Last Updated:
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರೂ, ಗಾಯದ ಕಾರಣ ಬ್ಯಾಟಿಂಗ್ ತ್ಯಜಿಸಿ ಮೈದಾನದಿಂದ ಹೊರನಡೆದಿದ್ದಾರೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರೂ, ಗಾಯದ ಕಾರಣ ಬ್ಯಾಟಿಂಗ್ ತ್ಯಜಿಸಿ ಮೈದಾನದಿಂದ ಹೊರನಡೆದಿದ್ದಾರೆ. ರೋಹಿತ್ ಹಾಗೂ ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಸಂದರ್ಭದಲ್ಲಿ ಗಿಲ್ ಸಹ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರೊಂದಿಗೆ ನಿರ್ಣಾಯಕ ಶತಕದ ಜೊತೆಯಾಟ ನಡೆಸಿ ಭಾರತ ತಂಡವನ್ನು ಅತ್ಯುತ್ತಮವಾದ ಸ್ಥಾನದಲ್ಲಿ ಇರಿಸಿದ್ದರು, ಆದರೆ ಅವರು ಬಲಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿ ನಿವೃತ್ತಿ ತೆಗೆದುಕೊಂಡರು.
ಆರಂಭದಿಂದಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಗಿಲ್, ಅರ್ಧಶತಕ ಬಾರಿಸಿದರು. ಆದರೆ 24 ನೇ ಓವರ್ ಆರಂಭದಲ್ಲಿ ಗಿಲ್ ಮೊದಲು ಬಲಗಾಲಿನಲ್ಲಿ ಸ್ನಾಯು ಸೆಳೆತವನ್ನು ಅನುಭವಿಸಿದರು. ತಂಡದ ಫಿಸಿಯೋ ತಕ್ಷಣ ಮೈದಾನಕ್ಕೆ ಬಂದು ಅವರಿಗೆ ಚಿಕಿತ್ಸೆ ನೀಡಿದರು. ನಿರಾಳವಾದ ನಂತರ, ಗಿಲ್ ಮತ್ತೆ ಬ್ಯಾಟಿಂಗ್ ಮಾಡಲು ಸಿದ್ಧರಾದರು. ಕೆಲವು ಎಸೆತಗಳನ್ನು ಆಡಿದ ನಂತರ, ಗಿಲ್ ಮತ್ತೆ 26ನೇ ಓವರ್ ಸಮಯದಲ್ಲಿ ನೋವಿನಿಂದ ಬಳಲುತ್ತಿದ್ದರು, ಈ ಬಾರಿ ನೋವು ಹೆಚ್ಚು ತೀವ್ರವಾಗಿತ್ತು. ಗಿಲ್ ಸರಿಯಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ. ಫಿಸಿಯೋ ಮತ್ತೆ ಮೈದಾನಕ್ಕೆ ಬಂದರು, ಆದರೆ ಈ ಬಾರಿ ನೋವು ತುಂಬಾ ತೀವ್ರವಾಗಿದ್ದರಿಂದ ಅವರು ಮೈದಾನದಿಂದ ಹೊರಹೋಗಬೇಕಾಯಿತು.
ಹಿರಿಯರ ವೈಫಲ್ಯದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿ ತಂಡವನ್ನ ಗೆಲುವಿನತ್ತ ಮುನ್ನಡೆಸುತ್ತಿದ್ದ ನಾಯಕ ತಕ್ಷಣ ಮೈದಾನ ತೊರೆದದ್ದು ಭಾರತ ತಂಡದಲ್ಲಿ ಆತಂಕಕ್ಕೆ ಕಾರಣವಾಗಿದೆ. ಗಿಲ್ ಡ್ರೆಸ್ಸಿಂಗ್ ಕೋಣೆಯ ಕಡೆಗೆ ಹೋಗುವಾಗ ಸರಿಯಾಗಿ ನಡೆಯಲು ಸಾಧ್ಯವಾಗಲಿಲ್ಲ. ಗಾಯವೇನಾದರೂ ಗಂಭೀರವಾಗಿದ್ದರೆ ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯಬೇಕಾಗಬಹುದು. ರೋಹಿತ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗಿಲ್ ರೋಹಿತ್ ಮೇಲಿನ ಹೊರೆಯನ್ನ ಕಡಿಮೆ ಮಾಡಿ, ಹಿಟ್ಮ್ಯಾನ್ ಲಯಕಂಡುಕೊಳ್ಳಲು ನೆರವಾಗುತ್ತಿದ್ದರು. ಆದರೆ ಸ್ವತಃ ಗಿಲ್ ಗಾಯಗೊಂಡಿರುವುದು ಭಾರತೀಯ ಅಭಿಮಾನಿಗಳಿಗೆ ಆತಂಕವನ್ನುಂಟು ಮಾಡಿದೆ.
ಏಕದಿನ ವಿಶ್ವಕಪ್ ಆಡಲೇ ಬೇಕೆಂದು ಶಪಥ ಮಾಡಿರುವ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಇಂದು ನಿರಾಶೆ ಮೂಡಿಸಿದರು. ಕಳೆದ ಅಫ್ಘಾನ್ ಸರಣಿಯಲ್ಲಿ ಕೇವಲ ಒಂದು ಅರ್ಧಶತಕ ಸಿಡಿಸಿದ್ದರು. ಈ ಸರಣಿಯಲ್ಲಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಲಿಲ್ಲ. ಕೇವಲ 21 ಎಸೆತಗಳಲ್ಲಿ 11 ರನ್ ಗಳಿಸಿ ನಿರ್ಗಮಿಸಿದರು.
ಐಪಿಎಲ್ ನಂತರ ಮೊದಲ ಬಾರಿಗೆ ಮೈದಾನಕ್ಕೆ ಇಳಿದಿದ್ದ ವಿರಾಟ್ ಕೊಹ್ಲಿ ಕೂಡ ಕೇವಲ 5 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಇಬ್ಬರು ತಮ್ಮ ಲಯಕ್ಕೆ ಮರಳದಿದ್ದರೆ ತಂಡದಲ್ಲಿ ಅವರು ಸ್ಥಾನ ಕಳೆದುಕೊಳ್ಳುವ ಸಂಭವವೂ ಇದೆ.
Jul 14, 2026 10:51 PM IST














