ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾದ ಭಾರತೀಯ ತಂಡದಲ್ಲಿ ಏಳು ಬದಲಾವಣೆಗಳನ್ನು ಮಾಡಲಾಗಿದೆ. ಈ ತಂಡದಲ್ಲಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಕೆಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಈ ತಂಡದಲ್ಲಿ ಒಬ್ಬ ಆರ್ಸಿಬಿ ಆಟಗಾರನಿಗೂ ಅವಕಾಶ ನೀಡಲಾಗಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅನ್ನು ಬಲಪಡಿಸಲು ಮತ್ತು ಎಡ-ಬಲ ಸಂಯೋಜನೆಯನ್ನು ಒದಗಿಸಲು ರಜತ್ ಪಾಟಿದಾರ್ ಅವರನ್ನು ಸೇರಿಸಿಕೊಳ್ಳಲು ಮಾಜಿ ಕ್ರಿಕೆಟಿಗರು ಸೂಚಿಸಿದ್ದರೂ, ಆಯ್ಕೆದಾರರು ಮಾತ್ರ ದಿಗ್ಗಜರ ಶಿಫಾರಸನ್ನು ನಿರ್ಲಕ್ಷಿಸಿದ್ದಾರೆ.
ಐಪಿಎಲ್ 2026ರ ಋತುವಿನಲ್ಲಿ ಅಸಾಧಾರಣ ಬೌಲಿಂಗ್ನೊಂದಿಗೆ ಅಗ್ರ ವಿಕೆಟ್ ಪಡೆದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಸಹ ಕಡೆಗಣಿಸಲಾಗಿದೆ. ರಜತ್ ಪಟಿದಾರ್ ಅವರಿಗೆ 31 ವರ್ಷ ಮತ್ತು ಭುವನೇಶ್ವರ್ ಅವರಿಗೆ 36 ವರ್ಷ. ಆಯ್ಕೆದಾರರು ಈಗಾಗಲೇ ಟಿ20ಗೆ ಯುವ ಆಟಗಾರರನ್ನು ಮಾತ್ರ ಪರಿಗಣಿಸುತ್ತಿರುವುದಾಗಿ ಸೂಚಿಸಿದ್ದಾರೆ. ಆದರೆ ಗೌತಮ್ ಗಂಭೀರ್ ಮತ್ತು ಆಯ್ಕೆದಾರರು ಜಿಂಬಾಬ್ವೆ ಪ್ರವಾಸಕ್ಕಾಗಿ ಆರ್ಸಿಬಿ ಯಂಗ್ ಸ್ಟರ್ ರಸಿಕ್ ಸಲಾಂ ಮತ್ತು ರಜತ್ ಪಾಟೀದಾರ್ ಅವರನ್ನು ಕಡೆಗಣಿಸಿದ್ದಾರೆ.
ಭುವನೇಶ್ವರ ಕುಮಾರ್ ಜೊತೆಗೆ, ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ ರಸಿಕ್ ದಾರ್ ಸಲಾಂ ಅವರನ್ನು ಆಯ್ಕೆದಾರರು ಕಡೆಗಣಿಸಿದ್ದಾರೆ. 26 ವರ್ಷದ ರಸಿಕ್ ಸಲಾಂ ಐಪಿಎಲ್ ಋತುವಿನಲ್ಲಿ 12 ಪಂದ್ಯಗಳಲ್ಲಿ 19 ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಅವರು ಋತುವಿನ ಅತಿ ಹೆಚ್ಚು ವಿಕೆಟ್ ಪಡೆದ ಅನ್ಕ್ಯಾಪ್ಡ್ ಆಟಗಾರನಾಗಿ ಹೊರಹೊಮ್ಮಿದರು. ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೂ, ಆಯ್ಕೆದಾರರು ಜಿಂಬಾಬ್ವೆ ಪ್ರವಾಸಕ್ಕೆ ರಸಿಕ್ ದಾರ್ ಸಲಾಂ ಅವರನ್ನು ಆಯ್ಕೆ ಮಾಡಿಲ್ಲ.
