Last Updated:
Supreme Court: ಗೃಹಿಣಿಯರೇ ದೇಶದ ನಿಜವಾದ ನಿರ್ಮಾಪಕರು; ಮದುವೆ ಎಂದರೆ ಮನೆ ಕೆಲಸದ ಆಳಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಮನೆಕೆಲಸಕ್ಕೆ ತಿಂಗಳಿಗೆ 30,000 ರೂಪಾಯಿ ಎಂದ ಸರ್ವೋಚ್ಚ ನ್ಯಾಯಾಲಯ
ನವದೆಹಲಿ: ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮಹತ್ವದ ತಿರುವು. ಯಾಕಂದ್ರೆ, ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಮಹಿಳೆಯರ ಮನೆಕೆಲಸಕ್ಕೆ (Homework) ಐತಿಹಾಸಿಕ ಮಾನ್ಯತೆ ನೀಡಿದೆ. ಹೌದು, ಅಪಘಾತ ಪರಿಹಾರ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, “ಗೃಹಿಣಿಯರ ಕೆಲಸವನ್ನು ಕೇವಲ ಮನೆಕೆಲಸ ಎಂದು ಕರೆಯುವ ಬದಲಾಗಿ, ಅವರನ್ನು ದೇಶದ ನಿರ್ಮಾಪಕರು (Nation Builders)” ಎಂದು ಬಣ್ಣಿಸಿದೆ. ಈ ಮೂಲಕ, ಕೋಟ್ಯಂತರ ಗೃಹಿಣಿಯರ (Homemaker) ಪರಿಶ್ರಮಕ್ಕೆ ಬೆಲೆ ನೀಡಿದೆ.
ಪಂಜಾಬ್‌ನಲ್ಲಿ 2001 ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ, ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದ ರೇಷ್ಮಾ ಎಂಬ ಮನೆಕೆಲಸದಾಕೆ ದುರಂತವಾಗಿ ಸಾವನ್ನಪ್ಪುತ್ತಾರೆ. ಇನ್ನು, ಮೃತ ಮಹಿಳೆಯ ಕುಟುಂಬದವರು ಸೂಕ್ತ ಪರಿಹಾರಕ್ಕಾಗಿ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ, ತದನಂತರ ಹೈಕೋರ್ಟ್‌ನ ಮೆಟ್ಟಿಲೇರಿದರು. ದುರದೃಷ್ಟವಶಾತ್, ಈ ಕಾನೂನು ಹೋರಾಟದ ಮಧ್ಯೆ ಕೋರ್ಟ್‌ನಲ್ಲಿದ್ದ ದಾಖಲೆಗಳು ಆಕಸ್ಮಿಕ ಬೆಂಕಿ ಅವಗಡದಲ್ಲಿ ಸುಟ್ಟುಹೋದವು. ಇದರಿಂದಾಗಿ ಪ್ರಕರಣ ಮತ್ತಷ್ಟು ವಿಳಂಬವಾಗಿ, ನ್ಯಾಯ ಸಿಗಲು ಬರೋಬ್ಬರಿ 22 ಕ್ಕೂ ಹೆಚ್ಚು ವರ್ಷಗಳೇ ಬೇಕಾದವು.
ಈ ಹಿಂದೆ ಹೈಕೋರ್ಟ್, ಗೃಹಿಣಿಯರ ಶ್ರಮವನ್ನು ಕೌಶಲ್ಯರಹಿತ ಅಥವಾ ದಿನಗೂಲಿ ನೌಕರರಿಗಿಂತ ಕಡಿಮೆ ಎಂದು ಅಂದಾಜಿಸಿ, ರೇಷ್ಮಾ ಅವರ ಕುಟುಂಬಕ್ಕೆ ಕೇವಲ ₹8.43 ಲಕ್ಷ ಪರಿಹಾರವನ್ನು ನಿಗದಿಪಡಿಸಿತ್ತು. ಆದ್ರೆ, ಆಕೆ ಕುಟುಂಬದವರು ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಈ ಪ್ರಕರಣದ ಆಳಕ್ಕೆ ಹೋದ ಸುಪ್ರೀಂ ಕೋರ್ಟ್ ಎರಡು ಮುಖ್ಯ ಸಂಗತಿಗಳನ್ನು ಗಮನಿಸಿತು. ಅದುವೇ, ಪರಿಹಾರ ನೀಡುವಲ್ಲಿ ಆಗುತ್ತಿರುವ ತಲೆಮಾರುಗಳ ದೀರ್ಘ ವಿಳಂಬ ಹಾಗೂ ಗೃಹಿಣಿಯರ ಕಠಿಣ ಶ್ರಮವನ್ನು ವ್ಯವಸ್ಥಿತವಾಗಿ ಕಡಿಮೆ ಅಂದಾಜು ಮಾಡುತ್ತಿರುವುದು.
