Thrilling Story: ಪ್ರಾಣದ ಹಂಗು ತೊರೆದು ಭಾರತೀಯ ದಂಪತಿಯಿಂದ ಸಂಗೀತ ಕಲಿಕೆ! ಅಫ್ಘಾನ್ ಯುವಕರ ಕಲಾ ಪ್ರೇಮಕ್ಕೆ ಸಲಾಮ್! | ಟ್ರೆಂಡಿಂಗ್ ಸುದ್ದಿ | ACTPnews

Thrilling Story: ಪ್ರಾಣದ ಹಂಗು ತೊರೆದು ಭಾರತೀಯ ದಂಪತಿಯಿಂದ ಸಂಗೀತ ಕಲಿಕೆ! ಅಫ್ಘಾನ್ ಯುವಕರ ಕಲಾ ಪ್ರೇಮಕ್ಕೆ ಸಲಾಮ್! | ಟ್ರೆಂಡಿಂಗ್ ಸುದ್ದಿ


ಕಿಟಕಿ-ಬಾಗಿಲುಗಳಿಗೆ ಕಾರ್ಪೆಟ್ ಹಾಕಿ ಕಲಿಕೆ

ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಕೆಲವು ವಿದ್ಯಾರ್ಥಿಗಳು, ಶಿಕ್ಷಕರು ದೇಶಬಿಟ್ಟರು. ಆದರೆ ಕಾಬೂಲ್ ಮತ್ತು ಹೆರಾತ್ ನಗರಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಲವು ಸಾಹಸ ಮಾಡಿ ಸಿತಾರ್ ಕಲಿಯುತ್ತಿದ್ದಾರೆ. ಸಿತಾರ್ ನುಡಿಸುವಾಗ ಹೊರಬರುವ ಧ್ವನಿ ತಾಲಿಬಾನ್ ಸೈನಿಕರ ಕಿವಿಗೆ ಬೀಳದಂತೆ ಅತ್ಯಂತ ವಿಶಿಷ್ಟ ತಂತ್ರಗಳನ್ನು ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ರೂಮ್​ಗಳ ಕಿಟಕಿ ಮತ್ತು ಬಾಗಿಲುಗಳಿಗೆ ದಪ್ಪನೆಯ ಕಾರ್ಪೆಟ್‌ಗಳನ್ನು (Carpets) ಬಡಿದು ಸೌಂಡ್‌ಪ್ರೂಫ್ ಮಾಡಿಕೊಳ್ಳುತ್ತಿದ್ದಾರೆ. ಸಿತಾರ್ ತಂತಿಗಳನ್ನು ಮೀಟಿದ ತಕ್ಷಣ ಧ್ವನಿ ಹೊರಹೋಗದಂತೆ ತಂತಿಗಳನ್ನು ಕೈಯಿಂದ ಒತ್ತಿ ಹಿಡಿದು ಅತ್ಯಂತ ಸಣ್ಣ ಧ್ವನಿಯಲ್ಲಿ ರಹಸ್ಯವಾಗಿ ಅಭ್ಯಾಸ ಮಾಡುತ್ತಿದ್ದಾರೆ.

