Last Updated:
ಹೈದರಾಬಾದ್ನಲ್ಲಿ ಭೂಮಿಯ ಬೆಲೆ ಎಷ್ಟಿದೆ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇಲ್ಲಿ ಒಂದು ಗುಂಟೆ ಭೂಮಿ ಖರೀದಿ ಮಾಡಬೇಕು ಎಂದರೂ ಲಕ್ಷ ಲಕ್ಷ ಹಣ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಟ ಸುಮನ್ ಹೈದರಾಬಾದ್ನಲ್ಲಿ ತಮಗೆ ಇರುವ 170 ಎಕರೆ ಭೂಮಿಯನ್ನು ಸೈನಿಕರಿಗೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ನಿಜವಾಗಿಯೂ ಇಷ್ಟು ಭೂಮಿಯನ್ನು ಸುಮನ್ ಕೊಟ್ಟಿದ್ದಾರಾ? ಎಂಬ ಫ್ಯಾಕ್ಟ್ ಚೆಕ್ ಇಲ್ಲಿದೆ ನೋಡಿ.
ಸಿನಿಮಾ ರಂಗದಲ್ಲಿ (Cinema Industry) ಹಲವು ನಟರು ಸಾಮಾಜಿಕ ಸೇವೆ ಮಾಡುವ ಕಾರ್ಯಗಳನ್ನು ಮಾಡುತ್ತಾರೆ. ಹಲವರು ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ಮೀಸಲು ಮಾಡಿದ್ದಾರೆ (Social Work). ಅದರಲ್ಲೂ ಟಾಲಿವುಡ್ ನಟರು (Tollywood Actors) ಇಂತಹ ಕೆಲಸಗಳನ್ನು ಮಾಡುವ ಕಡೆ ಹೆಜ್ಜೆ ಮುಂದೆಯೇ ಇದ್ದಾರೆ ಎಂದು ಹೇಳಬಹುದು. ಉದಾಹರಣೆಗೆ ನಟ ಚಿರಂಜೀವಿ ಅವರು ಐ ಬ್ಯಾಂಕ್, ಬ್ಲಡ್ ಬ್ಯಾಂಕ್ ಸೇವೆಗಳನ್ನು ನೀಡುತ್ತಿದ್ದಾರೆ. ನಟ ಬಾಲಕೃಷ್ಣ ತಮ್ಮ ತಾಯಿಯ ಹೆಸರಿನಲ್ಲಿ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದು, ಹಲವರಿಗೆ ಉಚಿತ ಸೇವೆ (Free Service) ನೀಡುತ್ತಿದ್ದಾರೆ. ನಟ ಮಹೇಶ್ ಬಾಬು ಈಗಾಗಲೇ ನೂರಾರು ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಇದರಂತೆಯೇ ಹಲವು ಕಲಾವಿದರು, ಅನಾಥಾಶ್ರಮ, ವೃದ್ಧಾಶ್ರಮ ನಡೆಸುತ್ತಿದ್ದಾರೆ.
ಸಾಮಾಜಿಕ ಕೆಲಸ ಮಾಡುವ ಹಲವು ಕಲಾವಿದರು ಪ್ರಚಾರ ಕಾರ್ಯದಿಂದ ದೂರವೇ ಉಳಿಯುತ್ತಾರೆ. ಬಲಗೈ ಕೊಟ್ಟಿದ್ದು, ಎಡಗೈಗೆ ತಿಳಿಯಬಾರದು ಎಂಬ ಮಾತನ್ನು ಹಲವರು ಅನುಸರಿಸುತ್ತಿದ್ದು, ಕೆಲವರು ಯಾರಿಗೂ ತಿಳಿಯದಂತೆ ಅನೇಕ ದೊಡ್ಡ ಕೆಲಸಗಳನ್ನು ಮಾಡುತ್ತಾರೆ. ಸದ್ಯ ಖ್ಯಾತ ನಟರೊಬ್ಬರು ಭಾರತದ ಸೈನಿಕರಿಗೆ ಸುಮಾರು 170 ಎಕರೆ ಭೂಮಿ ನೀಡಿದ್ದಾರೆ ಎಂಬ ಸುದ್ದಿಯೊಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತು ನ್ಯೂಸ್18 ಇಂಗ್ಲೀಷ್ ನಡೆಸಿದ ಫ್ಯಾಕ್ಟ್ ಚೆಕ್ ಸುದ್ದಿಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹಲವು ದಶಕಗಳಿಂದ ಸಿನಿಮಾ ರಂಗದಲ್ಲಿ ನಟಿಸುತ್ತಿರುವ ನಟ ಸುಮನ್ ಅವರಿಗೆ ಹೈದರಾಬಾದ್ ಬಳಿಯ ಭುವನಗಿರಿಯ ಪ್ರದೇಶದಲ್ಲಿ ಸುಮಾರು 170 ಎಕರೆ ಭೂಮಿ ಖರೀದಿ ಮಾಡಿದ್ದರು. ಇಲ್ಲಿ ಒಂದು ಸಿನಿಮಾ ಸ್ಟುಡಿಯೋ ನಿರ್ಮಾಣ ಮಾಡಿ, ಉಳಿದ ಭೂಮಿಯನ್ನು ಕಮರ್ಷಿಯಲ್ ಆಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಈ ಸಮಯದಲ್ಲಿಯೇ ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ ಭಾರತೀಯ ಸೈನಿಕರ ಕುಟುಂಬ ಸದಸ್ಯರಿಗೆ ಭೂಮಿ ನೀಡಲು ಯೋಚನೆ ಮಾಡಿದ್ದರಂತೆ. ಇದರಂತೆ ಅವರು ತಮ್ಮ ಭೂಮಿಯನ್ನು ಸೈನಿಕರಿಗೆ ಉಚಿತವಾಗಿ ನೀಡಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ. ಆದರೆ ಈ ಕುರಿತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸ್ವತಃ ಸುಮನ್ ಅವರೇ ಈಟಿವಿ ತೆಲುಗು ಅವರೊಂದಿಗೆ ಮಾತನಾಡಿ ಈ ಬಗ್ಗೆ ಸ್ಪಷ್ಟನೆ ನೀಡುವುದು ಕಂಡು ಬಂದಿದೆ.
