Last Updated:
ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ 196ಕ್ಕೆ ಆಲೌಟ್ ಮಾಡುವ ಮೂಲಕ ಹೀನಾಯ ಸೋಲು ಕಂಡಿತು.
ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 47 ರನ್ಗಳ ಅಂತರದಿಂದ ಸನ್ರೈಸರ್ಸ್ ಹೈದರಾಬಾದ್ ಬಗ್ಗುಬಡಿದಿದೆ. ಈ ಗೆಲುವಿನ ಮೂಲಕ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆದಿದೆ. ರಾಯಲ್ಸ್ ಶುಕ್ರವಾರ ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪ್ರವೇಶ ನಿರ್ಧರಿಸುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಆದರೆ 244 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡ 19.2 ಓವರ್ಗಳಲ್ಲಿ 196 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.
244 ರನ್ಗಳ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ಕಳಪೆ ಆರಂಭ ಪಡೆದುಕೊಂಡಿತು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಖಾತೆ ತೆರೆಯದೇ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಜುರೆಲ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಇಶಾನ್ ಕಿಶನ್ ಚೇಸಿಂಗ್ಗೆ ತಕ್ಕಂತೆ ಬ್ಯಾಟ್ ಮಾಡಿದರು. ಆದರೆ 11 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ 33 ರನ್ಗಳಿಸಿ ಆರ್ಚರ್ ಬೌಲಿಂಗ್ನಲ್ಲಿ ಫೆರೇರಾಗೆ ಕ್ಯಾಚ್ ನೀಡಿ ಔಟ್ ಆದರು. ಇಶಾನ್ ಬೆನ್ನಲ್ಲೇ ಕನ್ನಡಿಗ ಸ್ಮರಣ್ ರವಿಚಂದ್ರನ್ 4 ಎಸೆತಗಳನ್ನಾಡಿ 1 ರನ್ಗಳಿಸಿ ನಾಂಡ್ರೆ ಬರ್ಗರ್ಗೆ ವಿಕೆಟ್ ಒಪ್ಪಿಸಿದರು. 5ನೇ ಓವರ್ನಲ್ಲಿ ಆರ್ಚರ್ 8 ಎಸೆತಗಳಲ್ಲಿ 17 ರನ್ಗಳಿಸಿದ್ದ ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ರನ್ನೂ ಪೆವಿಲಿಯನ್ ಸೇರಿಸಿದರು.
ಹೈದರಾಬಾದ್ ಆಪತ್ಭಾಂದವನಾಗಿದ್ದ ಹೆನ್ರಿಕ್ ಕ್ಲಾಸೆನ್ ಇಂದು ತಂಡಕ್ಕೆ ನೆರವಾಗಲಿಲ್ಲ. 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 18 ರನ್ಗಳಿಸಿ ಕನ್ನಡಿಗ ಯಶ್ ರಾಜ್ ಪೂಂಜಾಗೆ ವಿಕೆಟ್ ಒಪ್ಪಿಸಿದರು. ಹೈದರಾಬಾದ್ ಹೀನಾಯವಾಗಿ ಸೋಲುವ ಸ್ಥಿತಿಯಲ್ಲಿತ್ತು. ಆದರೆ ನಿತೀಶ್ ಕುಮಾರ್ ರೆಡ್ಡಿ ಹಾಗೂ ಸಲೀಲ್ ಅರೋರಾ 56 ರನ್ಗಳ ಜೊತೆಯಾಟ ನಡೆಸಿ ಹೈದರಾಬಾದ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ತಂದರು. ಆದರೆ ಅನುಭವಿ ಜಡೇಜಾ ಈ ಇಬ್ಬರನ್ನ ಪೆವಿಲಿಯನ್ ಸೇರಿಸಿ ಸನ್ರೈಸರ್ಸ್ ತಂಡದ ಎಲ್ಲಾ ಭರವಸೆಯನ್ನ ನುಚ್ಚು ನೂರು ಮಾಡಿದರು. 11ನೇ ಓವರ್ನಲ್ಲಿ 20 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 38 ರನ್ಗಳಿಸಿದ್ದ ರೆಡ್ಡಿ ಶನಕಾಗೆ ಕ್ಯಾಚ್ ನೀಡಿ ಔಟ್ ಆದರು.
ಮುಂದಿನ ಓವರ್ನಲ್ಲಿ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ 2 ಎಸೆತಗಳಲ್ಲಿ 1 ರನ್ಗಳಿಸಿ ಸುಶಾಂತ್ ಮಿಶ್ರಾ ಬೌಲಿಂಗ್ನಲ್ಲಿ ಆರ್ಚರ್ಗೆ ಕ್ಯಾಚ್ ನೀಡಿದರು. 15ನೇ ಓವರ್ನಲ್ಲಿ ಜಡೇಜಾ 21 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ 35 ರನ್ಗಳಿಸಿದ್ದ ಸಲೀಲ್ ಅರೋರಾ ಬರ್ಗರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇಶಾನ್ ಮಾಲಿಂಗ 5 ರನ್ ಗಳಿಸಿ ಔಟ್ ಆದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ 58 ರನ್ ನೀಡಿದರೂ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ನಾಂಡ್ರೆ ಬರ್ಗರ್ 26ಕ್ಕೆ2, ರವೀಂದ್ರ ಜಡೇಜಾ 21ಕ್ಕೆ2, ಯಶ್ ಪೂಂಜಾ 39ಕ್ಕೆ1 ಹಾಗೂ ಸುಶಾಂತ್ ಮಿಶ್ರಾ 21ಕ್ಕೆ2 ವಿಕೆಟ್ ಪಡೆದು 47 ರನ್ಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 243 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಬಾಸ್ ಬೇಬಿ ಖ್ಯಾತಿಯ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್, 5 ಬೌಂಡರಿಗಳ ಸಹಿತ 97 ರನ್ಗಳಿಸಿ ಭದ್ರ ಭುನಾದಿ ಹಾಕಿಕೊಟ್ಟರು. ನಂತರ ಧ್ರುವ್ ಜುರೆಲ್ 21 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ಸಹಿತ 50, ರಿಯಾನ್ ಪರಾಗ್ 12 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ 26 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
May 27, 2026 11:27 PM IST
SRH vs RR: ವೈಭವ್ ಅಬ್ಬರ, ಆರ್ಚರ್ ಬಿರುಗಾಳಿ ಬೌಲಿಂಗ್ಗೆ ಹೈದರಾಬಾದ್ ಧೂಳೀಪಟ! SRH ಮಣಿಸಿ ಕ್ವಾಲಿಫೈಯರ್-2ಗೆ ಅರ್ಹತೆ ಪಡೆದ ರಾಜಸ್ಥಾನ್