ಇಷ್ಟೆ ಅಲ್ಲ, ಈ ಹಿಂದೆ ಟೀಮ್ ಇಂಡಿಯಾದ ಯೋಜನೆಗಳ ಭಾಗವಾಗಿದ್ದ ಆಟಗಾರರಾದ ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ ಮತ್ತು ವೆಂಕಟೇಶ್ ಅಯ್ಯರ್ ಅವರನ್ನು ಸಹ ಕಡೆಗಣಿಸಲಾಗಿದೆ. ಟಿ20 ತಂಡ ಆಯ್ಕೆಗೆ ಐಪಿಎಲ್ ಅನ್ನು ಮಾನದಂಡವಾಗಿ ಬಳಸುವ ಆಯ್ಕೆದಾರರು, ಚಾಂಪಿಯನ್ ತಂಡದ ಒಬ್ಬ ಆಟಗಾರನಿಗೂ ಅವಕಾಶ ನೀಡಲು ವಿಫಲರಾಗಿರುವುದು ಆಶ್ಚರ್ಯಕರವಾಗಿದೆ.
ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಾರಣದಿಂದಾಗಿ ಆರ್ಸಿಬಿ ಆಟಗಾರರಿಗೆ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ ಎಂದು ಫ್ರಾಂಚೈಸಿಯ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸುತ್ತಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಮತ್ತು ಅದರ ಅಭಿಮಾನಿಗಳೊಂದಿಗಿನ ಹಿಂದಿನ ಘರ್ಷಣೆಗಳಿಂದಾಗಿ ಗಂಭೀರ್ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ.
ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾದ ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಾಯಾಂಕ್ ಯಾದವ್ಗಿಂತ ರಸಿಕ್ ದಾರ್ ಸಲಾಂ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ವಿಮರ್ಶಕರು ಕೂಡ ವಾದಿಸಿದ್ದಾರೆ. ಆದರೆ ಅವರು ಆರ್ಸಿಬಿ ಆಟಗಾರ ಎಂಬ ಕಾರಣಕ್ಕಾಗಿ ಅವರನ್ನು ಕಡೆಗಣಿಸಲಾಗಿದೆ. 2026ರ ಐಪಿಎಲ್ನಲ್ಲಿ ಯಶ್ ಠಾಕೂರ್ 10 ಪಂದ್ಯಗಳಿಂದ 9 ವಿಕೆಟ್, ಮಯಾಂಕ್ ಯಾದವ್ 4 ಪಂದ್ಯಗಳಿಂದ 0, ಅಶೋಕ್ ಶರ್ಮಾ 6 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದಾರೆ.
ಇನ್ನು ಹರ್ಷ್ ದುಬೆಗಿಂತ ಉತ್ತಮವಾಗಿ ಪ್ರದರ್ಶನ ನೀಡಿದ ಕೃನಾಲ್ ಪಾಂಡ್ಯ ಅವರನ್ನು ಆಯ್ಕೆದಾರರು ನಿರ್ಲಕ್ಷಿಸಿದ್ದಾರೆ ಎಂಬ ಹತಾಶೆಯೂ ಕೇಳಿಬರುತ್ತಿದೆ.
ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಇಶಾನ್ ಕಿಶನ್, ಪ್ರಭಸಿಮ್ರನ್ ಸಿಂಗ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್.
Team India: 19 ವಿಕೆಟ್ ಪಡೆದವನಿಗೆ ನೋ ಚಾನ್ಸ್, 0, 6, 9 ವಿಕೆಟ್ ಪಡೆದವರಿಗೆ ಅವಕಾಶ! ಆತ ತಂಡದಲ್ಲಿರುವವರೆಗೂ ಆರ್ಸಿಬಿ ಆಟಗಾರರಿಗೆ ಅನ್ಯಾಯ ಪಕ್ಕಾ!