ಇಂಟರ್ನೆಟ್ ಮೂಲಕ ಭಾರತದಿಂದ ಕಾಬೂಲ್‌ಗೆ ಸಂಗೀತ ಪಾಠ

ಸೇನಿಯಾ ಮೈಹರ್ ಘರಾನಾ ಶೈಲಿಗೆ ಸೇರಿದ ಪಂಡಿತ್ ಅಭಿಷೇಕ್ ಅಧಿಕಾರಿ ಮತ್ತು ಮೂರ್ಚನಾ ಅವರು 2012 ರಲ್ಲಿ ಕಾಬೂಲ್‌ನಲ್ಲಿದ್ದ ಪ್ರತಿಷ್ಠಿತ ಅಫ್ಘಾನಿಸ್ತಾನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ (ANIM) ಸಂಸ್ಥೆಗೆ ಸೇರಿದ್ದರು. ಅವರು 2012ರಿಂದ 2019ರವರೆಗೆ ಎಎನ್​ಐಎಂ ಸಂಸ್ಥೆಯಲ್ಲಿ ಸಿತಾರ್ ಮತ್ತು ಸರೋದ್ ವಿಭಾಗದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 2019ರಲ್ಲಿ ವೈಯಕ್ತಿಕ ಕಾರಣಗಳಿಂದ ಅಫ್ಘಾನಿಸ್ತಾನ ಬಿಟ್ಟುಬಂದಿದ್ದರು. ಮತ್ತೆ ಮರಳಬೇಕೆಂದು ಬಯಸಿದ್ದರಾದರೂ ಕೋವಿಡ್ 19 ಹಾಗೂ 2021 ರಲ್ಲಿ ತಾಲಿಬಾನ್ ಬಂದ ತಕ್ಷಣ ಇವರಿಬ್ಬರು ತಮ್ಮ ನಿರ್ಧಾರ ಬದಲಿಸಿಕೊಂಡರು. ಆ ನಂತರ ಸಂಸ್ಥೆಯನ್ನು ಮುಚ್ಚಲಾಯಿತು. ಆದರೆ, ಭಾರತಕ್ಕೆ ಮರಳಿದ್ದ ಅಧಿಕಾರಿ ದಂಪತಿಗಳು ತಮ್ಮ ಅಫ್ಘಾನ್ ಶಿಷ್ಯರನ್ನು ಕೈಬಿಡಲಿಲ್ಲ. ಕಟ್ಟುನಿಟ್ಟಿನ ಕಾವಲಿನ ನಡುವೆಯೂ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಪೋರ್ಚುಗಲ್​​ನಲ್ಲಿ ಪಾಠ

“ಕಾಬೂಲ್ ಪತನಗೊಂಡು, ನಮ್ಮ ಸಂಸ್ಥೆಯು ಪೋರ್ಚುಗಲ್‌ಗೆ ಸ್ಥಳಾಂತರಗೊಂಡ ನಂತರವೂ ನಾವು ನಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದೆವು. ಅಫ್ಘಾನಿಸ್ತಾನದಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಆನ್‌ಲೈನ್ ಮೂಲಕ ಪಾಠ ಮಾಡುವುದನ್ನು ಮುಂದುವರಿಸಿದೆವು. ಕಳೆದ ವರ್ಷ, ನಾವು ಪೋರ್ಚುಗಲ್‌ಗೆ ಹೋಗಿ ಅಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದೆವು. ಆದರೆ, ಅಫ್ಘಾನಿಸ್ತಾನದಿಂದ ಹೊರಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಂಗೀತವನ್ನು ಅಭ್ಯಾಸ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ,” ಎಂದು ಪಂಡಿತ್ ಅಧಿಕಾರಿ ಅವರು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಅವರ ಕೆಲವು ವಿದ್ಯಾರ್ಥಿಗಳು ಆನ್‌ಲೈನ್ ಪಾಠಗಳಿಗಾಗಿ ಮತ್ತು ತಾವು ಕ್ಷೇಮವಾಗಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮನ್ನು ಸಂಪರ್ಕಿಸುತ್ತಾರೆ ಎಂದು ಅವರು ಹೇಳಿದರು.

ತಾಲಿಬಾನ್ ಆಡಳಿತದಲ್ಲಿ ಸಂಗೀತವನ್ನು ನಿಷೇಧಿಸಿರುವುದರಿಂದ ಅವರು ನಿರಂತರ ಭಯದ ನಡುವೆಯೇ ಬದುಕುತ್ತಿದ್ದಾರೆ. ಅಲ್ಲಿ ಸಂಗೀತ ವಾದ್ಯಗಳನ್ನು ಧ್ವಂಸಗೊಳಿಸಿದ ಮತ್ತು ಸಂಗೀತಗಾರರಿಗೆ ಶಿಕ್ಷೆ ವಿಧಿಸಿದ ಘಟನೆಗಳು ನಡೆದಿವೆ. ಬದುಕುಳಿಯಲು ಅನೇಕ ಸಂಗೀತಗಾರರು ಸಣ್ಣಪುಟ್ಟ ಕಾಯಕಗಳನ್ನು ಮಾಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಧ್ವನಿ ಹೊರ ಹೋಗದಂತೆ ತಡೆಯಲು ಹೊಸ ಮಾರ್ಗ

