Social Service: ರಾಜಸ್ಥಾನದಿಂದ ಬಂದು ಬೆಂಗಳೂರಿನಲ್ಲಿ ಈ ಸಾಹಸ, 2,000 ಆಂಬ್ಯುಲೆನ್ಸ್ ಚಾಲಕರಿಗೆ ನೆರವಾಗುತ್ತಿರುವ ವಲಸಿಗ ಯುವಕನ ಸ್ಪೂರ್ತಿದಾಯಕ ಕಥೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಬೆಂಗಳೂರಿನಲ್ಲಿ ಟ್ರಾಫಿಕ್ ನಡುವೆ ಆಂಬ್ಯುಲೆನ್ಸ್ಗಳಿಗೆ ದಾರಿ ಮಾಡಿಕೊಡುವ ಶ್ರೀ ರಾಮ್ ಬಿಷ್ಣೋಯ್, ನೂರಾರು ಜೀವಗಳಿಗೆ ಆಶಾಕಿರಣವಾಗಿದ್ದಾರೆ. ಇವರು 2.5 ಲಕ್ಷ ರೂ. ವೆಚ್ಚದಲ್ಲಿ ಬೈಕ್ ಮಾಡಿಫೈ ಮಾಡಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರು ಆಂಬ್ಯುಲೆನ್ಸ್ ಎಸ್ಕಾರ್ಟ್ (PC: ಟೈಮ್ಸ್ ಆಫ್ ಇಂಡಿಯಾ)
ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ (Traffic) ಜಾಮ್ ಎನ್ನುವುದು ನಿತ್ಯದ ಗೋಳು. ಆದರೆ, ಇಲ್ಲೊಬ್ಬ ವ್ಯಕ್ತಿ ಅದೇ ಟ್ರಾಫಿಕ್ ನಡುವೆ ನೂರಾರು ಜೀವಗಳಿಗೆ ಆಶಾಕಿರಣವಾಗಿದ್ದಾರೆ. ರಾಜಸ್ಥಾನದಿಂದ ಬೆಂಗಳೂರಿಗೆ (Bengaluru) ಬಂದು ಸ್ಟೀಲ್ ಫ್ಯಾಬ್ರಿಕೇಶನ್ ವ್ಯವಹಾರ ನಡೆಸುತ್ತಿರುವ 31 ವರ್ಷದ ಶ್ರೀ ರಾಮ್ ಬಿಷ್ಣೋಯ್, ಇಂದು ನೂರಾರು ಆಂಬ್ಯುಲೆನ್ಸ್ (Ambulance) ಚಾಲಕರಿಗೆ ಪರಿಚಿತ ಮುಖ ಹಾಗೂ ಅಸಲಿ ಹೀರೋ ಆಗಿ ಬದಲಾಗಿದ್ದಾರೆ.
ಟ್ರಾಫಿಕ್ ವಾಲಂಟಿರ್ ನಿಂದ ರಿಯಲ್ ಲೈಫ್ ಹೀರೋ ವರೆಗೆ
ದೈನಂದಿನ ಪ್ರಯಾಣದ ವೇಳೆ ಟ್ರಾಫಿಕ್ ಪೊಲೀಸ್ ಪಡುತ್ತಿದ್ದ ಪಾಡನ್ನು ಕಣ್ಣಾರೆ ಕಂಡ ಬಿಷ್ಣೋಯ್, ತಾವೂ ಸಹಾಯ ಮಾಡಲು ಮುಂದಾದರು. 2021ರಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಜತೆ ಕೈಜೋಡಿಸಿ ಟ್ರಾಫಿಕ್ ವಾಲಂಟಿರ್ ಆದರು. ವಾರಾಂತ್ಯದಲ್ಲಿ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಸಲ್ಲಿಸುವುದರ ಜೊತೆಗೆ, ವಾರದ ದಿನಗಳ ಸಂಜೆಯನ್ನು ಸಂಪೂರ್ಣವಾಗಿ ಆಂಬ್ಯುಲೆನ್ಸ್ ಎಸ್ಕಾರ್ಟ್ ಮಾಡಲು ಮೀಸಲಿಟ್ಟಿದ್ದಾರೆ. ಮೆಖ್ರಿ ಸರ್ಕಲ್ ಮತ್ತುಟಿನ್ ಫ್ಯಾಕ್ಟರಿಯಂತಹ ಟ್ರಾಫಿಕ್ ದಟ್ಟಣೆಯ ಪ್ರದೇಶಗಳಲ್ಲಿ ನಿಂತು ಅಂಬುಲೆನ್ಸ್ಗಳಿಗೆ ದಾರಿ ಮಾಡಿಕೊಡುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಒಂದು ಫೋನ್ ಕರೆ ಸಾಕು
ಸುಮಾರು 2,000 ಆಂಬ್ಯುಲೆನ್ಸ್ ಚಾಲಕರ ವಾಟ್ಸಾಪ್ ಗ್ರೂಪ್ನಲ್ಲಿರುವ ಬಿಷ್ಣೋಯ್, ಟ್ರಾಫಿಕ್ ಸಿಲುಕಿಕೊಂಡ ಚಾಲಕರಿಗೆ ಆಪತ್ಬಾಂಧವರಾಗಿದ್ದಾರೆ. “ನಾನು ಪರ್ಸನಲ್ ಕೆಲಸದಲ್ಲಿದ್ದರೆ ಅಥವಾ ಫ್ಯಾಮಿಲಿ ಫಂಕ್ಷನ್ನಲ್ಲಿದ್ದರೂ, ಅಂಬುಲೆನ್ಸ್ ಕರೆ ಬಂದ ಕೂಡಲೇ ಎಲ್ಲವನ್ನೂ ಬಿಟ್ಟು ಓಡಿಹೋಗುತ್ತೇನೆ, ಏಕೆಂದರೆ ಇದು ಜೀವನ್ಮರಣದ ಪ್ರಶ್ನೆ” ಎಂದು ಅವರು ಹೇಳುತ್ತಾರೆ. ಟ್ರಾಫಿಕ್ ವಾರ್ಡನ್ ಆಪ್ ಹಾಗೂ ಬಿಟಿಪಿ ಕಂಟ್ರೋಲ್ ರೂಮ್ ಸಹಾಯದಿಂದ ಅತಿವೇಗದ ಮಾರ್ಗವನ್ನು ಹುಡುಕಿ ಆಸ್ಪತ್ರೆಗೆ ದಾರಿ ಮಾಡಿಕೊಡುತ್ತಾರೆ.
ಸ್ವಂತ ಖರ್ಚಿನಲ್ಲಿ ಬೈಕ್ ಮಾಡಿಫೈ
ತಮ್ಮ ಸೇವೆಯನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿರುವ ಬಿಷ್ಣೋಯ್, ಪ್ರಾದೇಶಿಕ ಸಾರಿಗೆ ಕಚೇರಿಯಿಂದ ವಿಶೇಷ ಅನುಮತಿ ಪಡೆದು, ಬರೋಬ್ಬರಿ ರೂ. 2.5 ಲಕ್ಷ ವೆಚ್ಚದಲ್ಲಿ ಮೋಟಾರ್ ಸೈಕಲ್ ಖರೀದಿಸಿ ಅದಕ್ಕೆ ತುರ್ತು ದೀಪಗಳು ಮತ್ತು ಸೈರನ್ ಅಳವಡಿಸಿಕೊಂಡಿದ್ದಾರೆ. ಅಲ್ಲದೆ, ಸಿಪಿಆರ್ ಮತ್ತು ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಲು ಸಜ್ಜಾಗಿದ್ದಾರೆ.