Last Updated:
ರಾಮಾಯಣ ಟ್ರೇಲರ್ ಬಿಡುಗಡೆಯಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಹನುಮಂತನ ಪಾತ್ರದ ಬಗ್ಗೆ ಚರ್ಚೆ ಆರಂಭವಾಗಿದೆ. ಚಿತ್ರದಲ್ಲಿ ಹನುಮಂತನ ಪಾತ್ರವನ್ನು ಸನ್ನಿ ಡಿಯೋಲ್ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಮೊದಲೇ ಹೊರಬಿದ್ದಿದ್ದರೂ, ಟ್ರೇಲರ್‌ನಲ್ಲಿ ಅವರ ಒಂದು ಝಲಕ್ ಕೂಡ ಕಾಣಿಸದಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಬಹುನಿರೀಕ್ಷಿತ ರಾಮಾಯಣ: ಭಾಗ 1 (Ramayana: Part 1) ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಸಂಚಲನ ಮೂಡಿಸಿದೆ. ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಶ್ರೀರಾಮನಾಗಿ, ರಾಕಿಂಗ್ ಸ್ಟಾರ್ ಯಶ್ (Rocking Star Yash) ರಾವಣನಾಗಿ ಹಾಗೂ ಸಾಯಿ ಪಲ್ಲವಿ (Sai Pallavi) ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನ ದೃಶ್ಯ ವೈಭವ, ಹಿನ್ನೆಲೆ ಸಂಗೀತ ಮತ್ತು ಅದ್ಭುತ ಗ್ರಾಫಿಕ್ಸ್‌ಗೆ ಸಿನಿಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಎಲ್ಲದರ ನಡುವೆ ಒಂದು ಪ್ರಶ್ನೆ ಮಾತ್ರ ಅಭಿಮಾನಿಗಳನ್ನು ಕಾಡುತ್ತಿದೆ. ಅದು ಹನುಮಂತನ ಪಾತ್ರ ಟ್ರೇಲರ್‌ನಲ್ಲಿ ಯಾಕೆ ಕಾಣಿಸಲಿಲ್ಲ ಎಂಬುದು.
ಟ್ರೇಲರ್‌ನಲ್ಲಿ ರಾವಣನಾಗಿ ಯಶ್ ಪ್ರಭಾವಿ ಎಂಟ್ರಿ ಹಾಗೂ ಶ್ರೀರಾಮನಾಗಿ ರಣಬೀರ್ ಕಪೂರ್ ಭಾವಪೂರ್ಣ ಅಭಿನಯ ಎಲ್ಲರ ಗಮನ ಸೆಳೆದಿದೆ. ಕೆಲವೇ ಕ್ಷಣಗಳ ಪರದೆ ಹಾಜರಾತಿಯಲ್ಲೇ ಯಶ್ ತಮ್ಮ ರೌದ್ರ ರೂಪದಿಂದ ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದ್ದರೆ, ರಣಬೀರ್ ಕಪೂರ್ ಅವರ ಶಾಂತ ಮತ್ತು ಗಂಭೀರ ವ್ಯಕ್ತಿತ್ವ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಸಾಯಿ ಪಲ್ಲವಿ ಸೀತೆಯ ಪಾತ್ರವೂ ಭಾವನಾತ್ಮಕವಾಗಿ ಮೂಡಿಬಂದಿದೆ.
ಟ್ರೇಲರ್ ಬಿಡುಗಡೆಯಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಹನುಮಂತನ ಪಾತ್ರದ ಬಗ್ಗೆ ಚರ್ಚೆ ಆರಂಭವಾಗಿದೆ. ಚಿತ್ರದಲ್ಲಿ ಹನುಮಂತನ ಪಾತ್ರವನ್ನು ಸನ್ನಿ ಡಿಯೋಲ್ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಮೊದಲೇ ಹೊರಬಿದ್ದಿದ್ದರೂ, ಟ್ರೇಲರ್‌ನಲ್ಲಿ ಅವರ ಒಂದು ಝಲಕ್ ಕೂಡ ಕಾಣಿಸದಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವರು, ನಿರ್ಮಾಪಕರು ಉದ್ದೇಶಪೂರ್ವಕವಾಗಿಯೇ ಹನುಮಂತನ ಪಾತ್ರವನ್ನು ರಹಸ್ಯವಾಗಿಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಪ್ರಚಾರದ ಮುಂದಿನ ಹಂತದಲ್ಲಿ ಅಥವಾ ಸಿನಿಮಾ ಬಿಡುಗಡೆಯ ಸಮಯದಲ್ಲಿ ಸನ್ನಿ ಡಿಯೋಲ್ ಅವರ ಸಂಪೂರ್ಣ ಲುಕ್ ಅನಾವರಣಗೊಳ್ಳಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.
ಕೆಲವರು, ಸನ್ನಿ ಡಿಯೋಲ್ ಅವರನ್ನು ಹನುಮಂತನಾಗಿ ನೋಡುವ ನಿರೀಕ್ಷೆಯಿತ್ತು. ಆದರೆ ಟ್ರೇಲರ್‌ನಲ್ಲಿ ಅವರನ್ನು ಎಲ್ಲಿಯೂ ತೋರಿಸಲಿಲ್ಲ ಎಂದು ಬರೆದಿದ್ದಾರೆ. ಇನ್ನೂ ಕೆಲವರು, ವಾನರ ಸೇನೆಯ ಯಾವುದೇ ದೃಶ್ಯವೂ ಟ್ರೇಲರ್‌ನಲ್ಲಿ ಇಲ್ಲ. ಬಹುಶಃ ಈ ಪಾತ್ರದ ಪರಿಚಯವನ್ನು ಮುಂದಿನ ಭಾಗಕ್ಕೆ ಉಳಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ರೇಲರ್‌ಗೆ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಯ ನಡುವೆ ಹನುಮಂತನ ಪಾತ್ರದ ಅನುಪಸ್ಥಿತಿ ಮತ್ತಷ್ಟು ಕುತೂಹಲ ಮೂಡಿಸಿದೆ. ಸನ್ನಿ ಡಿಯೋಲ್ ಅವರ ಲುಕ್ ಹೇಗಿರಬಹುದು ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ರಹಸ್ಯಕ್ಕೆ ಉತ್ತರ ಸಿನಿಮಾ ಬಿಡುಗಡೆಯ ವೇಳೆ ಸಿಗಲಿದೆಯೇ ಅಥವಾ ಮುಂದಿನ ಪ್ರಚಾರ ಸಾಮಗ್ರಿಗಳಲ್ಲೇ ಬಹಿರಂಗವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Bangalore [Bangalore],Bangalore,Karnataka