ಇನ್ನೂ, ಈ ತಾರತಮ್ಯವನ್ನು ಕಟುವಾಗಿ ಟೀಕಿಸಿದ ಸುಪ್ರೀಂ ಕೋರ್ಟ್, ಗೃಹಿಣಿಯರು ಯಾವುದೇ ರಜೆ ಇಲ್ಲದೆ ವರ್ಷದ 365 ದಿನಗಳೂ ದಿನದ 24 ಗಂಟೆಯೂ ದುಡಿಯುತ್ತಾರೆ. ಹಾಗಾಗಿ, ಅವರ ಸೇವೆಯ ಆರ್ಥಿಕ ಮೌಲ್ಯವನ್ನು ಕನಿಷ್ಠ ತಿಂಗಳಿಗೆ 30,000 ರೂಪಾಯಿ ಎಂದು ಪರಿಗಣಿಸಬೇಕು ಎಂದು ಕಡ್ಡಾಯಗೊಳಿಸಿದೆ. ಜೊತೆಗೆ, ಹೈಕೋರ್ಟ್ ನೀಡಿದ್ದ ಪರಿಹಾರವನ್ನು ₹62.77 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿತು.
ಮುಂದುವರೆದು, ಅಪಘಾತದಲ್ಲಿ ಮನೆಕೆಲಸದಾಕೆ ಮೃತಪಟ್ಟರೆ ಅಥವಾ ಅಂಗವಿಕಲರಾದರೆ ಕುಟುಂಬವು ಕೇವಲ ಆದಾಯವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ, ಮನೆಯ ಆರೈಕೆ, ಮಕ್ಕಳ ಪಾಲನೆ, ವಯಸ್ಸಾದವರ ಸೇವೆ, ಅಡುಗೆ, ಸ್ವಚ್ಛತೆ ಮತ್ತು ಭಾವನಾತ್ಮಕ ಬೆಂಬಲವನ್ನೂ ಕಳೆದುಕೊಳ್ಳುತ್ತದೆ. ಹಾಗಾಗಿ, ಮೋಟಾರು ವಾಹನ ಕಾಯ್ದೆಯಡಿ ಪರಿಹಾರ ಲೆಕ್ಕ ಹಾಕುವಾಗ ಈ ನಷ್ಟವನ್ನು ಸ್ವತಂತ್ರವಾಗಿ ಗುರುತಿಸಬೇಕು ಎಂದು ಹೇಳಿದ ಕೋರ್ಟ್, “ಯಾವುದೇ ಸಂದರ್ಭದಲ್ಲೂ ಈ ದೇಶೀಯ ಆರೈಕೆಯ ಕನಿಷ್ಠ ಮಾಸಿಕ ಆದಾಯ 30,000 ರೂಪಾಯಿ ಎಂದು ಪರಿಗಣಿಸಬೇಕು” ಎಂದು ಆದೇಶಿಸಿದೆ.
ಏತನ್ಮಧ್ಯೆ, ತೀರ್ಪು ನೀಡುತ್ತಾ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಗೃಹಿಣಿ ಮನುಷ್ಯನ ಬೆಳವಣಿಗೆಗೆ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುತ್ತಾರೆ. ಹಾಗಾಗಿ, “ಗೃಹಿಣಿ ಎಂದರೆ ದೇಶವನ್ನು ಕಟ್ಟುವವಳು” ಎಂದು ಹೇಳಿದ್ದಾರೆ.
ಇದೇ ವೇಳೆ, ತೀರ್ಪಿನಲ್ಲಿ ನ್ಯಾಯಾಲಯವು ಮದುವೆಯಲ್ಲಿನ ಲಿಂಗ ಪಾತ್ರಗಳ ಬಗ್ಗೆಯೂ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿ, “ಮದುವೆಯನ್ನು ಮಹಿಳೆಗೆ ಮಾತ್ರ ಮನೆಕೆಲಸದ ಸಂಪೂರ್ಣ ಜವಾಬ್ದಾರಿ ಇರುವ ವ್ಯವಸ್ಥೆಯಾಗಿ ನೋಡಬಾರದು” ಎಂದು ಹೇಳಿದೆ. ಇದೇ ವೇಳೆ, ಮದುವೆ ಎಂದರೆ ಕೆಲಸದಾಕೆಯನ್ನು ನೇಮಿಸಿಕೊಳ್ಳುವುದಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಮನೆ ಜವಾಬ್ದಾರಿಗಳು ಗಂಡ ಮತ್ತು ಹೆಂಡತಿ ಇಬ್ಬರ ಹಂಚಿಕೆಯ ಕರ್ತವ್ಯಗಳು ಎಂದು ಸ್ಪಷ್ಟಪಡಿಸಿದೆ.
New Delhi,Delhi













