Last Updated:
ಪೊಲೀಸರ ಪ್ರಕಾರ, ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಾರು 400 ಮೀಟರ್ ಆಳದ ಕಂದಕಕ್ಕೆ ಉರುಳಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಚಂಬಾ: ಚಾಲಕನ ನಿಯಂತ್ರಣ ತಪ್ಪಿದ ವಾಹನವೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ (Road Accident) ಒಂದೇ ಕುಟುಂಬದ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದು, ವಾಹನವೊಂದು ಕಂದಕಕ್ಕೆ ಬಿದ್ದು ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪಠಾಣ್ಕೋಟ್-ಚಂಬಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನಿಖೇತ್ ಪಟ್ಟಣದ ಲಹಾದ್ ಬಳಿ ಸೋಮವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಆಸ್ಪತ್ರೆಯಲ್ಲಿ ಮಗುವಿನ ತಪಾಸಣೆಯ ನಂತರ ಕುಟುಂಬವು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐ)ಯಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
‘ಕಾರ್ನಲ್ಲಿದ್ದ ಕುಟುಂಬವು ಚಂಡೀಗಢದ ಪಿಜಿಐನಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ’ ಎಂದು ಗ್ರಾಮ ಪಂಚಾಯತ್ ಗೆಹ್ರಾದ ಪ್ರಧಾನ್ ಇಂದು ಹೇಳಿದರು. ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಪುಟ್ಟ ಮಗು ಮತ್ತು ಮಗುವಿನ ಕುಟುಂಬ ಸದಸ್ಯರಾದ ವಚನ್ ಸಿಂಗ್ (60), ರಿಪುನ್ ಸಿಂಗ್ (30), ರಿಂಪಿ ದೇವಿ ಮತ್ತು ಕೀರ್ತಿ (23) ಎಂದು ಗುರುತಿಸಲಾಗಿದೆ.
ಈ ಕುಟುಂಬವು ಚಂಬಾದ ಗೆಹ್ರಾ ಗ್ರಾಮಕ್ಕೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಾರು 400 ಮೀಟರ್ ಆಳದ ಕಂದಕಕ್ಕೆ ಉರುಳಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
‘ಸೋಮವಾರ ತಡರಾತ್ರಿ ಈ ಅಪಘಾತ ನಡೆದಿದೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಡಾಲ್ಹೌಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ’ ಎಂದು ಚಂಬಾ ಎಸ್ಪಿ ವಿಜಯ್ ಕುಮಾರ್ ಸಕ್ಲಾನಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸ್ಥಳೀಯ ನಿವಾಸಿಗಳು ಸಹ ಪೊಲೀಸರು ಮತ್ತು ರಕ್ಷಣಾ ತಂಡಗಳಿಗೆ ಸಹಾಯ ಮಾಡಿದರು.
New Delhi,Delhi














