Last Updated:
Social Media Ban: ಇನ್‌ಸ್ಟಾ, ಫೇಸ್‌ಬುಕ್‌ಗೆ ಗುಡ್‌ಬೈ! 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ ಮಾಡಿದ ಸರ್ಕಾರ; ಎಲ್ಲಿ ಗೊತ್ತಾ?
ಲಂಡನ್ (ಬ್ರಿಟನ್): ಸ್ಕ್ರೀನ್ ಅಡಿಕ್ಷನ್, ಸೈಬರ್ ಬುಲ್ಲಿಯಿಂಗ್ (Cyberbullying), ಆನ್‌ಲೈನ್ ಶೋಷಣೆ ಮತ್ತು ಮಕ್ಕಳ ಖಿನ್ನತೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳ ಸರ್ಕಾರಗಳು (Government) ಮಕ್ಕಳಿಗೆ ಅದರಲ್ಲೂ, ವಿಶೇಷವಾಗಿ 16 ವಯಸ್ಸಿನೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನ (Social Media) ನಿಷೇಧಿಸುತ್ತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಬ್ರಿಟನ್ (Britain)!
ಹೌದು, ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ಬದುಕಿನ ಅವಿಭಾಜ್ಯ ಅಂಗವಾಗಿವೆ. ಆದರೆ, ಇವುಗಳ ಅತಿಯಾದ ಬಳಕೆ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಾಗಾಗಿ, ವಿಶ್ವದಾದ್ಯಂತ ಹಲವು ದೇಶಗಳು ಈ ಕುರಿತು ಕಠಿಣ ಹೆಜ್ಜೆ ಇಡುತ್ತಿವೆ. ಇತ್ತೀಚೆಗೆ ಬ್ರಿಟನ್ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ.
ಈ ಕುರಿತು ಮಾತನಾಡಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು, “ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮಗಳಿಗೆ ವ್ಯಸನಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಗಂಟೆಗಟ್ಟಲೆ ಮೊಬೈಲ್ ಸ್ಕ್ರೋಲಿಂಗ್ ಮಾಡುವ ಅಭ್ಯಾಸವು ಮಕ್ಕಳನ್ನು ಆಟ, ಅಧ್ಯಯನ, ಕುಟುಂಬ ಮತ್ತು ನೈಜ ಸಾಮಾಜಿಕ ಜೀವನದಿಂದ ದೂರವಿಡುತ್ತಿದೆ. ಇದು ಕೇವಲ ಸ್ಕ್ರೀನ್ ಟೈಮ್ ಮಾತ್ರವಲ್ಲ, ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಸುರಕ್ಷತೆಯ ಪ್ರಶ್ನೆಯೂ ಆಗಿದೆ. ಹಾಗಾಗಿ, ಈ ಮಹತ್ವದ ನಿರ್ಧಾರ ಕೈಗೊಂಡಿದೆ” ಎಂದು ತಿಳಿಸಿದರು.
ಕೇವಲ ಬ್ರಿಟನ್ ಮಾತ್ರವಲ್ಲದೆ, ವಿಶ್ವದ ಹಲವು ರಾಷ್ಟ್ರಗಳು ಈಗಾಗಲೇ ಇಂತಹ ನಿರ್ಧಾರಗಳನ್ನು ಕೈಗೊಂಡಿವೆ:
- ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಮಲೇಷ್ಯಾ ಮತ್ತು ಇಂಡೋನೇಷ್ಯಾ: ಈ ದೇಶಗಳೂ ಸಹ ಕಟ್ಟುನಿಟ್ಟಾದ ವಯಸ್ಸಿನ ತಪಾಸಣೆಯ ಮೂಲಕ 16 ವರ್ಷದೊಳಗಿನವರ ಡಿಜಿಟಲ್ ಬಳಕೆಯನ್ನು ನಿಯಂತ್ರಿಸುತ್ತಿವೆ.
- ಯುರೋಪಿಯನ್ ಒಕ್ಕೂಟ: ಫ್ರಾನ್ಸ್ ಮತ್ತು ಡೆನ್ಮಾರ್ಕ್ ದೇಶಗಳು 15 ವರ್ಷದೊಳಗಿನ ಮಕ್ಕಳಿಗೆ ನಿಷೇಧ ಹೇರಲು ಕಾನೂನು ರೂಪಿಸುತ್ತಿದ್ದರೆ, ಸ್ಪೇನ್ ಮತ್ತು ಗ್ರೀಸ್ ದೇಶಗಳು ಶೀಘ್ರದಲ್ಲೇ ಈ ಹಾದಿ ಹಿಡಿಯುವುದಾಗಿ ಘೋಷಿಸಿವೆ.
- ಜಪಾನ್: ಇತ್ತೀಚೆಗೆ ಸರ್ಕಾರಿ ಸಮಿತಿಯು ಸಾಮಾಜಿಕ ಜಾಲತಾಣದ ಕಂಪನಿಗಳಿಗೆ ಕಠಿಣ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುವ ಕೆಲವು ವೈಶಿಷ್ಟ್ಯಗಳನ್ನು ನಿಷೇಧಿಸಲು ಶಿಫಾರಸು ಮಾಡಿದೆ.
ಮಕ್ಕಳನ್ನು ಸೈಬರ್ ಬೆದರಿಕೆ, ಆನ್‌ಲೈನ್ ವಂಚನೆಗಳು ಮತ್ತು ಅಶ್ಲೀಲ ವಿಷಯಗಳಿಂದ ರಕ್ಷಿಸುವುದು ಈ ನಿಷೇಧದ ಮುಖ್ಯ ಉದ್ದೇಶವಾಗಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಖಿನ್ನತೆ, ಏಕಾಗ್ರತೆಯ ಕೊರತೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ನಿಷೇಧವು ಮಕ್ಕಳು ವರ್ಚುವಲ್ ಪ್ರಪಂಚದಿಂದ ಹೊರಬಂದು, ದೈಹಿಕ ಆಟೋಟಗಳು ಮತ್ತು ನೈಜ ಸಾಮಾಜಿಕ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ, ಬ್ರಿಟನ್ ಮತ್ತು ಇತರ ದೇಶಗಳ ಈ ಹೆಜ್ಜೆಯು ಭವಿಷ್ಯದ ಪೀಳಿಗೆಯನ್ನು ಡಿಜಿಟಲ್ ಅಪಾಯಗಳಿಂದ ರಕ್ಷಿಸುವಲ್ಲಿ ಅತ್ಯಂತ ನಿರ್ಣಾಯಕ ಮತ್ತು ಸ್ವಾಗತಾರ್ಹ ನಿರ್ಧಾರವಾಗಿದೆ.