ಹೆರಾತ್ ನಗರದ ಅವರ 25 ವರ್ಷದ ವಿದ್ಯಾರ್ಥಿ ಫರ್ಹಾದ್ ತಮ್ಮ ಸಂಗೀತ ತರಬೇತಿ ಬಗ್ಗೆ ಮಾತನಾಡುತ್ತಾ, “ನಾನು ANIM ಸಂಸ್ಥೆಯಲ್ಲಿದ್ದಾಗ ಹಾರ್ಮೋನಿಯಂ, ತಂಬೂರಿ ನುಡಿಸುತ್ತಿದ್ದೆ ಮತ್ತು ಭಾರತೀಯ ಶಾಸ್ತ್ರೀಯ ಗಾಯನವನ್ನು ಅಭ್ಯಾಸ ಮಾಡುತ್ತಿದ್ದೆ. ಈಗ, ನಾನು ಯಾವಾಗ ಹಾಡಬೇಕಾದರೂ ನನ್ನ ಕೋಣೆಯ ಒಳಗೇ ಅತ್ಯಂತ ಸಣ್ಣ ಧ್ವನಿಯಲ್ಲಿ ಹಾಡುತ್ತೇನೆ. ಧ್ವನಿ ಹೊರಹೋಗದಂತೆ ಕೋಣೆಯ ಕಿಟಕಿ ಮತ್ತು ಬಾಗಿಲುಗಳನ್ನು ದಪ್ಪನೆಯ ಕಾರ್ಪೆಟ್‌ಗಳಿಂದ ಮುಚ್ಚಿ ಸೌಂಡ್‌ಪ್ರೂಫ್ ಮಾಡುತ್ತೇನೆ. ನನ್ನ ವಾದ್ಯಗಳನ್ನು ಮನೆಯ ಹತ್ತಿರ ರಹಸ್ಯವಾಗಿ ಬಚ್ಚಿಟ್ಟಿದ್ದೇನೆ. ಒಂದು ವೇಳೆ ತಾಲಿಬಾನ್‌ನವರಿಗೆ ಅವು ಸಿಕ್ಕಿಬಿದ್ದರೆ ನನ್ನ ಗತಿ ಏನಾಗುತ್ತದೋ ನನಗೆ ಗೊತ್ತಿಲ್ಲ,” ಎಂದು ಹೇಳಿದ್ದಾರೆ.

ಶಾಸ್ತ್ರೀಯ ಸಂಗೀತವನ್ನು ಪ್ರೀತಿಸುವ ಅಫ್ಘನ್ನರು

ಅಫ್ಘಾನಿಸ್ತಾನದ ಜನರು ಶಾಸ್ತ್ರೀಯ ಸಂಗೀತವನ್ನು ಎಷ್ಟು ಆಳವಾಗಿ ಪ್ರೀತಿಸುತ್ತಾರೆ ಎಂಬುದನ್ನು ಅಲ್ಲಿ ಕಳೆದ ವರ್ಷಗಳು ತಮಗೆ ತೋರಿಸಿಕೊಟ್ಟಿವೆ ಎಂದು ಮೂರ್ಚನಾ ಅವರು ಹೇಳಿದರು. “ನಾವು ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಆದರೆ ಅಫ್ಘಾನ್ ಜನರು ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ನೀಡುವ ಪ್ರೀತಿ ಅಪ್ರತಿಮವಾದದ್ದು. ಅವರು ಕೇವಲ ಆಧುನಿಕ ಫ್ಯೂಷನ್ ಸಂಗೀತವನ್ನಷ್ಟೇ ಅಲ್ಲ, ಸಂಗೀತದ ಮೂಲ ರೂಪವನ್ನೂ ಗೌರವಿಸುತ್ತಾರೆ. ನಾವು ಅವರಿಗೆ ಇಂದಿಗೂ ಕಲಿಸುತ್ತಿರುವುದಕ್ಕೆ ಇದೂ ಒಂದು ಕಾರಣ,” ಎಂದು ಹೇಳಿದ್ದಾರೆ. ಅಲ್ಲದೆ, ಮುಂಬರುವ ಜೂನ್ ಮತ್ತು ಜುಲೈ ತಿಂಗಳಲ್ಲಿ ಪೋರ್ಚುಗಲ್‌ನಲ್ಲಿರುವ ತಮ್ಮ ವಿದ್ಯಾರ್ಥಿಗಳನ್ನು ಭೇಟಿಯಾಗುವುದಾಗಿ ಅವರು ಸೇರಿಸಿದರು.

ವಿಶ್ವದಾದ್ಯಂತ ಪ್ರದರ್ಶನ ನೀಡಿರುವ ಗುಲಾಲೈ

ಈ ದಂಪತಿಗಳ ವಿದ್ಯಾರ್ಥಿನಿಯಾದ 27 ವರ್ಷದ ಗುಲಾಲೈ, ಅಫ್ಘಾನಿಸ್ತಾನದ ಮೊದಲ ಮಹಿಳಾ ಸಿತಾರ್ ವಾದಕರಲ್ಲಿ ಒಬ್ಬರಾಗಿದ್ದು, ಈಗ ಆಕೆ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. “ನಾನು ಸಂಗೀತ ಕಲಿಯಲು ಬಯಸಿದಾಗ ನನ್ನ ಉಸ್ತಾದ್‌ಗಳು (ಅಧಿಕಾರಿ ಮತ್ತು ಮೂರ್ಚನಾ) ನನಗೆ ದಾರಿ ಮಾಡಿಕೊಟ್ಟರು. ನನ್ನ ಇಬ್ಬರೂ ಉಸ್ತಾದ್‌ಗಳಿಂದಾಗಿ ನಾನು ಇಂದು ಪ್ರಪಂಚದಾದ್ಯಂತ ಪ್ರದರ್ಶನ ನೀಡಿದ್ದೇನೆ. ನನ್ನ ಕಲೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಹೊಸದನ್ನು ಕಲಿಯಲು ನಾನು ಇಂದಿಗೂ ಅವರಿಗೆ ತೊಂದರೆ (ಸಂಪರ್ಕ) ಕೊಡುತ್ತಿರುತ್ತೇನೆ ” ಎಂದು ಅವರು ಹೇಳಿದರು.

