Last Updated:
ನಟ ದಿಲ್ಜಿತ್ ದೋಸಾಂಜ್ ಅವರ ‘ಸತ್ಲುಜ್’ ಚಿತ್ರದ ಪ್ರಸಾರ ಸ್ಥಗಿತಗೊಂಡ ಬೆನ್ನಲ್ಲೇ ದಿಲ್ಜಿತ್ ದೋಸಾಂಜ್ ಇನ್‌ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ.
ಖ್ಯಾತ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ನಟಿಸಿರುವ ಸತ್ಲುಜ್ (Satluj) ಚಿತ್ರವು ಝೀ5ನಲ್ಲಿ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲೇ ಭಾರತದಲ್ಲಿ ಒಟಿಟಿಯಿಂದ ದಿಢೀರ್ ಡಿಲೀಟ್ ಆಗಿದೆ. ಈ ಬೆಳವಣಿಗೆಯ ಬಳಿಕ ನಟ ದಿಲ್ಜಿತ್ ದೋಸಾಂಜ್ ಲೈವ್ ಬಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹನಿ ಟ್ರೆಹನ್ ನಿರ್ದೇಶನದ ಸತ್ಲುಜ್ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ದಿಲ್ಜಿತ್ ದೋಸಾಂಜ್ ಅಭಿನಯದ ಈ ಚಿತ್ರ ಸಿನಿಪ್ರಿಯರಲ್ಲಿ ಆಸಕ್ತಿ ಹೆಚ್ಚಿಸಿತ್ತು. ಆದರೆ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಝೀ5 ಭಾರತದಲ್ಲಿ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿರುವುದು ಚಿತ್ರರಂಗದಲ್ಲೂ ಚರ್ಚೆಗೆ ಕಾರಣವಾಗಿದೆ. ಚಿತ್ರವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕಿರುವ ಕುರಿತು ಅಧಿಕೃತ ಮಟ್ಟದಲ್ಲಿ ಹಲವು ಪ್ರಶ್ನೆಗಳು ಕೇಳುಬಂದಿತ್ತು.
ಚಿತ್ರದ ಪ್ರಸಾರ ಸ್ಥಗಿತಗೊಂಡ ಬೆನ್ನಲ್ಲೇ ದಿಲ್ಜಿತ್ ದೋಸಾಂಜ್ ಇನ್‌ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಲೈವ್ ವೇಳೆ ಅಭಿಮಾನಿಗಳು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಮೇಲಿನ ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ದಿಲ್ಜಿತ್, ಸಿನಿಮಾ ಹೆಚ್ಚಿನ ಜನರನ್ನು ತಲುಪಿರುವುದೇ ತಮ್ಮ ತಂಡಕ್ಕೆ ದೊಡ್ಡ ಸಂತೋಷ ಎಂದು ಹೇಳಿದರು. ಚಿತ್ರವನ್ನು ವೀಕ್ಷಿಸಿದ ಎಲ್ಲರಿಗೂ ಅವರು ಧನ್ಯವಾದಗಳನ್ನು ತಿಳಿಸಿದರು.
ಇದೇ ವೇಳೆ ಪಂಜಾಬಿಯಲ್ಲಿ ಮಾತನಾಡಿದ ದಿಲ್ಜಿತ್ ದೋಸಾಂಜ್, ಒಮ್ಮೆ ಯಾವುದೇ ವಿಷಯ ಆನ್‌ಲೈನ್‌ನಲ್ಲಿ ರಿಲೀಸ್ ಆದ ಬಳಿಕ ಅದನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವುದು ಸುಲಭವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ರಾಜಸ್ಥಾನದ ಹಳ್ಳಿಯೊಂದರಲ್ಲಿ ಹಾಗೂ ಗುರುದ್ವಾರದ ಒಳಗೆ ಜನರು ಸಿನಿಮಾ ವೀಕ್ಷಿಸುತ್ತಿರುವ ವಿಡಿಯೊಗಳನ್ನು ನೋಡಿರುವುದಾಗಿ ಹೇಳಿದ ಅವರು, ತಮ್ಮ ಶ್ರಮ ಹೆಚ್ಚಿನ ಜನರನ್ನು ತಲುಪಿರುವುದು ತಮಗೆ ತೃಪ್ತಿ ತಂದಿದೆ ಎಂದು ತಿಳಿಸಿದರು.
ಸತ್ಲುಜ್ ಚಿತ್ರದ ಬಿಡುಗಡೆ ಸುಲಭವಾಗಿರಲಿಲ್ಲ ಎಂದು ದಿಲ್ಜಿತ್ ತಮ್ಮ ಅನುಭವವನ್ನು ಹಂಚಿಕೊಂಡರು. ಕಳೆದ ಮೂರುರಿಂದ ನಾಲ್ಕು ವರ್ಷಗಳ ಕಾಲ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ತಮ್ಮ ತಂಡ ನಿರಂತರ ಪ್ರಯತ್ನ ನಡೆಸಿದೆ ಎಂದು ತಿಳಿಸಿದರು. ಈ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ ಎಂದು ಹೇಳಿದರು. ಜೊತೆಗೆ ಈಗಾಗಲೇ ಸಿನಿಮಾ ಡೌನ್‌ಲೋಡ್ ಮಾಡಿಕೊಂಡಿರುವವರು ಅದನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ದಿಲ್ಜಿತ್ ಮನವಿ ಮಾಡಿದ್ದಾರೆ.
ಚಿತ್ರದ ಬಿಡುಗಡೆಯ ಹಾದಿಯಲ್ಲಿ ಎದುರಾದ ಸವಾಲುಗಳನ್ನು ನೆನಪಿಸಿಕೊಂಡ ದಿಲ್ಜಿತ್, ಪಂಜಾಬಿ ಚಿತ್ರರಂಗ ಅಥವಾ ಬಾಲಿವುಡ್‌ನಿಂದ ವಿಶೇಷ ಬೆಂಬಲವನ್ನು ಕೇಳದೆ ತಮ್ಮ ತಂಡವೇ ಎಲ್ಲ ಅಡೆತಡೆಗಳನ್ನು ಎದುರಿಸಿದೆ ಎಂದು ಹೇಳಿದರು. ಪ್ರತಿಯೊಬ್ಬರ ಜೀವನದಲ್ಲೂ ತಮ್ಮದೇ ಆದ ಹೋರಾಟ ಇರುತ್ತದೆ. ಅದೇ ರೀತಿಯಲ್ಲಿ ಈ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದು ನಮ್ಮ ತಂಡದ ದೊಡ್ಡ ಸವಾಲಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಸತ್ಲುಜ್ ಸಿನಿಮಾ ಝೀ5ನಿಂದ ತೆರವುಗೊಂಡಿರುವ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಿತ್ರದ ಭವಿಷ್ಯ ಏನಾಗಲಿದೆ, ಮತ್ತೆ ಒಟಿಟಿ ವೇದಿಕೆಗೆ ಮರಳುತ್ತದೆಯೇ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಈ ಕುರಿತು ಅಧಿಕೃತ ಸ್ಪಷ್ಟನೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.
Bangalore [Bangalore],Bangalore,Karnataka
Jul 06, 2026 10:11 PM IST













