಟೈಗರ್ ಶ್ರಾಫ್ ಅದರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 2024ರಲ್ಲಿ ಕ್ಲಬ್ ಸ್ಥಾಪನೆಯಾದ ಬಳಿಕ ಅವರು ವಿವಿಧ ಸಂದರ್ಭಗಳಲ್ಲಿ ತಂಡವನ್ನು ಬೆಂಬಲಿಸಿದ್ದು, ಮುಂಬೈ ಡಿಸ್ಟ್ರಿಕ್ಟ್ ಲೀಗ್ನಲ್ಲೂ ತಂಡದ ಪರ ಆಡಿರುವ ಅನುಭವ ಹೊಂದಿದ್ದಾರೆ ಎನ್ನಲಾಗಿದೆ.
ಟೈಗರ್ ಶ್ರಾಫ್ ಬಾಲಿವುಡ್ನ ಅತ್ಯಂತ ಫಿಟ್ ನಟರಲ್ಲಿ ಒಬ್ಬರು. ಮಾರ್ಷಲ್ ಆರ್ಟ್ಸ್ನಲ್ಲಿ ಪರಿಣತಿ ಹೊಂದಿರುವ ಅವರು ಪ್ರತಿದಿನ ಕಠಿಣ ವರ್ಕೌಟ್ ಹಾಗೂ ತರಬೇತಿ ನಡೆಸುತ್ತಾರೆ. ಅವರ ದೈಹಿಕ ಸಾಮರ್ಥ್ಯ ಮತ್ತು ಚುರುಕುತನ ಫುಟ್ಬಾಲ್ನಂತಹ ವೇಗದ ಆಟಕ್ಕೂ ನೆರವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಪ್ರಸ್ತುತ ರಾಮ್ ಮಾಧ್ವಾನಿ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಅವರು ನಿರತರಾಗಿದ್ದಾರೆ. ಜೊತೆಗೆ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಲಗ್ ಜಾ ಗಲೇ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಟೈಗರ್ ಶ್ರಾಫ್ ಡ್ಯುರಾಂಡ್ ಕಪ್ನಲ್ಲಿ ನಿಜವಾಗಿಯೂ ಕಣಕ್ಕಿಳಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಅವರು ಮುಂಬೈ ಎಫ್ಸಿ ಜೊತೆ ತರಬೇತಿ ನಡೆಸುತ್ತಿದ್ದಾರೆ ಎಂಬ ವರದಿಗಳು ಸಿನಿ ಮತ್ತು ಕ್ರೀಡಾ ವಲಯದಲ್ಲಿ ಕುತೂಹಲ ಹೆಚ್ಚಿಸಿವೆ.
Bangalore [Bangalore],Bangalore,Karnataka














