SRH vs RR: ವೈಭವ್ ಅಬ್ಬರ, ಆರ್ಚರ್​ ಬಿರುಗಾಳಿ ಬೌಲಿಂಗ್​​ಗೆ ಹೈದರಾಬಾದ್​ ಧೂಳೀಪಟ! SRH ಮಣಿಸಿ ಕ್ವಾಲಿಫೈಯರ್​-2ಗೆ ಅರ್ಹತೆ ಪಡೆದ ರಾಜಸ್ಥಾನ್ | ಕ್ರೀಡಾ ಸುದ್ದಿ | ACTPnews

ಕ್ವಾಲಿಫೈಯರ್ 2 ಪ್ರವೇಶಿಸಿದ ರಾಜಸ್ಥಾನ್


Last Updated:

ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್​​ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್​​​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್ 196ಕ್ಕೆ​ ಆಲೌಟ್ ಮಾಡುವ ಮೂಲಕ ಹೀನಾಯ ಸೋಲು ಕಂಡಿತು.

ಕ್ವಾಲಿಫೈಯರ್ 2 ಪ್ರವೇಶಿಸಿದ ರಾಜಸ್ಥಾನ್
ಕ್ವಾಲಿಫೈಯರ್ 2 ಪ್ರವೇಶಿಸಿದ ರಾಜಸ್ಥಾನ್

ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 47 ರನ್​ಗಳ ಅಂತರದಿಂದ ಸನ್​ರೈಸರ್ಸ್ ಹೈದರಾಬಾದ್ ಬಗ್ಗುಬಡಿದಿದೆ. ಈ ಗೆಲುವಿನ ಮೂಲಕ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆದಿದೆ. ರಾಯಲ್ಸ್ ಶುಕ್ರವಾರ ಗುಜರಾತ್​​ ಟೈಟನ್ಸ್ ವಿರುದ್ಧ ಫೈನಲ್​ ಪ್ರವೇಶ ನಿರ್ಧರಿಸುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್​​​​​ ಬೌಲಿಂಗ್​​ ಪಡೆಯನ್ನ ಧೂಳೀಪಟ ಮಾಡಿ 20 ಓವರ್​​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಆದರೆ 244 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್ ತಂಡ 19.2 ಓವರ್​ಗಳಲ್ಲಿ 196 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.

ಹೈದರಾಬಾದ್​​​​ಗೆ ಆರ್ಚರ್ ಆಘಾತ

244 ರನ್​​​​ಗಳ ಗುರಿ ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್ ಕಳಪೆ ಆರಂಭ ಪಡೆದುಕೊಂಡಿತು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಖಾತೆ ತೆರೆಯದೇ ಜೋಫ್ರಾ ಆರ್ಚರ್​ ಬೌಲಿಂಗ್​​ನಲ್ಲಿ ಜುರೆಲ್​​​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಇಶಾನ್ ಕಿಶನ್​ ಚೇಸಿಂಗ್​​ಗೆ ತಕ್ಕಂತೆ ಬ್ಯಾಟ್ ಮಾಡಿದರು. ಆದರೆ 11 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​​ಗಳ ಸಹಿತ 33 ರನ್​ಗಳಿಸಿ ಆರ್ಚರ್​ ಬೌಲಿಂಗ್​​ನಲ್ಲಿ ಫೆರೇರಾಗೆ ಕ್ಯಾಚ್ ನೀಡಿ ಔಟ್ ಆದರು. ಇಶಾನ್ ಬೆನ್ನಲ್ಲೇ ಕನ್ನಡಿಗ ಸ್ಮರಣ್ ರವಿಚಂದ್ರನ್ 4 ಎಸೆತಗಳನ್ನಾಡಿ 1 ರನ್​ಗಳಿಸಿ ನಾಂಡ್ರೆ ಬರ್ಗರ್​ಗೆ ವಿಕೆಟ್ ಒಪ್ಪಿಸಿದರು. 5ನೇ ಓವರ್​​​​​​​​​ನಲ್ಲಿ ಆರ್ಚರ್ 8 ಎಸೆತಗಳಲ್ಲಿ 17 ರನ್​​ಗಳಿಸಿದ್ದ ಸ್ಫೋಟಕ ಆಟಗಾರ ಟ್ರಾವಿಸ್​​ ಹೆಡ್​ರನ್ನೂ ಪೆವಿಲಿಯನ್ ಸೇರಿಸಿದರು.