ಸಂಗೀತವೊಂದೇ ನಮಗೆ ಶಾಂತಿ

ಕಾಬೂಲ್‌ನಲ್ಲಿ ವಾಸಿಸುತ್ತಿರುವ ಮತ್ತೊಬ್ಬ ವಿದ್ಯಾರ್ಥಿ, 25 ವರ್ಷದ ಸಾಬಿರ್ ಮಾತನಾಡಿ, ‘ತಮ್ಮ ದೇಶದಲ್ಲಿ ನಡೆಯುತ್ತಿರುವ ಈ ಪ್ರಕ್ಷುಬ್ಧತೆಯ ನಡುವೆ ಸಂಗೀತವೊಂದೇ ತಮಗೆ ಶಾಂತಿ ನೀಡುವ ಏಕೈಕ ವಿಷಯ. ನಾನು 2011 ರಲ್ಲಿ ಸರೋದ್ ಕಲಿಯಲು ಪ್ರಾರಂಭಿಸಿದೆ ಮತ್ತು ANIM ನಲ್ಲಿ ಅಧಿಕಾರಿ ದಂಪತಿಗಳ ಬಳಿ ಆರು ವರ್ಷಗಳಿಗೂ ಹೆಚ್ಚು ಕಾಲ ತರಬೇತಿ ಪಡೆದಿದ್ದೇನೆ. ಜೀವನ ಮತ್ತು ಸಂಗೀತದ ಬಗ್ಗೆ ಮಾತನಾಡಲು ನಾನು ಇಂದಿಗೂ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಕೆಲವು ಬಾರಿ, ನಾನು ಕೋಣೆಯನ್ನು ಕಾರ್ಪೆಟ್‌ಗಳಿಂದ ಮುಚ್ಚಿ ಮನೆಯಲ್ಲೇ ಅಭ್ಯಾಸ ಮಾಡುತ್ತೇನೆ. ಸಿತಾರ್ ತಂತಿಗಳನ್ನು ಮೀಟಿದ ತಕ್ಷಣ ಧ್ವನಿಯನ್ನು ಅಡಗಿಸಲು ತಂತಿಗಳನ್ನು ಬೇಗನೆ ಕೈಯಿಂದ ಒತ್ತಿ ಹಿಡಿದು ಅತ್ಯಂತ ಸಣ್ಣ ಧ್ವನಿಯಲ್ಲಿ ನುಡಿಸುತ್ತೇನೆ. ಆದರೆ ನಾನು ನುಡಿಸುವುದನ್ನು ನಿಲ್ಲಿಸುವುದಿಲ್ಲ. ಕ್ಷಣಕಾಲವಾದರೂ ನನ್ನ ಆತ್ಮಕ್ಕೆ ಶಾಂತಿ ನೀಡುವ ಏಕೈಕ ಜೀವಾಳ ಇದಾಗಿದೆ,” ಎಂದು ಅವರು ಹೇಳಿದರು.

ಈ ದಂಪತಿಗಳಿಂದ ರುಬಾಬ್ (Rubab) ವಾದ್ಯವನ್ನು ಕಲಿತು, ಈಗ ಜರ್ಮನಿಯಲ್ಲಿ ವಾಸಿಸುತ್ತಿರುವ 37 ವರ್ಷದ ಉಸ್ತಾದ್ ರಾಮಿನ್ ಸಾಕಿಜಾದಾ ಮಾತನಾಡಿ, ಅಫ್ಘಾನಿಸ್ತಾನದಲ್ಲಿರುವ ತಮ್ಮ ತಂದೆ (ಅವರೂ ಒಬ್ಬ ಸಂಗೀತಗಾರ) ಇಂದಿಗೂ ಪ್ರೇಕ್ಷಕರ ಮುಂದೆ ವಾದ್ಯ ನುಡಿಸಲು ಹಂಬಲಿಸುತ್ತಿದ್ದಾರೆ ಎಂದು ಹೇಳಿದರು.

“ಸಂಗೀತದ ಮೇಲಿನ ಅವರ ಪ್ರೀತಿ ಎಷ್ಟು ಗಾಢವಾಗಿದೆಯೆಂದರೆ, ಇಂಟರ್ನೆಟ್‌ನಲ್ಲಿ ಪಂಡಿತ್ ರವಿಶಂಕರ್ ಅವರ ವೀಡಿಯೊಗಳನ್ನು ವೀಕ್ಷಿಸಲು ಮೊಬೈಲ್ ಫೋನ್ ಖರೀದಿಸಲು ಅವರು ನನ್ನ ಬಳಿ 200 ಯುರೋಗಳನ್ನು ಕಳುಹಿಸಿಕೊಡುವಂತೆ ಕೇಳಿದರು. ಸಂಗೀತದ ಮೇಲಿನ ನನ್ನ ಪ್ರೀತಿಯನ್ನು ಜೀವಂತವಾಗಿಟ್ಟಿರುವ ಸಂಪೂರ್ಣ ಶ್ರೇಯಸ್ಸು ಅಧಿಕಾರಿ ದಂಪತಿಗಳಿಗೆ ಸಲ್ಲುತ್ತದೆ. ಅವರೊಂದಿಗೆ ಈಗ ನಾನು ವೈಯಕ್ತಿಕ ಮತ್ತು ಆತ್ಮೀಯ ಬಾಂಧವ್ಯವನ್ನು ಹೊಂದಿದ್ದೇನೆ,” ಎಂದು ಸಾಕಿಜಾದಾ ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed