Last Updated:
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲ್ಎಸ್ಜಿ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡ 220 ರನ್ ಗಳಿಸಿತ್ತು. ಈ ಬೃಹತ್ ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಆರ್ 19.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ IPL 2026ರಲ್ಲಿ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ (RR vs LSG) ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ (Playoff) ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲ್ಎಸ್ಜಿ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡ 220 ರನ್ ಗಳಿಸಿತ್ತು. ಈ ಬೃಹತ್ ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಆರ್ 19.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್ಗಳ ಸಹಿತ 93 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಧ್ರುವ್ ಜುರೆಲ್ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ರೇಸ್ನಲ್ಲಿ ಇನ್ನೂ ಉಳಿದುಕೊಂಡಿದೆ.
221 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆರಂಭ ಪಡೆದುಕೊಂಡಿತು. ನಾಯಕ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್ ಜೊತೆಯಾಟದಲ್ಲಿ 6.3 ಓವರ್ಗಳಲ್ಲಿ 75 ರನ್ ಸೇರಿಸಿದರು. ಜೈಸ್ವಾಲ್ 23 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 43 ರನ್ಗಳಿಸಿ ಆಕಾಶ್ ಸಿಂಗ್ ಬೌಲಿಂಗ್ನಲ್ಲಿ ರಿಷಭ್ ಪಂತ್ಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಬಂದ ಧ್ರುವ್ ಜುರೆಲ್ 2ನೇ ವಿಕೆಟ್ ಜೊತೆಯಾಟದಲ್ಲಿ ಸೂರ್ಯವಂಶಿ ಜೊತೆಗೂಡಿ ಕೇವಲ 45 ಎಸೆತಗಳಲ್ಲಿ 105 ರನ್ ಸೇರಿಸಿದರು. ಎಂದಿನಂತೆ ತಮ್ಮ ವಿಧ್ವಂಸಕ ಆಟವಾಡಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳ ಸಹಿತ 93 ರನ್ಗಳಿಸಿ ಶತಕಕ್ಕೆ 7 ರನ್ಗಳಿರುವಾಗ ಔಟ್ ಆದರು. ಮೊಹ್ಶಿನ್ ಖಾನ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಅಬ್ಧುಲ್ ಸಮದ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ ವೈಭವ್ ಅಷ್ಟರಲ್ಲಾಗಲೇ ಪಂದ್ಯವನ್ನ ಸಂಪೂರ್ಣವಾಗಿ ರಾಜಸ್ಥಾನ್ ರಾಯಲ್ಸ್ ಕಡೆಗೆ ವಾಲಿಸಿದ್ದರು.
ಸೂರ್ಯವಂಶಿ ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ರಾಯಲ್ಸ್ 6 ಓವರ್ಗಳಲ್ಲಿ ಕೇವಲ 30 ರನ್ಗಳ ಅವಶ್ಯಕತೆ ಇತ್ತು. 4ನೇ ಕ್ರಮಾಂಕದಲ್ಲಿ ಬಂದ ಲುವಾನ್ ಡಿ ಪ್ರಿಟೋರಿಯಸ್ 7 ರನ್ಗಳಿಸಿ ರನ್ಔಟ್ ಆದರು. ಆದರೆ ಧ್ರುವ್ ಜುರೆಲ್ ಹಾಗೂ ಡೊನೊವನ್ ಫೆರೇರಾ ಮುರಿಯದ 4ನೇ ವಿಕೆಟ್ ಜೊತೆಯಾಟದಲ್ಲಿ 29 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಧ್ರುವ್ ಜುರೆಲ್ 38 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 53 ರನ್ಗಳಿಸಿದರೆ, ಫೆರೇರಾ 10 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ ಅಜೇಯ 16 ರನ್ಗಳಿಸಿದರು.
ಲಖನೌ ಸೂಪರ್ ಜೈಂಟ್ಸ್ ಪರ ಅಕಾಶ್ ಸಿಂಗ್ 54ಕ್ಕೆ1, ಮೊಹ್ಶಿನ್ ಖಾನ್ 31ಕ್ಕೆ1 ವಿಕೆಟ್ ಪಡೆದರು. ವೈಭವ್ ಅಬ್ಬರದಕ್ಕೆ ಸಿಲುಕಿದ ಲಖನೌ ಬೌಲರ್ಗಳು ದುಬಾರಿಯಾದರು.
ಈ ರೋಚಕ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ 7ನೇ ಗೆಲುವು ಸಾಧಿಸಿತು. 13 ಪಂದ್ಯಗಳನ್ನಾಡಿರುವ ರಾಯಲ್ಸ್ 6 ರಲ್ಲಿ ಸೋಲು ಕಂಡು, 14 ಅಂಕಗಳಿಸಿದೆ. ತನ್ನ ಕೊನೆಯ ಪಂದ್ಯವನ್ನ ಭಾನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಆ ಪಂದ್ಯವನ್ನ ಗೆದ್ದರೆ ರಾಜಸ್ಥಾನ್ ರಾಯಲ್ಸ್ ನೇರವಾಗಿ, ಯಾವುದೇ ತಂಡದ ಫಲಿತಾಂಶ ಲೆಕ್ಕಿಸದೇ ಪ್ಲೇ ಆಫ್ ಪ್ರವೇಶಿಸಲಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ಭರ್ಜರಿ ಬ್ಯಾಟಿಂಗ್ ಮಾಡಿ 220 ರನ್ಗಳಿಸಿತ್ತು. ಮಿಚೆಲ್ ಮಾರ್ಷ್ ಮತ್ತೊಮ್ಮೆ ಅಬ್ಬರ ಬ್ಯಾಟಿಂಗ್ ಮಾಡಿದರು. 57 ಎಸೆತಗಳಲ್ಲಿ 11 ಬೌಂಡರಿ, 5ಸಿಕ್ಸರ್ಗಳ ಸಹಿತ 96 ರನ್ಗಳಿಸಿ ಬೃಹತ್ ಮೊತ್ತಕ್ಕೆ ನೆರವಾಗಿದ್ದರು. ಜೋಸ್ ಇಂಗ್ಲಿಸ್ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 60, ರಿಷಭ್ ಪಂತ್ 23 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ಸಹಿತ 35 ರನ್ಗಳಿಸಿದ್ದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ 39ಕ್ಕೆ1, ಯಶ್ ಪೂಂಜಾ 35ಕ್ಕೆ2 ವಿಕೆಟ್ ಪಡೆದಿದ್ದರು.
May 19, 2026 11:25 PM IST
















