Last Updated:
ಖ್ಯಾತ ನಿರ್ದೇಶಕಿ ಸುಧಾ ಕೊಂಗರ (Sudha Kongara) ಅವರು ತಮ್ಮ ನಿರ್ದೇಶನದ ‘ಪರಾಶಕ್ತಿ’ (Parashakti) ಚಿತ್ರದ ಸಂಭಾವನೆ ಪಾವತಿಯಾಗಿಲ್ಲ ಎಂದು ಆರೋಪಿಸಿ ಡಾನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ವಿರುದ್ಧ ಚೆನ್ನೈ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ವಿವಾದ ಬೆಳಕಿಗೆ ಬಂದಿದೆ. ಖ್ಯಾತ ನಿರ್ದೇಶಕಿ ಸುಧಾ ಕೊಂಗರ (Sudha Kongara) ಅವರು ತಮ್ಮ ನಿರ್ದೇಶನದ ‘ಪರಾಶಕ್ತಿ’ (Parashakti) ಚಿತ್ರದ ಸಂಭಾವನೆ ಪಾವತಿಯಾಗಿಲ್ಲ ಎಂದು ಆರೋಪಿಸಿ ಡಾನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ವಿರುದ್ಧ ಚೆನ್ನೈ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 8.39 ಕೋಟಿ ರೂಪಾಯಿ ಬಾಕಿ ಸಂಭಾವನೆ ನೀಡಬೇಕಿದೆ ಎಂದು ಅವರು ನ್ಯಾಯಾಲಯದ ಮೊರೆ ಹೋಗಿರುವುದು ಚಿತ್ರರಂಗದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸುಧಾ ಕೊಂಗರ ಅವರ ಅರ್ಜಿಯ ಪ್ರಕಾರ, ‘ಪರಾಶಕ್ತಿ’ ಚಿತ್ರವನ್ನು ನಿರ್ದೇಶಿಸಲು ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದವಾಗಿತ್ತು. ಒಪ್ಪಂದದಂತೆ ಒಟ್ಟು 15 ಕೋಟಿ ರೂಪಾಯಿ ಸಂಭಾವನೆ ನಿಗದಿಯಾಗಿದ್ದರೂ, ಅದರಲ್ಲಿ 8.39 ಕೋಟಿ ರೂಪಾಯಿ ಇನ್ನೂ ಪಾವತಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಬಾಕಿ ಮೊತ್ತವನ್ನು ತಕ್ಷಣ ಪಾವತಿಸುವಂತೆ ಕೋರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಂಭಾವನೆ ಪಾವತಿಯಾಗುವವರೆಗೆ ಚಿತ್ರದ ಕೆಲವು ವಾಣಿಜ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ನಿರ್ಬಂಧ ಹೇರಬೇಕೆಂದು ಸುಧಾ ಕೊಂಗರ ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ ‘ಪರಾಶಕ್ತಿ’ ಚಿತ್ರದ ಹಕ್ಕುಗಳನ್ನು ಮೂರನೇ ವ್ಯಕ್ತಿಗೆ ವರ್ಗಾಯಿಸದಂತೆ ಆದೇಶ ನೀಡಬೇಕು ಹಾಗೂ ಚಿತ್ರದ ಒಟಿಟಿ ಮತ್ತು ದೂರದರ್ಶನ ಪರವಾನಗಿಗಳಿಂದ ಬಂದಿರುವ ಆದಾಯದ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ಮಾಣ ಸಂಸ್ಥೆಗೆ ಸೂಚಿಸಬೇಕು ಎಂದು ಕೋರಲಾಗಿದೆ.
ಪರಾಶಕ್ತಿ ಚಿತ್ರದಲ್ಲಿ ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ರವಿ ಮೋಹನ್, ಅಥರ್ವ, ಶ್ರೀಲೀಲಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಚಿತ್ರ ಬಿಡುಗಡೆಯ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು ಎಂದು ವರದಿಗಳು ತಿಳಿಸಿವೆ. ಇದೀಗ ಚಿತ್ರದ ಯಶಸ್ಸಿಗಿಂತ ಸಂಭಾವನೆ ವಿವಾದವೇ ಹೆಚ್ಚು ಸುದ್ದಿಯಾಗುತ್ತಿದೆ.
ಪ್ರಸ್ತುತ ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿರುವುದರಿಂದ, ಡಾನ್ ಪಿಕ್ಚರ್ಸ್ ತನ್ನ ಪ್ರತಿಕ್ರಿಯೆ ಸಲ್ಲಿಸಿದ ನಂತರವೇ ಮುಂದಿನ ಬೆಳವಣಿಗೆಗಳು ಸ್ಪಷ್ಟವಾಗಲಿವೆ. ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಅಂತಿಮ ಆದೇಶ ನೀಡಲಿದೆ.
Bangalore [Bangalore],Bangalore,Karnataka