ಈಟಿವಿ ಅವರೊಂದಿಗೆ ಮಾತನಾಡಿದ್ದ ನಟ ಸುಮನ್, ತಾವು ಭೂಮಿಯನ್ನು ಈಗಾಗಲೇ ನೀಡಿದ್ದೇವೆ ಎಂಬ ಮಾಹಿತಿ ಸುಳ್ಳು. ನಮ್ಮ ಭೂಮಿಗೆ ಸಂಬಂಧಿಸಿದ ಪ್ರಕರಣವೊಂದು ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಈ ವಿವಾದ ಮುಗಿದ ಬಳಿಕ ಮಾಧ್ಯಮಗಳಿಗೆ ವೈಯುಕ್ತಿಕವಾಗಿ ಬಂದು ವಿವರಗಳನ್ನು ನೀಡುವುದಾಗಿ ಹೇಳಿದ್ದರು.
ಒಂದು ಆಯುರ್ವೇದಿಕ್ ಹೆಲ್ತ್ ರೆಸಾರ್ಟ್ ನಿರ್ಮಾಣ ಮಾಡಲು ಭೂಮಿ ಖರೀದಿ ಮಾಡಿದ್ದೇವು. ಆದರೆ ಚೆನ್ನೈ ಮತ್ತು ಹೈದರಾಬಾದ್ ನಡುವಿನ ಓಡಾಟದ ಸಂದರ್ಭದಲ್ಲಿ ಭೂಮಿಯ ಕೆಲವು ದಾಖಲೆಗಳು ಮಿಸ್ ಆಗಿತ್ತು. ಆದ್ದರಿಂದ ಗೊಂದಲ ಉಂಟಾಗಿ ಎರಡು-ಮೂರು ರಿಜಿಸ್ಟ್ರೇಷನ್ ಭೂಮಿಯ ಮೇಲೆ ನಡೆದಿದೆ. ಈ ಬಗ್ಗೆ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದೇವೆ. ಈ ಪ್ರಕರಣ ಮುಕ್ತಾಯವಾದರೆ ಸೈನಿಕರಿಗೆ ಈ ಭೂಮಿ ಕೊಡೋಣಾ ಅಂತ ನನ್ನ ಪತ್ನಿ ಹೇಳಿದ್ದರು. ಇದಕ್ಕೆ ನಾನು ಸರಿ ಅಂತ ಹೇಳಿದ್ದೆ. ಏಕೆಂದರೆ ಅವರು ಬಹಳ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಸೇನೆಯ ಮೂರು ದಳಗಳ ಸೈನಿಕರಿಗೆ ಭೂಮಿ ನೀಡಿ, ಅಲ್ಲಿ ಆರ್ಮಿ ಅವರಿಗೆ ಮಾತ್ರ ಟೌನ್ಶಿಪ್ ನಿರ್ಮಾಣ ಮಾಡಲು ಮನವಿ ಮಾಡಿ ಘೋಷಣೆ ಮಾಡಿದ್ದೇವು. ಭೂಮಿಯ ಬೆಲೆ ಎಷ್ಟೇ ಹೆಚ್ಚಾದರೂ ಸೈನಿಕರಿಗೆ ಭೂಮಿ ನೀಡಬೇಕು ಎಂದು ನಿರ್ಧಾರ ಮಾಡಿದ್ದು, ಇದಕ್ಕಾಗಿ ಸುಪ್ರೀಂ ಕೋರ್ಟ್ಗೆ ಹೋಗಲು ಸಿದ್ಧ ಎಂದು ಸುಮನ್ ವರ್ಷಗಳ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.
ಇನ್ನು, ಪುಲ್ವಾಮಾ ದಾಳಿ ಸಂದರ್ಭದಲ್ಲಿ ಹುತಾತ್ಮ ಯೋಧರಿಗಾಗಿ ಸರ್ಕಾರೇತರ ಸಂಸ್ಥೆಯೊಂದು ಮಾಡಿದ್ದ ಕಾರ್ಯಕ್ರಮಕ್ಕೆ ಸುಮನ್ ಬೆಂಬಲ ನೀಡಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಗಿತ್ತು. ಆದರೆ ಇಂದಿಗೂ ಕೋರ್ಟ್ನಲ್ಲಿ ಮುಂದುವರೆದಿದ್ದು, ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇತ್ತ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸದಾ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿರುವ ನಟ, ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಸದ್ಯ ಸುಮನ್ ಅವರು ಸಿನಿಮಾಗಳಿಂದ ದೂರ ಉಳಿದಿದ್ದು, ಆಂಧ್ರಪ್ರದೇಶ ರಾಜ್ಯ ಚಲನಚಿತ್ರ, ದೂರದರ್ಶನ ಮತ್ತು ರಂಗಭೂಮಿ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Hyderabad,Hyderabad,Telangana
Jul 09, 2026 10:32 AM IST













