Last Updated:
ಶಕಗಳಿಂದ ಹಾವುಗಳನ್ನು ರಕ್ಷಿಸಿ ಬನ್ನೇರುಘಟ್ಟ ಉದ್ಯಾನವನದಲ್ಲಿ ಬಿಡುತ್ತಿದ್ದ ಬೆಂಗಳೂರು ಹಾವು ರಕ್ಷಕ ಎಂಡಿ ಅನೀಸ್ ನಿಧನ, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಚ್ಚು ಖ್ಯಾತಿ ಪಡೆದಿದ್ದ ಉರುಗ ರಕ್ಷಕ ಎಂಡಿ ಅನೀಸ್ (Snake Rescuer) ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 12 ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅನೀಸ್ ಅವರು ಆಸ್ಪತ್ರೆಗೆ (Hospital) ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ನಿನ್ನೆ ನಿಧನರಾಗಿದ್ದಾರೆ ಎಂದು ಇಂಡಿಯನ್ಸ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಅನೀಸ್ ಅವರ ಬಗ್ಗೆ ಮಾತನಾಡಿರುವ ಅವರ ಸ್ನೇಹಿತರ ಶಕೀಲ್, ಕೇವಲ 17 ವರ್ಷದ ಹುಡುಗನಾಗಿದ್ದ ಅನ್ನೀಸ್ ಮೊದಲ ಬಾರಿಗೆ ಹಾವನ್ನು ರಕ್ಷಣೆ ಮಾಡಿದ್ದರು. ಇನ್ನು ಅದರ ನೆನಪು ನನ್ನ ಮನಸ್ಸಿನಲ್ಲಿ ಉಳಿದುಕೊಂಡಿದೆ. ಆ ದಿನದಿಂದ ಸುಮಾರು ದಶಕಗಳ ಕಾಲ ಈ ಕಾರ್ಯ ಮಾಡಿದ್ದಾರೆ. ಕೊನೆಯ ಬಾರಿಗೆ ಅವರು ನಾಲ್ಕು ವರ್ಷಗಳ ಹಿಂದೆ ಹಾವನ್ನು ರಕ್ಷಣೆ ಮಾಡಿದ್ದರು. ಆ ಸಂದರ್ಭದಲ್ಲಿಯೂ ಅವರೊಂದಿಗೆ ಇದ್ದ ನೆನಪು ಕಾಡುತ್ತಿದೆ. ಅನೀಸ್ ಅವರು ರಕ್ಷಣೆ ಮಾಡುತ್ತಿದ್ದ ಹಾವುಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಹಾವುಗಳನ್ನು ರಕ್ಷಣೆ ಮಾಡುತ್ತಿದ್ದ ಹಲವು ಸಂದರ್ಭದಲ್ಲಿ ಅವರಿಗೆ ಹಾವು ಕಚ್ಚಿತ್ತು. ಆದರೆ ಸವಾಲಿನ ಸಂದರ್ಭದಲ್ಲೂ ಅವರು ತಾಳ್ಮೆ ಹಾಗೂ ಧೈರ್ಯವನ್ನು ಕಳೆದುಕೊಳ್ಳದೆ ಕೆಲಸ ಮಾಡಿದ್ದರು. ಹಲವು ಬಾರಿ ಸಾವಿನ ಸಮೀಪ ಹೋಗಿ ಬದುಕುಳಿದಿದ್ದರು ಎಂದು ಅವರ ಸ್ನೇಹಿತರ ಹೇಳಿದ್ದಾರೆ.
ಅನೀಸ್ ಅವರಿಗೆ ಹಾವುಗಳ ಬಗ್ಗೆ ಅಪಾರ ಗೌರವ ಇತ್ತು. ಅವುಗಳ ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಗಳಲ್ಲಿ ಬಿಡುಗಡೆ ಮಾಡಲು ಸಾಕಷ್ಟು ಶ್ರಮ ಹಾಕುತ್ತಿದ್ದರು. ನನ್ನ ತಂದೆಗೆ 17ನೇ ವಯಸ್ಸು ಇರುವಾಗ ಹಾವುಗಳ ರಕ್ಷಣೆ ಆರಂಭ ಮಾಡಿದ್ದರಂತೆ, ಮೊದ ಮೊದಲು ತೋಟದ ಮನೆಗಳಿಗೆ ಹಾವುಗಳು ಬಂದಾಗ ಅವುಗಳನ್ನು ರಕ್ಷಣೆ ಮಾಡುತ್ತಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ಗೆ ಅವರ ಮಗ ಶೋಯೆಬ್ ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಮೃತರು ಪತ್ನಿ ತೈಬಾ ಹಾಗೂ ಮಕ್ಕಳಾದ ಶೋಯೆಬ್ ಮತ್ತು ಸಿಮ್ರಾ ಅವರನ್ನು ಆಗಲಿದ್ದಾರೆ.
Chennai [Madras],Chennai,Tamil Nadu
Jul 01, 2026 11:12 AM IST













