Last Updated:
ಈ ಚಿತ್ರದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ನಟಿ ರಶ್ಮಿಕಾ ಮಂದಣ್ಣ ನಿರ್ವಹಿಸಲಿದ್ದಾರೆ ಎಂಬ ಘೋಷಣೆ ಈಗಾಗಲೇ ಕುತೂಹಲ ಹೆಚ್ಚಿಸಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ (M.S. Subbulakshmi) ಅವರಂತಹ ಮಹಾನ್ ಸಂಗೀತ ಸಾಧಕಿಯ ಜೀವನ ಬೆಳ್ಳಿತೆರೆಗೆ ಬರುತ್ತಿದೆ ಎಂಬ ಸುದ್ದಿ ಸಂಗೀತ ಮತ್ತು ಸಿನಿಮಾ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಭಾರತದ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಜೀವನಾಧಾರಿತ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಮಹತ್ವದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜರಲ್ಲಿ ಒಬ್ಬರಾದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿ ಜೀವನಚರಿತ್ರೆಯ ಚಿತ್ರ ನಿರ್ಮಾಣವಾಗುತ್ತಿದೆ. ಚೆನ್ನೈನ ಪ್ರತಿಷ್ಠಿತ ಸಂಗೀತ ಅಕಾಡೆಮಿಯಲ್ಲಿ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಯ ಘೋಷಣೆ ಮಾಡಲಾಗಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ ತಮ್ಮ ಸಂಗೀತ ಪ್ರತಿಭೆಯಿಂದ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಸಂಗೀತ ಪಯಣ, ವೈಯಕ್ತಿಕ ಬದುಕು, ಕಲಾ ಕ್ಷೇತ್ರದಲ್ಲಿನ ಸಾಧನೆ ಮತ್ತು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆಯಲಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕಾಗಿ ಆರಂಭದಲ್ಲಿ ಹಲವು ಜನಪ್ರಿಯ ನಟಿಯರ ಹೆಸರುಗಳು ಕೇಳಿಬಂದಿದ್ದವು. ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಮತ್ತು ಕೀರ್ತಿ ಸುರೇಶ್ ಅವರ ಹೆಸರುಗಳು ಕೂಡ ಈ ಪಾತ್ರದ ಆಯ್ಕೆಯ ಪಟ್ಟಿಯಲ್ಲಿದ್ದವು ಎಂಬ ವರದಿಗಳು ಹರಿದಾಡಿದ್ದವು. ಆದರೆ ಅಂತಿಮವಾಗಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ರಶ್ಮಿಕಾ ಸದ್ಯ ದಕ್ಷಿಣ ಭಾರತ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತೀಯ ಸಂಗೀತ ಲೋಕದ ದಿಗ್ಗಜೆಯ ಪಾತ್ರವನ್ನು ಒಪ್ಪಿಕೊಂಡಿರುವುದು ಅವರ ವೃತ್ತಿಜೀವನದಲ್ಲೇ ವಿಭಿನ್ನ ಹೆಜ್ಜೆಯಾಗಬಹುದು.
ಚಿತ್ರದ ಅಧಿಕೃತ ಕಾರ್ಯಕ್ರಮ ಸೆಪ್ಟೆಂಬರ್ 16ರಂದು ಚೆನ್ನೈನಲ್ಲಿ ನಡೆಯಲಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಚಿತ್ರದ ಕುರಿತು ಇನ್ನಷ್ಟು ಮಾಹಿತಿಗಳು ಹೊರಬರುವ ನಿರೀಕ್ಷೆಯಿದೆ. ಭಾರತೀಯ ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.














