Last Updated:
ಎರಡೂವರೆ ವರ್ಷದ ಮಗು ಅಪಘಾತದಲ್ಲಿ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದೆ. ಪೊಲೀಸರು ಮೃತರ ಶವಗಳನ್ನು ಉಪ-ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ ಮತ್ತು ಹತ್ತಿರದ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಮೃದುಲ್ ಕಚ್ವಾ ಹೇಳಿದರು.
ಬಿಕಾನೆರ್: ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಶ್ರೀದುಂಗರ್ಗಢದ ಹೇಮಸರ್ ಫಾಟಕ್ ಬಳಿ ಸೋಮವಾರ ಕಾರು ಮತ್ತು ಡಂಪರ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ (Road Accident) ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.
ಮೃತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎರಡೂವರೆ ವರ್ಷದ ಬಾಲಕ ಈ ಅಪಘಾತದಿಂದ ಬದುಕುಳಿದಿದ್ದಾನೆ. ಮೃತರು ಹರಿಯಾಣದ ಫತೇಹಾಬಾದ್ ಪ್ರದೇಶದ ನಿವಾಸಿಗಳು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಬಿ.ಎಲ್. ಮೀನಾ ತಿಳಿಸಿದ್ದಾರೆ.
‘ಮೃತರು ಓಂ ಪ್ರಕಾಶ್ ಬಿಷ್ಣೋಯ್ ಅವರ ಕುಟುಂಬ ಸದಸ್ಯರು. ಬಿಕಾನೆರ್ ಜಿಲ್ಲೆಯ ಮುಕಾಮ್ನಲ್ಲಿರುವ ಬಿಷ್ಣೋಯ್ ಸಮುದಾಯದ ಪೂಜ್ಯ ಗುರು ಗುರು ಜಂಭೇಶ್ವರ ಭಗವಾನ್ ಅವರ ಸಮಾಧಿಗೆ ಭೇಟಿ ನೀಡಿ ಹಿಂತಿರುಗುತ್ತಿದ್ದರು. ಮೃತರಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಮೂವರು ಮಕ್ಕಳು ಸೇರಿದ್ದಾರೆ’ ಎಂದು ಬಿ.ಎಲ್. ಮೀನಾ ಅವರು ಹೇಳಿದರು.
ಬಿಕಾನೆರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚ್ವಾ ಈ ಘಟನೆಯನ್ನು ಅತ್ಯಂತ ದುರಂತ ಎಂದು ಬಣ್ಣಿಸಿದ್ದು, ಕಾರಿನ ಚಾಲಕ ನಿದ್ರೆ ಮಂಪರಿನಲ್ಲಿ ಇದ್ದಾಗ ಈ ಘಟನೆ ನಡೆದಿರಬಹುದೆಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ ಎಂದು ಹೇಳಿದ್ದಾರೆ. ‘ಆದರೆ, ಅಪಘಾತದ ನಿಜವಾದ ಕಾರಣವನ್ನು ನಿರ್ಧರಿಸಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ’ ಎಂದು ಅವರು ಹೇಳಿದರು.
ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಆಡಳಿತ ಮಂಡಳಿ ಮತ್ತು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು. ಗಾಯಾಳುಗಳನ್ನು ತಕ್ಷಣ ಶ್ರೀದುಂಗರ್ಗಢ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಎರಡೂವರೆ ವರ್ಷದ ಮಗು ಅಪಘಾತದಲ್ಲಿ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದೆ. ಪೊಲೀಸರು ಮೃತರ ಶವಗಳನ್ನು ಉಪ-ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ ಮತ್ತು ಹತ್ತಿರದ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಮೃದುಲ್ ಕಚ್ವಾ ಹೇಳಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು. ಮೇ ತಿಂಗಳಲ್ಲಿ ಬಿಕಾನೇರ್ನ ನೋಖಾ ಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, 13 ಜನರು ಗಾಯಗೊಂಡಿದ್ದರು.
ನಾಗೌರ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದ್ದು, ಧಾರ್ಮಿಕ ಪ್ರವಾಸದಿಂದ ಹಿಂತಿರುಗುತ್ತಿದ್ದ ಟೆಂಪೋ ಟ್ರಾವೆಲರ್ ಮಿನಿ ಬಸ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಎರಡೂ ವಾಹನಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಸ್ಥಳದಲ್ಲಿ ಭೀತಿ ಮತ್ತು ಅವ್ಯವಸ್ಥೆ ಉಂಟಾಯಿತು.