ಕ್ಲಾಸೆನ್​ರಿಂದಲೂ ಸಿಗದ ಬೆಂಬಲ

ಹೈದರಾಬಾದ್​ ಆಪತ್ಭಾಂದವನಾಗಿದ್ದ ಹೆನ್ರಿಕ್ ಕ್ಲಾಸೆನ್ ಇಂದು ತಂಡಕ್ಕೆ ನೆರವಾಗಲಿಲ್ಲ. 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 18 ರನ್​ಗಳಿಸಿ ಕನ್ನಡಿಗ ಯಶ್​ ರಾಜ್ ಪೂಂಜಾಗೆ ವಿಕೆಟ್ ಒಪ್ಪಿಸಿದರು. ಹೈದರಾಬಾದ್​ ಹೀನಾಯವಾಗಿ ಸೋಲುವ ಸ್ಥಿತಿಯಲ್ಲಿತ್ತು. ಆದರೆ ನಿತೀಶ್ ಕುಮಾರ್​ ರೆಡ್ಡಿ ಹಾಗೂ ಸಲೀಲ್ ಅರೋರಾ 56 ರನ್​​​​ಗಳ ಜೊತೆಯಾಟ ನಡೆಸಿ ಹೈದರಾಬಾದ್​ ಅಭಿಮಾನಿಗಳ ಮುಖದಲ್ಲಿ ಮಂದಹಾಸ ತಂದರು. ಆದರೆ ಅನುಭವಿ ಜಡೇಜಾ ಈ ಇಬ್ಬರನ್ನ ಪೆವಿಲಿಯನ್​ ಸೇರಿಸಿ ಸನ್​ರೈಸರ್ಸ್ ತಂಡದ ಎಲ್ಲಾ ಭರವಸೆಯನ್ನ ನುಚ್ಚು ನೂರು ಮಾಡಿದರು. 11ನೇ ಓವರ್​​ನಲ್ಲಿ 20 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ಗಳ ಸಹಿತ 38 ರನ್​ಗಳಿಸಿದ್ದ ರೆಡ್ಡಿ ಶನಕಾಗೆ ಕ್ಯಾಚ್ ನೀಡಿ ಔಟ್ ಆದರು.

ಮುಂದಿನ ಓವರ್​​ನಲ್ಲಿ ಹೈದರಾಬಾದ್​ ನಾಯಕ ಪ್ಯಾಟ್ ಕಮಿನ್ಸ್ 2 ಎಸೆತಗಳಲ್ಲಿ 1 ರನ್​ಗಳಿಸಿ ಸುಶಾಂತ್ ಮಿಶ್ರಾ ಬೌಲಿಂಗ್​​ನಲ್ಲಿ ಆರ್ಚರ್​ಗೆ ಕ್ಯಾಚ್ ನೀಡಿದರು. 15ನೇ ಓವರ್​​ನಲ್ಲಿ ಜಡೇಜಾ 21 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ 35 ರನ್​ಗಳಿಸಿದ್ದ ಸಲೀಲ್​ ಅರೋರಾ ಬರ್ಗರ್ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ಇಶಾನ್ ಮಾಲಿಂಗ 5 ರನ್ ಗಳಿಸಿ ಔಟ್ ಆದರು.

ಮಿಂಚಿದ ಆರ್ಚರ್​

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್​ 58 ರನ್​ ನೀಡಿದರೂ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ನಾಂಡ್ರೆ ಬರ್ಗರ್​ 26ಕ್ಕೆ2, ರವೀಂದ್ರ ಜಡೇಜಾ 21ಕ್ಕೆ2,   ಯಶ್ ಪೂಂಜಾ 39ಕ್ಕೆ1 ಹಾಗೂ ಸುಶಾಂತ್ ಮಿಶ್ರಾ 21ಕ್ಕೆ2 ವಿಕೆಟ್ ಪಡೆದು 47 ರನ್​​ಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸೂರ್ಯವಂಶಿ ಸಿಡಿಲಬ್ಬರ

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 243 ರನ್​​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಬಾಸ್​ ಬೇಬಿ ಖ್ಯಾತಿಯ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್​​​, 5 ಬೌಂಡರಿಗಳ ಸಹಿತ 97 ರನ್​ಗಳಿಸಿ ಭದ್ರ ಭುನಾದಿ ಹಾಕಿಕೊಟ್ಟರು. ನಂತರ ಧ್ರುವ್ ಜುರೆಲ್ 21 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ಗಳ ಸಹಿತ 50,  ರಿಯಾನ್ ಪರಾಗ್ 12 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ 26 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

SRH vs RR: ವೈಭವ್ ಅಬ್ಬರ, ಆರ್ಚರ್​ ಬಿರುಗಾಳಿ ಬೌಲಿಂಗ್​​ಗೆ ಹೈದರಾಬಾದ್​ ಧೂಳೀಪಟ! SRH ಮಣಿಸಿ ಕ್ವಾಲಿಫೈಯರ್​-2ಗೆ ಅರ್ಹತೆ ಪಡೆದ ರಾಜಸ್ಥಾನ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed