Last Updated:
ಅಫ್ಘಾನಿಸ್ತಾನದ ವೇಗದ ಬೌಲರ್ ಶಹಪೂರ್ ಜದ್ರಾನ್ ಅಪರೂಪದ ಕಾಯಿಲೆಯಿಂದ ನಿಧನರಾಗಿದ್ದಾರೆ. ಈ ಕಾಯಿಲೆ ಏನು? ಅದಕ್ಕೆ ಕಾರಣಗಳೇನು? ಸೋಂಕು ತಗುಲಿದರೆ ಯಾವ ಲಕ್ಷಣಗಳು ಕಾಣಿಸುತ್ತವೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿ.
ಅಫ್ಘಾನಿಸ್ತಾನ(Afghanistan)ದ ಮಾಜಿ ವೇಗದ ಬೌಲರ್ ಶಹಪೂರ್ ಜದ್ರಾನ್ (Shahpoor Zadran) ಅವರು ಬುಧವಾರ ನಿಧನರಾದರು. ‘ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅಪರೂಪದ ಮತ್ತು ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಅವರು 38 ವರ್ಷದ ವಯಸ್ಸಿನಲ್ಲಿ ಸಾವಿಗೀಡಾದರು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡರಳಿ (ACB) ಶಹಪೂರ್ ಜದ್ರಾನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿತ್ತು. ಶಹಪೂರ್ ಅಫ್ಘಾನ್ ಕ್ರಿಕೆಟ್(Cricket)ಗೆ ಅಡಿಪಾಯ ಹಾಕಿದವರಲ್ಲಿ ಒಬ್ಬರು. ಅವರ ಸಮರ್ಪಣೆ ಮತ್ತು ಪರಿಶ್ರಮವು ದೇಶದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿತ್ತು. ಆದರೆ, ಶಹಪೂರ್ ಜದ್ರಾನ್ ಚಿಕ್ಕ ವಯಸ್ಸಿನಲ್ಲಿಯೇ ಮಾರಕ ಕಾಯಿಲೆಯಿಂದ ಸಾವನ್ನಪ್ಪಿದರು.
ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಹೆಮಟಾಲಜಿ ಡಾ. ಅನೂಪ್ ಪಿ ಅವರು ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH) ಕಾಯಿಲೆಯ ಲಕ್ಷಣಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ವರದಿ ಪ್ರಕಾರ, ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH) ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಅಪರೂಪದ ಮತ್ತು ಬಹಳ ಗಂಭೀರ ಕಾಯಿಲೆಯಾಗಿದೆ.
ಸಾಮಾನ್ಯವಾಗಿ ನಮ್ಮ ರೋಗನಿರೋಧಕ ಶಕ್ತಿ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಆದರೆ ಈ ಕಾಯಿಲೆ ಬಂದಾಗ ರೋಗನಿರೋಧಕ ವ್ಯವಸ್ಥೆ ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಇದು ಸೋಂಕನ್ನು ತಡೆಯುವ ಬದಲು ಆರೋಗ್ಯಕರ ಅಂಗಾಂಶಗಳು ಮತ್ತು ಅಂಗಗಳ ಮೇಲೇ ದಾಳಿ ಮಾಡುತ್ತದೆ.
ಈ ಕಾಯಿಲೆ ದೇಹದಲ್ಲಿ ತೀವ್ರ ಉರಿಯೂತವನ್ನು ಉಂಟುಮಾಡುತ್ತದೆ. ಯಕೃತ್ತು, ಗುಲ್ಮ, ಮೂಳೆ ಮಜ್ಜೆ, ಮೆದುಳು ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಹಾನಿ ಮಾಡುತ್ತದೆ. ಇದು ಮಕ್ಕಳು ಮತ್ತು ದೊಡ್ಡವರಿಬ್ಬರಿಗೂ ಬರಬಹುದು. ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಉಳಿಯುವ ಸಾಧ್ಯತೆ ಹೆಚ್ಚು. ನಿರ್ಲಕ್ಷಿಸಿದರೆ ಅದು ಮಾರಕವಾಗಬಹುದು ಎಂದು ಡಾ. ಅನೂಪ್ ಪಿ ಅವರು ಹೇಳಿದ್ದಾರೆ.
ಕ್ಲೀವ್‌ಲ್ಯಾಂಡ್ ಕ್ಲಿನಿಕ್ ವರದಿಯ ಪ್ರಕಾರ ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH) ಕಾಯಿಲೆ ಮುಖ್ಯವಾಗಿ ಎರಡು ವಿಧವಾಗಿದೆ. ಪ್ರಾಥಮಿಕ (ಆನುವಂಶಿಕ) HLH: ಇದು ಪೋಷಕರಿಂದ ಮಕ್ಕಳಿಗೆ ಹರಡುವ ಆನುವಂಶಿಕ ದೋಷಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಬಾಲ್ಯದಲ್ಲೇ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಲ್ಲಿ ನಂತರದ ವಯಸ್ಸಿನಲ್ಲೂ ಬರಬಹುದು. ದ್ವಿತೀಯ HLH ಕೆಲವು ಸಮಸ್ಯೆಗಳಿಂದ ಉಂಟಾಗುತ್ತದೆ. ಇದು ರೋಗನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವ ಇತರ ವೈದ್ಯಕೀಯ ಸಮಸ್ಯೆಗಳಿಂದ ಬರುಬಹುದು ಎಂದು ಡಾ. ಅನೂಪ್ ಪಿ ಅವರು ತಿಳಿಸಿದ್ದಾರೆ.
ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH) ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದು ಕಷ್ಟ. ಏಕೆಂದರೆ ಇದರ ಲಕ್ಷಣಗಳು ಸಾಮಾನ್ಯವಾದ ಗಂಭೀರ ಸೋಂಕುಗಳಂತೆಯೇ ಇರುತ್ತವೆ. ಆ ಲಕ್ಷಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
- ತೀವ್ರ ಜ್ವರವು ಕಡಿಮೆಯಾಗದಿರುವುದು.
- ಅತ್ಯಂತ ಆಯಾಸ ಮತ್ತು ಆಲಸ್ಯ.
- ಯಕೃತ್ತು ಮತ್ತು ಗುಲ್ಮ ಊದಿಕೊಳ್ಳುವುದು ಅಥವಾ ಹಿಗ್ಗುವುದು.
- ಕುತ್ತಿಗೆ ಮತ್ತು ಕಂಕುಳಲ್ಲಿ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು.
- ಚರ್ಮದ ಮೇಲೆ ದದ್ದುಗಳು.
- ಚರ್ಮದ ಮೇಲೆ ಕಪ್ಪು ಕಲೆಗಳು ಅಥವಾ ಸಣ್ಣ ಗಾಯಗಳಿಂದ ಸುಲಭವಾಗಿ ರಕ್ತಸ್ರಾವ.
- ರಕ್ತಹೀನತೆಯಿಂದ ಚರ್ಮ ಮಸುಕಾಗುವುದು.
- ರಕ್ತದಲ್ಲಿನ ಜೀವಕೋಶಗಳ ಸಂಖ್ಯೆ ಕಡಿಮೆಯಾಗುವುದು.
- ಚರ್ಮ ಮತ್ತು ಕಣ್ಣುಗಳು ಹಸಿರು ಬಣ್ಣಕ್ಕೆ ತಿರುಗುವುದು.
- ತೀವ್ರ ಪ್ರಕರಣಗಳಲ್ಲಿ ಗೊಂದಲ, ಮನಸ್ಸು ಕಳೆದುಕೊಳ್ಳುವುದು ಅಥವಾ ಇತರ ನರ ಸಂಬಂಧಿ ಸಮಸ್ಯೆಗಳು.
ಆನುವಂಶಿಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ, ಆನುವಂಶಿಕ ಸಮಾಲೋಚನೆಯ ಮೂಲಕ ಅಪಾಯವನ್ನು ಮುಂಚಿತವಾಗಿ ಗುರುತಿಸಬಹುದು. ದ್ವಿತೀಯ HLH ಅನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದಿದ್ದರೂ, ಆರಂಭದಲ್ಲೇ ಸೋಂಕುಗಳು, ಸ್ವಯಂ ನಿರೋಧಕ ಕಾಯಿಲೆಗಳು ಅಥವಾ ಕ್ಯಾನ್ಸರ್ ಅನ್ನು ಗುರುತಿಸಿ ಚಿಕಿತ್ಸೆ ನೀಡುವುದರಿಂದ ಈ ಮಾರಕ ಸಮಸ್ಯೆಯ ಅಪಾಯವನ್ನು ಬಹಳ ಕಡಿಮೆ ಮಾಡಬಹುದು ಎಂದು ಡಾ. ಅನೂಪ್ ಪಿ ಅವರು ಸಲಹೆ ನೀಡಿದ್ದಾರೆ.













